ಪೋಲಿಯೊ ಗೆದ್ದು ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಝಂಡು ಹಿಂದಿದೆ ಕಣ್ಣೀರಿನ ಕಥೆ | Jhandu Kumar

ಕಾಮನ್​ವೆಲ್ತ್​ ಗೇಮ್ಸ್​ನ ಪ್ಯಾರಾ ಪವರ್​ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಝಂಡು ಕುಮಾರ್​
ಕಾಮನ್​ವೆಲ್ತ್​ ಗೇಮ್ಸ್​ನ ಪ್ಯಾರಾ ಪವರ್​ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಝಂಡು ಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಪ್ಯಾರಾ ಪವರ್​ಲಿಫ್ಟಿಂಗ್ ಸರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ
  • ವಿದೇಶಿ ನೆಲದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಿಹಾರದ ಝಂಡು ಕುಮಾರ್​
Jhandu Kumar: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಪ್ಯಾರಾ ಪವರ್​ಲಿಫ್ಟಿಂಗ್ ಸರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕಂಚು ಗೆದ್ದ ಬಿಹಾರದ ಝಂಡು ಕುಮಾರ್, ವಿದೇಶಿ ನೆಲದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದಾರೆ. ​
ಶುಕ್ರವಾರ (ಜು.24) ಸ್ಕಾಟ್​ಲ್ಯಾಂಡ್​ನ ಗ್ಲಾಸ್​ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್​ನ ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಝಂಡು, ಕಂಚಿನ ಪದಕವನ್ನು ಪಡೆಯುವ ಮೂಲಕ ಪೋಲಿಯೊ, ಬಡತನ ಮತ್ತು ವರ್ಷಗಳ ಕೂಲಿ ಕೆಲಸಗಳನ್ನು ಮೀರಿ ಇಂದು ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಮೊದಲ ಪದಕದ ಹಿಂದೆ ಒಬ್ಬ ಸಾಮಾನ್ಯ ಯುವಕನ ಅಸಾಧಾರಣ ಪರಿಶ್ರಮಕ್ಕೆ ಇಡೀ ದೇಶವೇ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದೆ.

ಆಟೋ ಡ್ರೈವ್​, ತರಕಾರಿ ಮಾರಾಟ

ಕಂಚು ಪದಕ ಗೆದ್ದ ಝುಂಡು ಕುಮಾರ್ ಅವರ​ ಹಿಂದೆ ಕಣ್ಣೀರು ಒರೆಸುವ ಕಥೆಯೇ ಅಡಗಿದೆ. ಬಿಹಾರದ ರಸ್ತೆಬದಿಯಲ್ಲಿ ಆಲೂಗಡ್ಡೆ ಮತ್ತು ಒಂದಷ್ಟು ತರಕಾರಿಯನ್ನು ಮಾರಾಟ ಮಾಡುವ ವ್ಯಾಪಾರಿಯ ಪುತ್ರ ಈ ಝಂಡು. ಪಾಲಕರ ಜೊತೆ ತರಕಾರಿ ಮಾರಿಕೊಂಡು, ಆಟೋ ರಿಕ್ಷಾ ಓಡಿಸಿಕೊಂಡಿದ್ದ 28 ವರ್ಷದ ಝಂಡು ಕುಮಾರ್, ಗ್ಲ್ಯಾಸ್ಗೋದಲ್ಲಿ ನಡೆದ ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು ಹೆತ್ತವರ ಸಂತಸಕ್ಕೆ ಸಾಕ್ಷಿಯಾಗಿದ್ದಾರೆ.

ಅಮೋಘ ಪ್ರದರ್ಶನ

ಭಾರತವು ಲೈಟ್‌ವೇಟ್ ವಿಭಾಗದಲ್ಲಿ ಪದಕವನ್ನು ಕಳೆದುಕೊಂಡು ನಾಲ್ಕನೇ ಸ್ಥಾನ ಪಡೆದಿತ್ತು. ಆದರೆ. ಝಂಡು ಕುಮಾರ್ ಅವರ ಅಮೋಘ ಪ್ರದರ್ಶನವು ಭಾರತಕ್ಕೆ ಸಂಭ್ರಮದ ಛಾಯೆ ನೀಡಿತು. ವಿಶ್ವ ದರ್ಜೆಯ ಲಿಫ್ಟರ್‌ಗಳು ಪೈಪೋಟಿ ನಡೆಸಿದ ಈ ಸ್ಪರ್ಧೆಯಲ್ಲಿ ಝಂಡು ಅವರ ಶ್ರೇಷ್ಠ ಪ್ರದರ್ಶನಕ್ಕೆ ಕಂಚಿನ ಪದಕ ಒಲಿಯಿತು. ಆರಂಭದಿಂದಲೇ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿದ ಅವರು, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿ 190 ಕೆಜಿ ಎತ್ತುವ ಮೂಲಕ ಸ್ಪರ್ಧೆಯ ಅರ್ಧಕ್ಕಿಂತ ಹೆಚ್ಚು ಸಮಯ 130.9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. ಇದು ಅವರ ವೈಯಕ್ತಿಕ ಅತ್ಯುತ್ತಮ ತೂಕಕ್ಕಿಂತ 8 ಕೆಜಿ ಕಡಿಮೆಯಿದ್ದರೂ, ಪ್ರದರ್ಶನವು ಅವರ ಸಹ ಸ್ಪರ್ಧಿಗಳ ಮೇಲೆ ಹೆಚ್ಚಿನ ಒತ್ತಡ ತಂದೊಡ್ಡಿತು. ಕೊನೆಯ ಪ್ರಯತ್ನದಲ್ಲಿ, ಅವರು ದಾಖಲೆಯ 196 ಕೆಜಿ ತೂಕಕ್ಕಾಗಿ ಪ್ರಯತ್ನಿಸಿದರು ಮತ್ತು ಬಾರ್ ರ್ಯಾಕ್‌ಗೆ ಬಡಿದರು. ಇದು ಸಮಯದ ದೋಷಕ್ಕೆ ಕಾರಣವಾಯಿತು ಮತ್ತು ಅವರು ಅವಕಾಶವನ್ನು ಕಳೆದುಕೊಂಡರು.
ಆದಾಗ್ಯೂ, ಝಂಡು ಗಳಿಸಿದ 130.9 ಅಂಕಗಳು ಅವರಿಗೆ ಕಂಚಿನ ಪದಕವನ್ನು ಖಚಿತಪಡಿಸಿತು. ತಮ್ಮ ಗೆಲುವಿನ ಬಗ್ಗೆ ಮಾತನಾಡಿ, ಭಾರತಕ್ಕೆ ಮೊದಲ ಪದಕವನ್ನು ಗೆದ್ದಿದ್ದಕ್ಕೆ ತುಂಬಾ ಹೆಮ್ಮೆಯಿದೆ ಮತ್ತು ತ್ರಿವರ್ಣ ಧ್ವಜವನ್ನು ನೋಡಿದಾಗ ನನ್ನ ಸಂತೋಷ ಮುಗಿಲು ಮುಟ್ಟಿತು. ಈ ಅನುಭವ ವಿವರಿಸುವುದು ತುಂಬಾ ಕಷ್ಟ. ಈ ಖುಷಿ ಕ್ಷಣವನ್ನು ಮೊದಲು ನನ್ನ ಹೆತ್ತವರೊಂದಿಗೆ ಮತ್ತು ಬಾಲ್ಯದಿಂದಲೂ ಟ್ರೇನಿಂಗ್ ಮಾಡುತ್ತಿದ್ದ ಗೌತಮ್ ಅಣ್ಣನಿಗೆ ತಿಳಿಸುತ್ತೇನೆ ಎಂದು ಭಾವುಕರಾದರು.

ಯಾರು ಈ 'ಕಂಚು' ಗೆದ್ದ ಯುವಕ

ಬಿಹಾರದ ನಳಂದ ಜಿಲ್ಲೆಯ ಹರ್ನೌತ್ ಮೂಲದ ಝಂಡು, ಹುಟ್ಟಿನಿಂದಲೇ ಪೋಲಿಯೊ ಪೀಡಿತರಾಗಿದ್ದರು. ರಸ್ತೆಬದಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಮಾರುವ ತನ್ನ ತಂದೆಗೆ ಬೆಂಬಲವಾಗಿ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಇ-ರಿಕ್ಷಾ ಓಡಿಸಲು ಪ್ರಾರಂಭಿಸಿದರು. 2017ರಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶಾಟ್‌ಪುಟ್ ಮತ್ತು ಡಿಸ್ಕಸ್ ಥ್ರೋ ಮೂಲಕ ತಮ್ಮ ಕ್ರೀಡಾ ಪ್ರಯಾಣವನ್ನು ಪ್ರಾರಂಭಿಸಿದ ಅವರು, ಜಿಮ್‌ನಲ್ಲಿ ಅಭ್ಯಾಸ ಮಾಡುವುದರ ಜತೆ ಜತೆಯಲ್ಲೇ ಪವರ್‌ಲಿಫ್ಟಿಂಗ್‌ನತ್ತ ಒಲವು ತೋರಿದರು.

2023ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಹೋಗಲು ಹಣವಿಲ್ಲದ ಕಾರಣ, ಅವರು ತಮ್ಮ ಇ-ರಿಕ್ಷಾವನ್ನು ಸಹ ಮಾರಿದರು. ಆದರೆ, ದುರಾದೃಷ್ಟವಶಾತ್​ ಆ ಟೂರ್ನಿಯಲ್ಲಿ ಅವರು ಗೆಲುವು ಸಾಧಿಸಲು ವಿಫಲವಾದರು. ಇಷ್ಟಕ್ಕೆ ಎದೆಗುಂದದ ಝಂಡು, ನಿರಂತರವಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿದರು. ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೇತ ರಾಜಿಂದರ್ ಸಿಂಗ್ ರಾಹೇಲು, ಬಿಹಾರಿ ಯುವಕನ ಪ್ರತಿಭೆಯನ್ನು ಗುರುತಿಸಿ ಗಾಂಧಿನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರದಲ್ಲಿ ಅವರಿಗೆ ತರಬೇತಿ ನೀಡಿದರು. ಅಲ್ಲಿಂದ, ಝಂಡು ಹಿಂತಿರುಗಿ ನೋಡಿದ್ದೇ ಇಲ್ಲ.

72 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಿದರು. ಮತ್ತು 2025ರ ಬೀಜಿಂಗ್ ವಿಶ್ವಕಪ್ ಮತ್ತು 2026ರ ಏಷ್ಯಾ ಹಾಗೂ ಓಷಿಯಾನಿಯಾ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನು ಗೆದ್ದರು. ಈಗ, ಕಾಮನ್‌ವೆಲ್ತ್​ನಲ್ಲಿ ಭಾರತಕ್ಕೆ ಮೊದಲ ಪದಕ ಹಾಗೂ ತಮ್ಮ ತೆಕ್ಕೆಗೆ ಮತ್ತೊಂದು ಕಂಚನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ನಳಂದ ಯುವಕ, 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ಗೆ ಲಗ್ಗೆಯಿಡಲು ಕಣ್ಣಿಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net