ಜಸ್ಪ್ರೀತ್ ಬುಮ್ರಾಗೆ ಜಾಕ್​ಪಾಟ್​..ಪಂದ್ಯ ಆಡದಿದ್ದರೂ ಸಿಕ್ಕಿದ್ದೇಗೆ ಆ ಸ್ಥಾನ..? | Jasprit Bumrah

Jasprit Bumrah | ಜಸ್ಪ್ರೀತ್ ಬುಮ್ರಾ
Jasprit Bumrah | ಜಸ್ಪ್ರೀತ್ ಬುಮ್ರಾ
Published on
Jasprit Bumrah: ಅದು ಟೆಸ್ಟ್ ಇರಲಿ, ಏಕದಿನ ಇರಲಿ ಅಥವಾ ಚುಟುಕು ಟಿ20 ಸಮರವೇ ಇರಲಿ... ಮೈದಾನದ ಆ ಕಡೆಯಿಂದ ಜಸ್ಪ್ರೀತ್ ಬುಮ್ರಾ ಓಡಿ ಬರುತ್ತಿದ್ದಾರೆ ಎಂದರೆ ಸಾಕು, ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ಸಣ್ಣ ನಡುಕ ಶುರುವಾಗುತ್ತದೆ. ಕ್ರೀಸ್‌ನಲ್ಲಿ ಎಂತಹ ದೈತ್ಯ ಬ್ಯಾಟರ್ ನಿಂತಿದ್ದರೂ ಬುಮ್ರಾ ಕೈಲಿ ಚೆಂಡಿದ್ದರೆ ಸಾಕು, ಸ್ಟಂಪ್‌ಗಳು ಹಾರುವುದರಲ್ಲಿ ಅನುಮಾನವೇ ಇಲ್ಲ. ಈಗ ಇದೇ 'ಯಾರ್ಕರ್ ಕಿಂಗ್' ಪಂದ್ಯಗಳನ್ನು ಆಡದಿದ್ದರೂ ಐಸಿಸಿ ಶ್ರೇಯಾಂಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ!
ಬುಮ್ರಾ ಸದ್ಯ ಹೆಚ್ಚು ಟಿ20 ಪಂದ್ಯಗಳನ್ನು ಆಡದಿದ್ದರೂ, ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೇಲಕ್ಕೇರುವ ಮೂಲಕ ತಮ್ಮ ಶ್ರೇಷ್ಟತೆಯನ್ನು ಸಾಬೀತುಪಡಿಸಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ ಬುಮ್ರಾ 5ನೇ ಸ್ಥಾನಕ್ಕೆ ಜಿಗಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಆಡದಿದ್ದರೂ ಸಿಕ್ಕಿದ್ದೇಗೆ ಐದನೇ ಸ್ಥಾನ..?

ಮಾರ್ಚ್ 8 ರಂದು ಟಿ20 ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಭಾರತ ತಂಡ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ, ಅಧಿಕೃತ ವೇಳಾಪಟ್ಟಿಯ ಪ್ರಕಾರ ಜುಲೈ ತಿಂಗಳವರೆಗೆ ಭಾರತ ಈ ಸ್ವರೂಪದಲ್ಲಿ ಆಡುತ್ತಿಲ್ಲ. ಹೀಗಿದ್ದರೂ ಬುಮ್ರಾ ರ‍್ಯಾಂಕಿಂಗ್‌ ವೃದ್ಧಿಯಾಗಲು ಮುಖ್ಯ ಕಾರಣ ರೇಟಿಂಗ್ ಪಾಯಿಂಟ್ಸ್ ಲೆಕ್ಕಾಚಾರ.
ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮಾತ್ರ ಟಿ20 ಸರಣಿಯಲ್ಲಿ ತೊಡಗಿದ್ದವು. ಈ ವೇಳೆ ಆಫ್ರಿಕಾದ ವೇಗಿ ಕಾರ್ಬಿನ್ ಬಾಷ್ ಐದು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳದ ಕಾರಣ ಅವರ ರೇಟಿಂಗ್ ಪಾಯಿಂಟ್‌ಗಳು ಕುಸಿದವು. ಇದರ ನೇರ ಲಾಭ ಬುಮ್ರಾಗೆ ಸಿಕ್ಕಿದ್ದು, 702 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅವರು ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ವಿಶ್ವಕಪ್ ಹೀರೋಗೆ ದಕ್ಕಿದ ಗೌರವ

ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಸ್ಪಿನ್​ ಮಾಂತ್ರಿಕ ವರುಣ್ ಚಕ್ರವರ್ತಿ ಅವರೊಂದಿಗೆ ಜಂಟಿಯಾಗಿ 14 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆ ಪ್ರದರ್ಶನದ ಫಲವೇ ಈಗ ಅವರನ್ನು ಅಗ್ರ 5ರ ಪಟ್ಟಿಯಲ್ಲಿ ಉಳಿಸಿದೆ.

ಮುಂದಿನ ದಿನಗಳಲ್ಲಿ ಟಿ20ಗೆ ಬುಮ್ರಾ ಬೈ-ಬೈ?

ಬುಮ್ರಾ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿಯೂ ಇದ್ದು, ಮುಂಬರುವ ತಿಂಗಳುಗಳಲ್ಲಿ ಅವರು ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರುವ ಸಾಧ್ಯತೆ ತುಂಬಾ ಕಮ್ಮಿ. ಇದಕ್ಕೆ ಕಾರಣ ವರ್ಕ್ ಲೋಡ್ ಮ್ಯಾನೇಜ್‌ಮೆಂಟ್. 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ ಆಯ್ಕೆದಾರರು, ಬುಮ್ರಾ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಟಿ20 ಸ್ವರೂಪದಿಂದ ಅವರಿಗೆ ಸುದೀರ್ಘ ವಿಶ್ರಾಂತಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಿಲಕ್ ವರ್ಮಾಗೂ ಲಕ್​

ಬೌಲಿಂಗ್‌ನಲ್ಲಿ ಬುಮ್ರಾ ಮಿಂಚಿದರೆ, ಇತ್ತ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯುವ ಪ್ರತಿಭೆ ತಿಲಕ್ ವರ್ಮಾ ಅದೃಷ್ಟ ಖುಲಾಯಿಸಿದೆ. ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದು ಪಾಯಿಂಟ್ಸ್ ಕಳೆದುಕೊಂಡಿದ್ದರಿಂದ, ತಿಲಕ್ ವರ್ಮಾ ಐಸಿಸಿ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net