ನಿಮ್ಮ ಒಂದು ಮತವೇ ದೇಶದ ಶಕ್ತಿ: ರಾಷ್ಟ್ರೀಯ ಮತದಾರರ ದಿನಾಚರಣೆಯ ಹಿಂದಿನ ಅಸಲಿ ಕಾರಣವೇನು? National Voters day

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
National Voters day: ಪ್ರತಿವರ್ಷ ಜನವರಿ 25 ರಂದು ಭಾರತದಾದ್ಯಂತ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯನ್ನು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯದ ಚುನಾವಣಾ ಆಯೋಗ ಸ್ಥಾಪನೆಯಾದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಸಂವಿಧಾನ ಜಾರಿಗೆ ಬರುವ ಒಂದು ದಿನ ಮುಂಚೆ, ಜನವರಿ 25, 1950 ರಂದು ECI ಅಸ್ತಿತ್ವಕ್ಕೆ ಬಂದಿತು. ಈ ವೇಳೆ ಪ್ರಮುಖ ಸಂಸ್ಥೆಯನ್ನು ಗೌರವಿಸಲು ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಸರ್ಕಾರವು ಪ್ರತಿ ವರ್ಷ ಈ ದಿನಾಂಕದಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ನಿರ್ಧಾರ ಮಾಡಿತು.
ರಾಷ್ಟ್ರೀಯ ಮತದಾರರ ದಿನವನ್ನು 18 ವರ್ಷ ಮೆಲ್ಪಟ್ಟ ನಂತರ ಯಾವ ಪ್ರಜೆಯು ಮೊದಲ ಬಾರಿಗೆ ಮತದಾನವನ್ನು ಮಾಡುತ್ತಾನೋ ಅಂತಹವರನ್ನು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಆದಾಗ್ಯೂ, ಮತದಾನವು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕು ಮತ್ತು ಪ್ರಮುಖ ಕರ್ತವ್ಯ ಎಂದು ಜನರಿಗೆ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗೆಯೇ ದೇಶಾದ್ಯಂತ ನೋಂದಾಯಿತ ಮತದಾರರ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗುರಿಯಾಗಿದೆ.

2011 ರಿಂದ ಆಚರಿಸಲಾಗುತ್ತಿದೆ

ರಾಷ್ಟ್ರೀಯ ಮತದಾರರ ದಿನವನ್ನು ಮೊದಲು 2011 ರಲ್ಲಿ ಆಚರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಜನವರಿ 25 ರಂದು ಆಚರಿಸಲಾಗುತ್ತಿದೆ. 2025 ನೇ ವರ್ಷದಲ್ಲಿ ಇದನ್ನು 14 ನೇ ರಾಷ್ಟ್ರೀಯ ಮತದಾರರ ದಿನವೆಂದು ಗುರುತಿಸಲಾಗುತ್ತದೆ. ಈ ದಿನದಂದು ದೇಶಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳು, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ, ಮತ್ತು ಮತದಾರರ ನೋಂದಣಿ ಅಭಿಯಾನಗಳನ್ನು ಆಯೋಜಿಸಲಾಗುತ್ತದೆ.

ಮತದಾನ ಏಕೆ ಮುಖ್ಯ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಕೇವಲ ಒಂದು ಹಕ್ಕಲ್ಲ, ಅದು ಪ್ರತಿಯೊಬ್ಬ ನಾಗರಿಕನ ಶಕ್ತಿಯುತ ಅಸ್ತ್ರ. ಇಲ್ಲಿ ಪ್ರತಿಯೊಬ್ಬ ನಾಗರಿಕನು ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಮತದಾನವು ಅಭಿವೃದ್ಧಿಗಾಗಿ ಕೆಲಸ ಮಾಡುವ, ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರಿಗೆ ಅವಕಾಶ ನೀಡುತ್ತದೆ. ತಮ್ಮ ನಿರ್ಧಾರವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ಪ್ರಜೆಗಳಿಗೆ ನೆನಪಿಸುತ್ತದೆ.

ಮತದಾನದ ವಯಸ್ಸಿನಲ್ಲಿ ಬದಲಾವಣೆ

1988ರ 61ನೇ ಸಂವಿಧಾನ ತಿದ್ದುಪಡಿಯು ಭಾರತೀಯ ಚುನಾವಣಾ ಇತಿಹಾಸದಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆಯಾಗಿ ಕಾಲಿಟ್ಟಿತು. ಅಂದಿನ ಪ್ರಧಾನಿ ರಾಜೀವ್​ ಗಾಂಧಿಯವರು ಯುವಕರು, ವಿದ್ಯಾವಂತರಿಗೆ ದೇಶದ ಭವಿಷ್ಯ ನಿರ್ಧರಿಸುವ ಹಕ್ಕಿರಬೇಕು ಎಂಬ ಉದ್ದೇಶದಿಂದ ಬದಲಾವಣೆ ತಂದರು. ಈ ತಿದ್ದುಪಡಿ ಕಾಯ್ದೆಯು 1988ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಯಿತು ಮತ್ತು ಮಾರ್ಚ್ 28, 1989 ರಿಂದ ಅಧಿಕೃತವಾಗಿ ಜಾರಿಗೆ ಬಂದಿತು. ಇದರ ಪ್ರಕಾರ, ಭಾರತದಲ್ಲಿ ಮತದಾನಕ್ಕೆ ಕನಿಷ್ಟ 21 ವರ್ಷ ಇದ್ದದ್ದನ್ನು 18 ವರ್ಷಗಳಿಗೆ ಇಳಿಸಲಾಯಿತು. ಈ ಬದಲಾವಣೆಯು ಹೆಚ್ಚಿನ ಯುವಜನರು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು.

ಚುನಾವಣಾ ಆಯೋಗದ ಪಾತ್ರ

ಭಾರತ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಗರಿಷ್ಠ ಮತದಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಚುನಾವಣೆಗಳನ್ನು ಪಾರದರ್ಶಕ ಮತ್ತು ನೈತಿಕ ರೀತಿಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಗುರಿಗಳಲ್ಲಿ ಒಂದಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net