ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ!...ತಪ್ಪು ನಕ್ಷೆ ಪ್ರದರ್ಶಿಸಿದ ಬಾಂಗ್ಲಾ ಮಾಜಿ ರಾಯಭಾರಿಗೆ ಕ್ಲಾಸ್​ ತೆಗೆದುಕೊಂಡ ಇಂಡಿಯನ್ ಡಿಪ್ಲೊಮ್ಯಾಟ್ | Pooja Kumari Jha

Pooja Kumari Jha | ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ!...ತಪ್ಪು ನಕ್ಷೆ ಪ್ರದರ್ಶಿಸಿದ ಬಾಂಗ್ಲಾ ಮಾಜಿ ರಾಯಭಾರಿಗೆ ಕ್ಲಾಸ್​ ತೆಗೆದುಕೊಂಡ ಇಂಡಿಯನ್ ಡಿಪ್ಲೊಮ್ಯಾಟ್
Pooja Kumari Jha | ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ!...ತಪ್ಪು ನಕ್ಷೆ ಪ್ರದರ್ಶಿಸಿದ ಬಾಂಗ್ಲಾ ಮಾಜಿ ರಾಯಭಾರಿಗೆ ಕ್ಲಾಸ್​ ತೆಗೆದುಕೊಂಡ ಇಂಡಿಯನ್ ಡಿಪ್ಲೊಮ್ಯಾಟ್
Published on
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಸೆಮಿನಾರ್​​ನಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ತಪ್ಪಾಗಿ ಬಿಂಬಿಸುವ ನಕ್ಷೆಯನ್ನು (ಮ್ಯಾಪ್) ಪ್ರದರ್ಶಿಸಿದ್ದಕ್ಕೆ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಕುಮಾರಿ ಝಾ (Pooja Kumari Jha) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ ಎಂದು ಅವರು ವೇದಿಕೆಯಲ್ಲೇ ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಅಂಡ್ ಸ್ಟ್ರಾಟೆಜಿಕ್ ಸ್ಟಡೀಸ್ ಆಯೋಜಿಸಿದ್ದ ಸಾರ್ಕ್ ಪುನಶ್ಚೇತನ: ಪ್ರಾದೇಶಿಕ ಸಮಗ್ರತೆ ಮತ್ತು ನಂಬಿಕೆ ಮರುಸ್ಥಾಪನೆ ವಿಷಯದ ಮೇಲಿನ ವಿಚಾರಸಂಕಿರಣದಲ್ಲಿ ಈ ಘಟನೆ ನಡೆದಿದೆ.

ಘಟನೆಯ ವಿವರ

ಭಾರತದಲ್ಲಿ ಬಾಂಗ್ಲಾದೇಶದ ಹೈಕಮಿಷನರ್ ಆಗಿ (2009-2014) ಸೇವೆ ಸಲ್ಲಿಸಿದ್ದ ಅಹಮದ್ ತಾರಿಕ್ ಕರೀಮ್ ಅವರು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸುತ್ತಿದ್ದ ಪ್ರಸಂಟೇಷನ್‌ನಲ್ಲಿ ಭಾರತದ ಜಮ್ಮು-ಕಾಶ್ಮೀರ ಭಾಗವನ್ನು ತಪ್ಪಾಗಿ ತೋರಿಸಲಾಗಿತ್ತು. ಇದನ್ನು ಸಭೆಯಲ್ಲಿದ್ದ ಢಾಕಾದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಕುಮಾರಿ ಝಾ ತಕ್ಷಣವೇ ಬೆಟ್ಟು ಮಾಡಿ ತೋರಿಸಿದರು. ಇಲ್ಲಿ ಪ್ರದರ್ಶಿಸಲಾದ ಭಾರತದ ನಕ್ಷೆಯು ತಪ್ಪಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪೂಜಾ ನೇರವಾಗಿಯೇ ಆಕ್ಷೇಪ ಎತ್ತಿದರು.
ಕರೀಮ್ ಸಮಜಾಯಿಷಿ & ಭಾರತೀಯ ಅಧಿಕಾರಿಯ ಕಡಕ್ ಪ್ರತ್ಯುತ್ತರ
ಇದಕ್ಕೆ ಸ್ಪಷ್ಟನೆ ನೀಡಲು ಯತ್ನಿಸಿದ ತಾರಿಕ್ ಕರೀಮ್, ಈ ನಕ್ಷೆಯನ್ನು ಕೇವಲ ಪ್ರಸ್ತುತಪಡಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆಯೇ ಹೊರತು ನೈಜ ಗಡಿಗಳನ್ನು ತೋರಿಸಲು ಅಲ್ಲ ಎಂದರು. ಅವರ ಸಮಜಾಯಿಷಿಗೆ ಪ್ರತ್ಯುತ್ತರವಾಗಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಪೂಜಾ ಕುಮಾರಿ, ನಿಮ್ಮ ವಿವರಣೆ ನನಗೆ ಅರ್ಥವಾಯಿತು ಸರ್, ಆದರೆ ಜಮ್ಮು ಮತ್ತು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ. ಇಲ್ಲಿ ಅದನ್ನು ತಪ್ಪಾಗಿ ಚಿತ್ರಿಸಲಾಗಿದೆ, ಹಾಗಾಗಿ ನಾನು ಅದನ್ನು ನಿಮ್ಮ ಗಮನಕ್ಕೆ ತರಬಯಸಿದೆ ಎಂದರು.
ಇದಾದ ಬಳಿಕ ಅವರು ಭಾರತೀಯ ಹೈಕಮಿಷನ್ ಅಧಿಕಾರಿ ಎಂದು ತಿಳಿಯುತ್ತಿದ್ದಂತೆ, ನಿಮ್ಮ ಅಂಶವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕರೀಮ್ ವಿಷಯ ಮುಕ್ತಾಯಗೊಳಿಸಿ ತಮ್ಮ ಭಾಷಣ ಮುಂದುವರಿಸಿದರು.

ಕಾರ್ಯಕ್ರಮದಲ್ಲಿದ್ದ ಪ್ರಮುಖರು

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಓಬೇದ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಪ್ರಸ್ತುತಿಯಲ್ಲಿ ಮಾತನಾಡಿದ ಕರೀಮ್, ದಕ್ಷಿಣ ಏಷ್ಯಾದ ದೇಶಗಳು ವಸಾಹತುಶಾಹಿ ಆಡಳಿತದ ಗಡಿ ವಿಭಜನೆಯಿಂದಾಗಿ ಗಡಿ ಹಾಗೂ ಪ್ರಾದೇಶಿಕ ಭದ್ರತೆಯ ಆತಂಕಗಳನ್ನು ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ವಸಾಹತುಶಾಹಿಯು ಒಂದಾಗಿದ್ದ ಕುಟುಂಬಗಳು, ನದಿಗಳು, ರೈಲ್ವೆಗಳು ಹಾಗೂ ಸಂಸ್ಕೃತಿಯನ್ನು ವಿಭಜಿಸಿ, ದೈನಂದಿನ ಸಂಚಾರವನ್ನು ಪಾಸ್‌ಪೋರ್ಟ್, ವೀಸಾ ಮತ್ತು ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡಿತು ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net