

ನವದೆಹಲಿ: ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಸತತವಾಗಿ ಎತ್ತುವ ಮೂಲಕ ಪಾಕಿಸ್ತಾನ ಕಾಶ್ಮೀರಿಗಳಿಗೆ ಸಹಾಯ ಮಾಡುತ್ತಿದೆ ಎಂಬ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುವುದರಿಂದ ಪಾಕಿಸ್ತಾನಕ್ಕೆ ನಮ್ಮ ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡಲು ಅಥವಾ ಹಸ್ತಕ್ಷೇಪ ಮಾಡಲು ಯಾವುದೇ ಹಕ್ಕಿಲ್ಲ ಎಂದು ಹೇಳಿದೆ.
ಅಲ್ಲದೇ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರವೀಂದರ್ ಶರ್ಮಾ, ಅಬ್ದುಲ್ಲಾ ಅವರ ಹೇಳಿಕೆಗಳು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರದ ವೈಫಲ್ಯದ ಬಗ್ಗೆ ಹತಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಾರತದ ವಿರುದ್ಧ ನಿರಂತರವಾಗಿ ಪರೋಕ್ಷ ಯುದ್ಧವನ್ನು ನಡೆಸುತ್ತಿದೆ. ಮತ್ತು ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ಜೆ & ಕೆ ನಲ್ಲಿ ಅಮಾಯಕರ ಸಾವಿಗೆ ಕಾರಣವಾಗಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ಖಂಡಿಸಬೇಕು ಮತ್ತು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಭಾರತದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನದ ಯಾವುದೇ ಹಸ್ತಕ್ಷೇಪವನ್ನು ಕಾಂಗ್ರೆಸ್ ದೃಢವಾಗಿ ವಿರೋಧಿಸುತ್ತದೆ. ಅಬ್ದುಲ್ಲಾ ತಮ್ಮ ಹೇಳಿಕೆಗಳ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ವಿರೋಧಿಸುವುದು ಮತ್ತು ರಾಜ್ಯತ್ವದ ಪುನಃಸ್ಥಾಪನೆಯ ಬೇಡಿಕೆ ಪ್ರತ್ಯೇಕ ವಿಷಯಗಳಾದರೂ ಮುಖ್ಯವಾದವು ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಅನುಸರಿಸುತ್ತಿರುವ ನೀತಿಗಳ ವಿರುದ್ಧ ಅಬ್ದುಲ್ಲಾ ಅವರ ಹೇಳಿಕೆಗಳು ನಿರ್ದೇಶಿಸಲ್ಪಟ್ಟಿವೆ. ಈ ಹೇಳಿಕೆಗಳು ದಬ್ಬಾಳಿಕೆ ಮತ್ತು ತಾರತಮ್ಯದ ಮಾದರಿಯ ವಿರುದ್ಧದ ಅಸಮಾಧಾನವನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್, ಸಂಸತ್ತು ಮತ್ತು ಸಾರ್ವಜನಿಕರ ಮುಂದೆ ಕೇಂದ್ರವು ಪದೇ ಪದೇ ಭರವಸೆ ನೀಡಿದ್ದರೂ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಕಾಶ್ಮೀರದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಎನ್ಸಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ನಿರಂತರವಾಗಿ ಎತ್ತುವ ಮೂಲಕ ಪಾಕಿಸ್ತಾನವೇ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸುತ್ತಿದೆ. ಭಾರತ ಸರ್ಕಾರ ನಮ್ಮ ಹಕ್ಕುಗಳನ್ನು ಕಸಿಯಲು ಹೊಂಚು ಹಾಕಿದ್ದು, ಅಂತಾರಾಷ್ಟ್ರೀಯ ಒತ್ತಡದ ಭಯದಿಂದ ಮಾತ್ರ ಸುಮ್ಮನಿದೆ ಎಂದಿದ್ದರು.
ನಮ್ಮ ಪಕ್ಕದ ದೇಶ (ಪಾಕಿಸ್ತಾನ) ನಿರಂತರವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ. ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಯೊಂದು ವೇದಿಕೆಯಲ್ಲೂ ಹೋಗಿ ಕಾಶ್ಮೀರ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ ಪಾಕಿಸ್ತಾನ ನಮ್ಮನ್ನು ರಕ್ಷಿಸುತ್ತಿದೆ. ದೆಹಲಿಯ ಸರ್ಕಾರದಿಂದ ನೀವು ನ್ಯಾಯ ಸಿಗುತ್ತದೆ ಎಂದು ನಂಬಿದ್ದೀರಾ? ನಿಮ್ಮ ಹಕ್ಕುಗಳು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಎದ್ದುನಿಂತು ಹೋರಾಡಿ. ಧೈರ್ಯದಿಂದ ಹೋರಾಡದಿದ್ದರೆ ನಿಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಹೇಳಿದ್ದರು (ಏಜೆನ್ಸೀಸ್).