ಗಂಟೆಗೆ 320 ಕಿ.ಮೀ ವೇಗ; ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ಬುಲೆಟ್​ ರೈಲಿನ ಹಿಂದಿದೆ ಜಪಾನ್​ ಸೀಕ್ರೆಟ್​ ಟೆಕ್ನಾಲಜಿ!

ಬುಲೆಟ್​ ರೈಲು
ಬುಲೆಟ್​ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಜಪಾನ್​ ಸೀಕ್ರೆಟ್​ ಟೆಕ್ನಾಲಜಿ
  • ಭರದಿಂದ ಸಾಗುತ್ತಿದೆ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ ಕೆಲಸ
  • ಈ ಬುಲೆಟ್ ರೈಲು ಹಳಿಯ ನಿರ್ಮಾಣದಲ್ಲಿ ವಿಶೇಷ ತಂತ್ರಜ್ಞಾನ ಬಳಕೆ
Bullet Train: ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನ ಕೆಲಸವು ಸದ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಪ್ರಯಾಣಿಕರ ಹೆಚ್ಚಿನ ಸಮಯವನ್ನು ಉಳಿಸಲಿದೆ ಎನ್ನಲಾಗಿದೆ.
ಪ್ರಸ್ತುತ, ಗುಜರಾತ್‌ನ ಸೂರತ್ ಬಳಿಯ ವಖ್ತಾನಾ ಗ್ರಾಮದಲ್ಲಿ ವಯಾಡಕ್ಟ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಬುಲೆಟ್ ರೈಲು ಹಳಿಯ ನಿರ್ಮಾಣದಲ್ಲಿ ವಿಶೇಷ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಇಂಜಿನಿಯರ್‌ಗಳು ಒಂದಷ್ಟು ಕುತೂಹಲಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಈಗ ಆ ತಂತ್ರಜ್ಞಾನದ ವಿಶೇಷತೆ ಏನು ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ಬುಲೆಟ್​ ವೇಗದ ಹಿಂದಿದೆ ಜಪಾನ್​ನ ರಹಸ್ಯ ಟೆಕ್ನಾಲಜಿ

ಬುಲೆಟ್ ರೈಲು ಹಳಿಯ ನಿರ್ಮಾಣದಲ್ಲಿ ಸಿಮೆಂಟ್ ಆಸ್ಫಾಲ್ಟ್ ಮಾರ್ಟರ್ (CAM) ಎಂಬ ವಿಶೇಷ ವಸ್ತುವನ್ನು ಬಳಸಲಾಗುತ್ತಿದೆ ಎಂದು ಪ್ರಾಜೆಕ್ಟ್​ ಇಂಜಿನಿಯರ್‌ಗಳು ಬಹಿರಂಗಪಡಿಸಿದ್ದಾರೆ. ಇದು ಹಳಿಗಳ ಸ್ಲ್ಯಾಬ್ ಮತ್ತು ಹಳಿಗಳ ನಡುವೆ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ. ರೈಲು ಹೆಚ್ಚಿನ ಸ್ಪೀಡ್​ನಲ್ಲಿ ಚಲಿಸುವಾಗ ಉಂಟಾಗುವ ಕಂಪನಗಳನ್ನು ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.
ಈ ವಿಶೇಷ ಮಿಷನ್​ ಅನ್ನು ಹಳಿಯ ಕೆಳಗೆ ಗಾರೆಯ ಸಹಾಯದಿಂದ ಇಂಜೆಕ್ಟ್ ಮಾಡಲಾಗುತ್ತದೆ. ಜಪಾನ್‌ನಿಂದ ತರಿಸಿಕೊಳ್ಳಲಾದ ಈ ಟೆಕ್ನಾಲಜಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ. ಮತ್ತು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂಬುದು ಗಮನಾರ್ಹ. CAM ತಯಾರಿಕೆಯು ಸಿಮೆಂಟ್, ಮರಳು, ನೀರು, ಡಾಂಬರು ಮತ್ತು ಪಾಲಿಮರ್ ಎಮಲ್ಷನ್‌ನಂತಹ ಒಟ್ಟು ಒಂಬತ್ತು ವಿಧದ ವಸ್ತುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕೆಲವು ನಮ್ಮ ದೇಶದಲ್ಲೇ ಲಭ್ಯವಿದೆ. ಇನ್ನು ಕೆಲವು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.
ಜಪಾನಿನ ತಜ್ಞರು ಇದರಲ್ಲಿ ಬಳಸಲಾದ ವಿಶೇಷ ವಸ್ತುವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಇಂಜಿನಿಯರ್‌ಗಳು ಹೇಳಿದ್ದಾರೆ. ಆ ವಸ್ತುವಿನಿಂದಾಗಿ ಹಳಿ ಹೆಚ್ಚು ಸ್ಥಿರತೆಯನ್ನು ಪಡೆಯುತ್ತದೆ. ಐಐಟಿ ಖರಗ್‌ಪುರದ ಸಂಶೋಧಕರು ಸಹ ಪ್ರಸ್ತುತ ಈ ವಿಷಯವನ್ನು ಅಧ್ಯಯನ ಮಾಡುತ್ತಿದ್ದಾರೆಂದು ವರದಿಯಾಗಿದೆ. ಅಸಲಿಗೆ, ಬುಲೆಟ್​ ರೈಲಿನ ವೇಗಕ್ಕೆ ಇಂಜಿನ್​ಗಿಂತಲೂ ಹೆಚ್ಚಾಗಿ ಜಪಾನ್​ ಟೆಕ್ನಾಲಜಿಯಿಂದ ರೂಪಿತಗೊಳ್ಳುವ ಈ ಹಳಿಯೇ ಕಾರಣ ಎಂಬುದು ಅಚ್ಚರಿಯ ಸಂಗತಿ.

2017ರಲ್ಲಿ ಬುಲೆಟ್ ರೈಲು ಯೋಜನೆಗೆ ಅಡಿಪಾಯ

2017ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಗ್ರೀನ್​ ಸಿಗ್ನಲ್ ನೀಡಿದರು. 508 ಕಿ.ಮೀ. ಉದ್ದದ ಕಾರಿಡಾರ್‌ಗೆ ಸುಮಾರು 1.98 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ನಿರ್ಮಿಸಲಾಗುತ್ತಿರುವ ಈ 8 ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಇದು ಮೊದಲನೆಯದು. ಭವಿಷ್ಯದಲ್ಲಿ ಕೇಂದ್ರ ಸರ್ಕಾರವು ಇನ್ನೂ 4,000 ಕಿ.ಮೀ. ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಜಪಾನ್‌ ಜತೆಗಿನ ಪಾಲುದಾರಿಕೆಯಲ್ಲಿ ಈ ಯೋಜನೆ

ಈ ಯೋಜನೆಯಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂಬುದು ನಾವಿಲ್ಲಿ ಗಮನಿಸಬೇಕಾದ ವಿಷಯ. ಇದಕ್ಕಾಗಿ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಸಾಲದ ನೆರವು ನೀಡುತ್ತಿದೆ. ಜಪಾನಿನ ತಜ್ಞರು ಭಾರತೀಯ ಇಂಜಿನಿಯರ್‌ಗಳಿಗೂ ಟ್ರೇನಿಂಗ್​ ನೀಡುತ್ತಿದ್ದಾರೆ.
ಆರಂಭದಲ್ಲಿ, ಭಾರತದಲ್ಲಿ ಜಪಾನಿನ ಶಿಂಕಾನ್ಸೆನ್ ಬುಲೆಟ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿತ್ತು. ಆದರೆ, ಭಾರತವು ಈಗ ಸ್ಥಳೀಯ ಬುಲೆಟ್ ರೈಲುಗಳನ್ನು ತಯಾರಿಸುವತ್ತ ಗಮನ ಹರಿಸುತ್ತಿದೆ. ಬೆಂಗಳೂರಿನ BEML ಸ್ಥಾವರದಲ್ಲಿ ದೇಶೀಯ ಹೈಸ್ಪೀಡ್ ರೈಲುಗಳ ಉತ್ಪಾದನಾ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಲಾಗಿದೆ. 2029ರ ವೇಳೆಗೆ ಸಂಪೂರ್ಣ ಬುಲೆಟ್ ರೈಲು ಕಾರಿಡಾರ್ ಪ್ರಾರಂಭಿಸುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net