ಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಪತನ...ಏಳು ಜೀವಗಳು ಬಲಿ! | Air Ambulance

 Air Ambulance
Air Ambulance
Published on
ರಾಂಚಿ: ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಏರ್ ಆಂಬ್ಯುಲೆನ್ಸ್‌ ( Air Ambulance) ದುರಂತದಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದು, ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಕುರಿತಾದ ಮಾಹಿತಿಗಳನ್ನು ದೃಢಪಡಿಸಿದ್ದಾರೆ.
ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7.11 ಕ್ಕೆ ವಿಮಾನ ಹೊರಟ ಸ್ವಲ್ಪ ಸಮಯದ ಬಳಿಕ ಸಿಮಾರಿಯಾ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಮಾರಕ ಅಪಘಾತಕ್ಕೆ ಗುಡುಗು ಸಹಿತ ಮಳೆ ಕಾರಣವಾಗಿರಬಹುದು ಎಂದು ಛತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಜನರನ್ನು ಪತ್ತೆಹಚ್ಚಲಾಗಿದೆ ಎಂದು ಎಸ್‌ಡಿಪಿಒ ಶುಭಂ ಖಂಡೇಲ್ವಾಲ್ ತಿಳಿಸಿದ್ದಾರೆ. ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಹೆಸರಿಸಲಾಗಿದೆ.
ಈ ವಿಮಾನವು ದೆಹಲಿ ಮೂಲದ ನಾನ್-ಶೆಡ್ಯೂಲ್ಡ್ ಆಪರೇಟರ್ ರೆಡ್‌ಬರ್ಡ್‌ಗೆ ಸೇರಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕಂಪನಿಯು ಅಪಘಾತಕ್ಕೀಡಾದ ವಿಮಾನವೂ ಸೇರಿದಂತೆ ಆರು ವಿಮಾನಗಳನ್ನು ನಿಭಾಯಿಸುತ್ತಿದೆ.

ಡಿಜಿಸಿಎ ಹೇಳಿದ್ದೇನು..?

ಅಪಘಾತದ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರತಿಕೂಲ ಹವಾಮಾನದಿಂದಾಗಿ ವಿಮಾನವು ರಾಡಾರ್ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವಾಯುಯಾನ ನಿಯಂತ್ರಣ ಸಂಸ್ಥೆ ತಿಳಿಸಿದೆ. ಘಟನೆಯ ತನಿಖೆಗಾಗಿ ಎಎಐಬಿ ತಂಡವನ್ನು ಕಳುಹಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net