ಅಹಂಕಾರಿ ಪಕ್ಷ ಕಟ್ಟಲು ಸಾಧ್ಯವಿಲ್ಲ!...ಬಂಕಿಪುರ ಉಪಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ ಪ್ರಶಾಂತ್ ಕಿಶೋರ್‌ ಸಂಗಡಿಗರು | Jan Suraaj Leaders Join BJP

 Jan Suraaj Leaders Join BJP | .ಬಂಕಿಪುರ ಉಪಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ ಪ್ರಶಾಂತ್ ಕಿಶೋರ್‌ ಸಂಗಡಿಗರು
Jan Suraaj Leaders Join BJP | .ಬಂಕಿಪುರ ಉಪಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ ಪ್ರಶಾಂತ್ ಕಿಶೋರ್‌ ಸಂಗಡಿಗರು
Published on
Bankipur Bypoll: ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸೂರಜ್ ಪಕ್ಷಕ್ಕೆ ಭಾರಿ ರಾಜಕೀಯ ಆಘಾತ ಎದುರಾಗಿದೆ. ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸೂರಜ್ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಪ್ರಮುಖ ಅಭ್ಯರ್ಥಿಗಳು ಸೇರಿದಂತೆ ಹಲವು ಹಿರಿಯ ನಾಯಕರು ಬುಧವಾರ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) *(Jan Suraaj Leaders Join BJP) ಸೇರ್ಪಡೆಯಾಗಿದ್ದಾರೆ.
ಜುಲೈ 30 ರಂದು ನಡೆಯಲಿರುವ ಬಂಕಿಪುರ ಉಪಚುನಾವಣೆಯಲ್ಲಿ ಆರ್​ಜೆಡಿ ಅಭ್ಯರ್ಥಿ, ಪ್ರಶಾಂತ್ ಕಿಶೋರ್ ಮತ್ತು ಬಿಜೆಪಿಯ ನೀರಜ್ ಕುಮಾರ್ ಸಿನ್ಹಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಇದಕ್ಕೂ ಮುನ್ನವೇ ನಡೆದಿರುವ ಈ ಬೃಹತ್ ವಲಸೆಯು ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್​ಗೆ ತೀವ್ರ ಹಿನ್ನಡೆಯನ್ನು ತಂದೊಡ್ಡಿದೆ.

ಪ್ರಧಾನಿ ಮೋದಿ ದೂರದರ್ಶಿತ್ವದ ನೀತಿಗಳೇ ಪ್ರೇರಣೆ!...

ಪ್ರಸಿದ್ಧ ಗಣಿತಶಾಸ್ತ್ರಜ್ಞ ಕೆ ಸಿ ಸಿನ್ಹಾ, ರಿತೇಶ್ ರಂಜನ್ ಅಲಿಯಾಸ್ ಬಿಟ್ಟು ಸಿಂಗ್, ಗೋಪಾಲ್ ಸಿಂಗ್ ಮತ್ತು ಜನ್ ಸೂರಜ್ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷ ಬ್ರಜ್ ಕಿಶೋರ್ ಸಿನ್ಹಾ ಸೇರಿದಂತೆ ಹಲವು ಪ್ರಮುಖರು ಇಂದು ಕೇಸರಿ ಪಾಳಯಕ್ಕೆ ಸೇರ್ಪಡೆಯಾದವರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸರೋಗಿ ಈ ನಾಯಕರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಸರೋಗಿ, ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವದ ನೀತಿಗಳಿಂದ ಪ್ರೇರಿತರಾಗಿ ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರು ಬಿಜೆಪಿಗೆ ಸೇರಲು ಮುಗಿಬೀಳುತ್ತಿದ್ದಾರೆ ಮತ್ತು ಈ ಹೊಸ ನಾಯಕರ ಸೇರ್ಪಡೆಯಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರಖ್ಯಾತ ಗಣಿತಜ್ಞ ಕೆ ಸಿ ಸಿನ್ಹಾ, ಶಿಕ್ಷಣದ ಮೂಲಕ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಕೊಡುಗೆ ನೀಡುವ ಉದ್ದೇಶದಿಂದ ತಾವು ಬಿಜೆಪಿ ಸೇರಿರುವುದಾಗಿ ತಿಳಿಸಿದರು. ಇಂದಿನ ಜಾಗತಿಕ ಯುದ್ಧದ ಸನ್ನಿವೇಶ ಮತ್ತು ಆತಂಕಗಳ ನಡುವೆ ದೇಶದ ಹಿತಾಸಕ್ತಿಯೇ ಅತ್ಯಂತ ಪ್ರಮುಖವಾಗಿದ್ದು, ವಿಶ್ವಮಟ್ಟದಲ್ಲಿ ಭಾರತದ ಧ್ವನಿ ಗಟ್ಟಿಯಾಗಿ ಮೊಳಗಲು ಕೇಂದ್ರ ಸರ್ಕಾರದ ಕೈಗಳನ್ನು ಬಲಪಡಿಸಬೇಕಿದೆ ಎಂದರು.

ಅಹಂಕಾರಿ ವ್ಯಕ್ತಿ ಸಂಘಟನೆ ಮುನ್ನಡೆಸಲು ಸಾಧ್ಯವಿಲ್ಲ!...

ಮತ್ತೊಬ್ಬ ಪ್ರಮುಖ ನಾಯಕ ರಿತೇಶ್ ರಂಜನ್ ಸಿಂಗ್ ಆವೇಶದ ಕ್ಷಣದಲ್ಲಿ ಜನ್ ಸೂರಜ್ ಪಕ್ಷ ಸೇರಿದ್ದಕ್ಕಾಗಿ ಕ್ಷಮೆಯಾಚಿಸಿದರು. ಅಲ್ಲದೆ, ಹಿಂದಿ ಚಲನಚಿತ್ರದ ಪ್ರಸಿದ್ಧ ಹಾಡಾದ ಜೀನಾ ಯಹಾ ಮರ್ನಾ ಯಹಾ ಸಾಲುಗಳನ್ನು ಉಲ್ಲೇಖಿಸುವ ಮೂಲಕ ತಾವಿನ್ನು ಎಂದಿಗೂ ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಭಾವುಕರಾಗಿ ನುಡಿದರು.
ಪಕ್ಷ ಸೇರ್ಪಡೆಯನ್ನು ಸ್ವಗೃಹಕ್ಕೆ ಮರಳುವಿಕೆ ಎಂದು ಬಣ್ಣಿಸಿದ ಮತ್ತೋರ್ವ ನಾಯಕ ಗೋಪಾಲ್ ಸಿಂಗ್, ತಾವು 1990ರ ದಶಕದಲ್ಲೇ ಬಿಜೆಪಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರು. ಕಳೆದ ವರ್ಷ ಜನ್ ಸೂರಜ್ ಟಿಕೆಟ್‌ನಲ್ಲಿ ಸ್ಪರ್ಧಿಸಿದಾಗ ಅಲ್ಲಿ ಯಾವುದೇ ಸರಿಯಾದ ದೂರದೃಷ್ಟಿ ಇಲ್ಲದಿರುವುದು ಮತ್ತು ಕೇವಲ ಆಡಂಬರದ ಮಾತುಗಳು ಮಾತ್ರ ಇರುವುದು ತಮಗೆ ಅರಿವಾಯಿತು ಎಂದರು. ಅಹಂಕಾರಿ ವ್ಯಕ್ತಿಯೊಬ್ಬರು ಎಂದಿಗೂ ಒಂದು ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೆಸರೆತ್ತದೆ ತೀಕ್ಷ್ಣವಾಗಿ ಟೀಕಿಸಿದ ಅವರು, ಅದಕ್ಕಾಗಿಯೇ ತಾವು ಸ್ವಪಕ್ಷಕ್ಕೆ ಮರಳಿರುವುದಾಗಿ ಸ್ಪಷ್ಟಪಡಿಸಿದರು.
ಇದೇ ಜುಲೈ 30 ರಂದು ನಡೆಯಲಿರುವ ಬಂಕಿಪುರ ಉಪಚುನಾವಣೆಯ ಹೊಸ್ತಿಲಿನಲ್ಲಿ ನಡೆದಿರುವ ಈ ಮಹತ್ವದ ರಾಜಕೀಯ ಬೆಳವಣಿಗೆಯು ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net