ಅಜಿತ್ ಪವಾರ್ ಅಂತಿಮ ಯಾತ್ರೆಯಲ್ಲಿ ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಸರಗಳ್ಳತನ! ಜನಸಾಗರದ ಲಾಭ ಪಡೆದ ಖದೀಮರು.. Ajit Pawar

Ajit Pawar
Ajit Pawar
Published on
ಮಹಾರಾಷ್ಟ್ರ: ( Ajit Pawar ) ಪ್ರೀತಿಯ ನಾಯಕ "ಅಜಿತ್ ದಾದಾ" ಅವರಿಗೆ ಕಣ್ಣೀರಿನ ವಿದಾಯ ಹೇಳುತ್ತಿದ್ದ ಸಂದರ್ಭವನ್ನು ಬಳಸಿಕೊಂಡ ಖದೀಮರ ತಂಡವೊಂದು ಭಾರಿ ಪ್ರಮಾಣದ ಚಿನ್ನಾಭರಣವನ್ನು ಲೂಟಿ ಮಾಡಿದೆ. ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನಡೆದ ಅಂತಿಮ ದರ್ಶನದ ವೇಳೆ ಈ ಘಟನೆ ನಡೆದಿದೆ.
ಜನವರಿ 28 ರಂದು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಅಂತಿಮ ನಮನ ಸಲ್ಲಿಸಲು ಬಾರಾಮತಿಗೆ ಆಗಮಿಸಿದ್ದರು.
ಈ ಬೃಹತ್ ಜನಸಂದಣಿಯ ಲಾಭ ಪಡೆದುಕೊಂಡ ಕಳ್ಳರ ತಂಡವೊಂದು ಜನರನ್ನು ಗುರಿಯಾಗಿಸಿಕೊಂಡಿದೆ. ಸುಮಾರು 15 ಜನರ ಚಿನ್ನದ ಸರಗಳನ್ನು ಕಳ್ಳತನ ಮಾಡಿದ್ದಾರೆ. ಕದ್ದ ಆಭರಣಗಳ ಮೌಲ್ಯ ಸುಮಾರು 25 ರಿಂದ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕೆಲವು ಶಂಕಿತ ಕಳ್ಳರನ್ನು ನಾಗರಿಕರು ರೆಡ್ ಹ್ಯಾಂಡ್ ಆಗಿ ಹಿಡಿದರು ಮತ್ತು ಕೆಲವು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದರು.
ಆ ದಿನ ಬಾರಾಮತಿಯಲ್ಲಿ ಸುಮಾರು 8,000 ಪೊಲೀಸರನ್ನು ನಿಯೋಜಿಸಲಾಗಿತ್ತು. ಭಾರೀ ಪೊಲೀಸ್ ಭದ್ರತೆಯ ಹೊರತಾಗಿಯೂ, ಇಷ್ಟೊಂದು ದೊಡ್ಡ ಪ್ರಮಾಣದ ಕಳ್ಳತನ ಸಂಭವಿಸಿರುವುದು ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳೆದುಕೊಂಡ ಹಲವರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮೊಹಮ್ಮದ್ ಯೂನಸ್, ರಾಜ್‌ಕುಮಾರ್ ಅಠಾವಳೆ, ಎಜಾಜ್ ಮಿರಾವಾಲೆ, ಮೊಹಮ್ಮದ್ ಸಿರಾಜ್, ಬಾಲು ಬೋಟ್ರೆ ಮತ್ತು ಇತರ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.
ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ವಾತಾವರಣವು ಅತ್ಯಂತ ಭಾವನಾತ್ಮಕವಾಗಿತ್ತಾದರೂ, ಕಳ್ಳರು ಜನರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದರು. ಈ ಘಟನೆಯು ಬಾರಾಮತಿ ನಗರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ಪುಣೆಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ , ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net