ಬಂಗಾಳದಲ್ಲಿ ಜೈಶ್-ಎ-ಮೊಹಮ್ಮದ್ ಭೀಕರ ಸಂಚು ಭೇದಿಸಿದ ಎಸ್‌ಟಿಎಫ್: ಸುವೇಂದು ಅಧಿಕಾರಿ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಉಗ್ರ ಅರೆಸ್ಟ್! | Jaish E Mohammed

Jaish E Mohammed | ಸುವೇಂದು ಅಧಿಕಾರಿ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಉಗ್ರ ಅರೆಸ್ಟ್!
Jaish E Mohammed | ಸುವೇಂದು ಅಧಿಕಾರಿ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಉಗ್ರ ಅರೆಸ್ಟ್!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಉಗ್ರ ಸಂಘಟನೆಯ ಜಾಲವನ್ನು ಅಲ್ಲಿನ ವಿಶೇಷ ಕಾರ್ಯಪಡೆ (STF) ಭೇದಿಸಿದೆ. ಭ್ರಷ್ಟಾಚಾರ ಮತ್ತು ಉಗ್ರವಾದದ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ, ಜೈಶ್-ಎ-ಮೊಹಮ್ಮದ್ (JeM) ಉಗ್ರಗಾಮಿ ಸಂಘಟನೆಯ ಸಕ್ರಿಯ ಭಯೋತ್ಪಾದಕ ಹಮೀದ್ ಮಂಡಲ್ ಎಂಬಾತನನ್ನು ಶುಕ್ರವಾರ ಬರ್ಧಮಾನ್‌ನಲ್ಲಿ ಬಂಗಾಳ ಎಸ್‌ಟಿಎಫ್ ಬಂಧಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಆತನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ದಾಖಲೆಗಳ ಆಧಾರದ ಮೇಲೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮೇಲೆ ದಾಳಿ ನಡೆಸಲು ಈತ ಯೋಜಿಸುತ್ತಿದ್ದ ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಉಗ್ರ ಹಮೀದ್ ಮಂಡಲ್, 2019 ರ ಪುಲ್ವಾಮಾ ಭೀಕರ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸಜ್ಜಾದ್ ಭಟ್‌ನ ನಿಕಟವರ್ತಿಯಾಗಿದ್ದಾನೆ. ಬರ್ಧಮಾನ್‌ನ ರೆನಸಾನ್ಸ್ ಟೌನ್‌ಶಿಪ್ ಪ್ರದೇಶದ ಫ್ಲಾಟ್‌ ಒಂದರ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದ ಎಸ್‌ಟಿಎಫ್ ತಂಡ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಮೀದ್ ಮಂಡಲ್ ಕಳೆದ ಎರಡರಿಂದ ಮೂರು ತಿಂಗಳುಗಳಿಂದ ಈ ಬಾಡಿಗೆ ಫ್ಲಾಟ್‌ನಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದ್ದು, ಆತನನ್ನು ಬರ್ಧಮಾನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಮಾಹಿತಿ ಸಂಗ್ರಹಿಸುವುದರ ಹಿಂದಿನ ಅಸಲಿ ಉದ್ದೇಶವೇನು..?

ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಹಮೀದ್ ಮಂಡಲ್ ಈ ಸ್ಥಳವನ್ನು ತನ್ನ ಅಡಗುತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುವೇಂದು ಅಧಿಕಾರಿಯನ್ನು ಗುರಿಯಾಗಿಸಿಕೊಂಡಿದ್ದ ಶಂಕಿತ ಸಂಚಿನಲ್ಲಿ ಮಂಡಲ್‌ನ ಪಾತ್ರವೇನು ಹಾಗೂ ಭಾರತದಲ್ಲಿ ಆತನ ಚಟುವಟಿಕೆಗಳು ಎಷ್ಟರಮಟ್ಟಿಗೆ ಹರಡಿದ್ದವು ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದಲ್ಲದೆ ಮಂಡಲ್, ಸುವೇಂದು ಅಧಿಕಾರಿ ಭೇಟಿಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಸಂಗ್ರಹಿಸುತ್ತಿದ್ದ ಹಾಗೂ ಜುಲೈ 9 ರಿಂದ ಮುಖ್ಯಮಂತ್ರಿಯವರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದ ಎಂಬ ಆಘಾತಕಾರಿ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡ ಮಾಹಿತಿಯನ್ನು ವಿಶ್ಲೇಷಿಸಲಾಗುತ್ತಿದ್ದು, ಇಷ್ಟೆಲ್ಲಾ ಮಾಹಿತಿ ಸಂಗ್ರಹಿಸುವುದರ ಹಿಂದಿನ ಅಸಲಿ ಉದ್ದೇಶವೇನು ಮತ್ತು ಈ ಸಂಚಿನಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿಯಲು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಬಂಧಿತ ಜೈಶ್-ಎ-ಮೊಹಮ್ಮದ್ (JeM) ಉಗ್ರ ಹಮೀದ್ ಮಂಡಲ್‌ನನ್ನು ಪಶ್ಚಿಮ ಬಂಗಾಳದ ಎಸ್‌ಟಿಎಫ್ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೋರಲಿದೆ. ಎಸ್‌ಟಿಎಫ್ ಪ್ರಸ್ತುತ ಈ ಇಡೀ ಜಾಲದ ತನಿಖೆಯನ್ನು ಚುರುಕುಗೊಳಿಸಿದ್ದು, ಆತನ ಸಂಪರ್ಕಗಳು, ನೆಟ್‌ವರ್ಕ್ ಹಾಗೂ ಇತರ ಚಟುವಟಿಕೆಗಳನ್ನು ಆಳವಾಗಿ ಪರಿಶೀಲಿಸುತ್ತಿದೆ. ಈ ಭೀಕರ ಸಂಚಿನಲ್ಲಿ ಭಾಗಿಯಾಗಿರುವ ಇತರ ಶಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಸಂಚಿನ ವಿವಿಧ ಆಯಾಮಗಳನ್ನು ಭೇದಿಸಲು ಕಾರ್ಯಾಚರಣೆ ಮುಂದುವರಿದಿದೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net