Jayaraj-Benicks Custodial Death Case: ತಂದೆ-ಮಗನ ಲಾಕಪ್ ಡೆತ್ ಕೇಸ್; 9 ಪೊಲೀಸರಿಗೆ ಗಲ್ಲು ಶಿಕ್ಷೆ!

Jayaraj-Benicks Custodial Death Case
Jayaraj-Benicks Custodial Death Case
Published on
ಮಧುರೈ: ಆರು ವರ್ಷಗಳ ಹಿಂದೆ ಇಡೀ ದೇಶವನ್ನೇ ಉಲ್ಲೋಲ-ಕಲ್ಲೋಲಗೊಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವ್ಯಾಪಾರಿ ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಅವರ ಕಸ್ಟಡಿಯಲ್ ಡೆತ್ ಪ್ರಕರಣದಲ್ಲಿ(Jayaraj-Benicks Custodial Death Case) ಮಧುರೈ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಒಂಬತ್ತು ಪೊಲೀಸರಿಗೆ ನ್ಯಾಯಾಲಯವು ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಇದು ಕೇವಲ ಸಾವು ಮಾತ್ರವಲ್ಲ, "ಅಧಿಕಾರದ ಪರಮಾವಧಿ ದುರುಪಯೋಗ" ಎಂದು ಕಟುವಾಗಿ ಟೀಕಿಸಿದೆ. "ತಂದೆ ಮತ್ತು ಮಗನನ್ನು ವಿವಸ್ತ್ರಗೊಳಿಸಿ, ಬರ್ಬರವಾಗಿ ಥಳಿಸಲಾಗಿದೆ... ಇದರ ಬಗ್ಗೆ ಓದಿದರೆ ಹೃದಯವೇ ನಡುಗುತ್ತದೆ" ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಅನೇಕ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ, ಆದರೆ ಇಂತಹ ಕೃತ್ಯವೆಸಗುವವರಿಗೆ ಈ ತೀರ್ಪು ಪಾಠವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಏನಿದು ಭೀಕರ ಪ್ರಕರಣ?

2020ರ ಜೂನ್ 19 ರಂದು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಆರೋಪದ ಮೇಲೆ ಸತಾಂಕುಲಂ ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಬಂಧಿಸಿದ್ದರು. ಆದರೆ, ಮರುದಿನವೇ ಇಬ್ಬರೂ ಮೃತಪಟ್ಟಿದ್ದರು. ಪೊಲೀಸರು ರಾತ್ರಿಯಿಡೀ ಅವರನ್ನು ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಮೃತರ ದೇಹದ ಮೇಲೆ ಗುದನಾಳದಿಂದ ರಕ್ತಸ್ರಾವವಾದ ಗುರುತುಗಳು ಸೇರಿದಂತೆ ಗಂಭೀರ ಗಾಯಗಳಾಗಿದ್ದವು.

ಸಿಬಿಐ ತನಿಖೆ ಮತ್ತು ಗಲ್ಲು ಶಿಕ್ಷೆ

ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ತನಿಖೆಯ ವೇಳೆ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಲಾಗಿತ್ತು. ಆದರೆ, ಮಹಿಳಾ ಕಾನ್ಸ್ಟೇಬಲ್ ಒಬ್ಬರು ನೀಡಿದ ಸಾಕ್ಷ್ಯವು ಪ್ರಕರಣಕ್ಕೆ ತಿರುವು ನೀಡಿತ್ತು. ಠಾಣೆಯ ಲಠ್ಠಿ ಮತ್ತು ಟೇಬಲ್‌ಗಳ ಮೇಲೆ ರಕ್ತದ ಕಲೆಗಳಿದ್ದವು ಎಂದು ಅವರು ಸಾಕ್ಷಿ ನುಡಿದಿದ್ದರು. ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಲಾಗಿತ್ತು (ಒಬ್ಬರು ವಿಚಾರಣೆ ವೇಳೆ ಮೃತಪಟ್ಟಿದ್ದರು). ಉಳಿದ 9 ಮಂದಿಗೆ ಈಗ ಗಲ್ಲು ಶಿಕ್ಷೆ ವಿಧಿಸಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net