ಸರ್ಕಾರಿ ಕೆಲ್ಸಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿಸಿದ ಮಗಳು: ವಿಚಾರಣೆ ವೇಳೆ ಆಕೆ ಆಡಿದ ಮಾತಿಗೆ ಪೊಲೀಸರೇ ಶಾಕ್​! Government Job

ಸರ್ಕಾರಿ ಕೆಲ್ಸಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿಸಿದ ಮಗಳು: ವಿಚಾರಣೆ ವೇಳೆ ಆಕೆ ಆಡಿದ ಮಾತಿಗೆ ಪೊಲೀಸರೇ ಶಾಕ್​! Government Job
ಸರ್ಕಾರಿ ಕೆಲ್ಸಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿಸಿದ ಮಗಳು: ವಿಚಾರಣೆ ವೇಳೆ ಆಕೆ ಆಡಿದ ಮಾತಿಗೆ ಪೊಲೀಸರೇ ಶಾಕ್​! Government Job
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರಿ ಮತ್ತು ಕೋಟಿ ಕೋಟಿ ಆಸ್ತಿಗೆ ಹೆತ್ತ ತಾಯಿಯನ್ನೇ ಕಾರು ಹರಿಸಿ ಕೊಂದ ಪಾಪಿ
  • ತಾಯಿಯ ಪ್ರೀತಿಯನ್ನು ಹರಾಜಿಗಿಟ್ಟು ಹಂತಕರಿಗೆ ಸುಪಾರಿ ಕೊಟ್ಟ ಮಗಳು
  • ತಾಯಿ ಸಾವಿನ ಹಿಂದೆ ಮಗಳು ಹೆಣೆದಿದ್ದ ಕರಾಳ ಸಂಚು ಪೊಲೀಸ್​ ತನಿಖೆಯಲ್ಲಿ ಬಯಲು
  • ವಿಚಾರಣೆ ವೇಳೆ ಪೊಲೀಸರಿಗೇ ಉಡಾಫೆ ಉತ್ತರ ನೀಡಿದ ಕಟುಕ ಮಗಳು
Government Job : ಹೆತ್ತ ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಂಬಿಕೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಇಂದಿನ ಸ್ವಾರ್ಥ ಪ್ರಪಂಚದಲ್ಲಿ ಹೇಗೆ ಮರೀಚಿಕೆಯಾಗುತ್ತಿವೆ ಎಂಬುದಕ್ಕೆ ಜೈಪುರದಲ್ಲಿ ನಡೆದಿರುವ ಈ ಆಘಾತಕಾರಿ ಘಟನೆ ಕನ್ನಡಿ ಹಿಡಿದಿದೆ. ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ಸ್ವಂತ ಮಗಳೇ ಹೆತ್ತ ತಾಯಿಯ ಪ್ರಾಣವನ್ನು ತೆಗೆಯಲು ಹಂತಕರಿಗೆ ಸುಪಾರಿ ಕೊಟ್ಟಿರುವ ಪಾಪಿ ಕೃತ್ಯ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಆಧುನಿಕತೆಯ ಹೆಸರಿನಲ್ಲಿ ಸಂಬಂಧಗಳ ಬೆಲೆ ಕೇವಲ ಹಣ ಮತ್ತು ಆಸ್ತಿಯಾಗಿ ಬದಲಾಗುತ್ತಿದ್ದು, ರಕ್ತಸಂಬಂಧಗಳೂ ಸಹ ವ್ಯಾಪಾರದ ವಸ್ತುವಾಗುತ್ತಿವೆ ಎಂಬುದಕ್ಕೆ ಈ ಕರುಳು ಹಿಂಡುವ ಘಟನೆ ಸಾಕ್ಷಿಯಾಗಿದೆ. ತಾಯಿಯ ಪ್ರೀತಿಯನ್ನೇ ನಡುಬೀದಿಯಲ್ಲಿ ಹರಾಜಿಗಿಟ್ಟ ಈ ಕಲಿಯುಗದ ಮಗಳ ಕರಾಳ ಮುಖ ತನಿಖೆಯಿಂದ ಕಳಚಿಬಿದ್ದಿದ್ದು, ಮನುಷ್ಯತ್ವ ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ನೆನೆದು ಈ ಜಗತ್ತೇ ಕಳವಳ ವ್ಯಕ್ತಪಡಿಸುತ್ತಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಮಗಳ ಕ್ರೂರ ಸಂಚಿಗೆ ಬಲಿಯಾದ ತಾಯಿಯನ್ನು ನೀರಜ ಶರ್ಮಾ ಎಂದು ಗುರುತಿಸಲಾಗಿದೆ. ಇವರು ಜೈಪುರದ ಏರ್‌ಪೋರ್ಟ್ ಕಾಲೋನಿಯಲ್ಲಿ ತಮ್ಮ ಮಗಳು ಆಯುಷಿ ಶರ್ಮಾ ಮತ್ತು ಮಾನಸಿಕ ಅಸ್ವಸ್ಥನಾದ ಅಪ್ರಾಪ್ತ ಮಗನೊಂದಿಗೆ ವಾಸಿಸುತ್ತಿದ್ದರು. ಜೈಪುರ ನ್ಯಾಯಾಲಯದಲ್ಲಿ ಎಲ್‌ಡಿಸಿ ಆಗಿ ಕೆಲಸ ಮಾಡುತ್ತಿದ್ದ ನೀರಜ ಅವರ ಪತಿ ವಿಜಯ್ ವಸಿಷ್ಠ ಅಲಿಯಾಸ್ ವಿಜಯ್ ಶರ್ಮಾ, ಸುಮಾರು ಎರಡುವರೆ ವರ್ಷಗಳ ಹಿಂದೆ ಮನೆಯನ್ನು ನಿರ್ಮಿಸಿದ ನಂತರ ಇಡೀ ಕುಟುಂಬ ಏರ್​ಪೋರ್ಟ್​ ಕಾಲನಿಯಲ್ಲಿ ಬಂದು ನೆಲೆಸಿತ್ತು.
ಸುಮಾರು ಒಂದು ವರ್ಷದ ಹಿಂದೆ ವಿಜಯ್ ಶರ್ಮಾ ಸಾವಿಗೀಡಾದರು. ಬಳಿಕ ಅನುಕಂಪದ ಆಧಾರದ ಮೇಲೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಸಿಗುವ ಅವಕಾಶವಿತ್ತು. ಆ ವೇಳೆಗೆ 12ನೇ ತರಗತಿ ಪಾಸಾಗಿದ್ದ ಆಯುಷಿ, ಆ ಕೆಲಸ ತನಗೇ ಸಿಗಬೇಕೆಂದು ಹಠ ಹಿಡಿದಿದ್ದಳು. ಆರಂಭದಲ್ಲಿ ಮಗಳಿಗೆ ಕೆಲಸ ಬಿಟ್ಟುಕೊಡಲು ತಾಯಿ ನೀರಜ ಸಮ್ಮತಿಸಿದ್ದರಾದರೂ, ಕೆಳ ನ್ಯಾಯಾಲಯದಲ್ಲಿ ವಿಜಯ್ ಶರ್ಮಾ ಅವರೊಂದಿಗೆ ಎಲ್‌ಡಿಸಿ ಆಗಿ ಕೆಲಸ ಮಾಡುತ್ತಿದ್ದ ನೀರಜ ಅವರ ಸ್ವಂತ ಸಹೋದರ (ಆಯುಷಿಯ ಸೋದರಮಾವ), ತಂಗಿಗೆ ಹಾಗೆ ಮಾಡದಂತೆ ಮತ್ತು ಆ ಕೆಲಸವನ್ನು ತಾನೇ ಉಳಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದರು.
ತಮ್ಮ 16 ವರ್ಷದ ಮಾನಸಿಕ ಅಸ್ವಸ್ಥ ಮಗನಿಗೆ ಜೀವನಪರ್ಯಂತ ಆರೈಕೆಯ ಅಗತ್ಯವಿರುವುದರಿಂದ ಮತ್ತು ನೀರಜ ಕೂಡ ಸ್ವತಃ ಸುಶಿಕ್ಷಿತರಾಗಿದ್ದರಿಂದ ಆ ಕೆಲಸವನ್ನು ತಾವೇ ವಹಿಸಿಕೊಳ್ಳುವುದು ಸೂಕ್ತ ಎಂದು ಸಹೋದರ ಸಲಹೆ ನೀಡಿದ್ದರು. ಅಲ್ಲದೆ, ಮಗಳು ಆಯುಷಿ ಮುಂದಿನ ದಿನಗಳಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿ ಸ್ವಂತ ಬಲದ ಮೇಲೆ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಸಮಾಧಾನಪಡಿಸಿದ್ದರು. ಅಣ್ಣನ ಮಾತನ್ನು ಒಪ್ಪಿದ ನೀರಜ ಕೊನೆಗೆ ತಾವೇ ಆ ಅನುಕಂಪದ ನೌಕರಿಯನ್ನು ಸ್ವೀಕರಿಸಿದರು. ಆದರೆ, ಪೊಲೀಸರ ಪ್ರಕಾರ ತಾಯಿಯ ಈ ನಿರ್ಧಾರವೇ ಹೆತ್ತಮ್ಮ ಮತ್ತು ಮಗಳ ನಡುವಿನ ರಕ್ತಸಂಬಂಧದಲ್ಲಿ ದ್ವೇಷದ ಕಿಡಿ ಹೊತ್ತಿಸಿ, ಇಡೀ ಕಥೆಗೆ ಒಂದು ಭೀಕರ ತಿರುವು ನೀಡಿತು.
ಇದಾದ ಕೆಲವೇ ದಿನಗಳಲ್ಲಿ ಆಯುಷಿ, ಕಲ್ಯಾಣ್ ಕಾಲೋನಿಯಲ್ಲಿರುವ ಕುಟುಂಬದ ಹಳೆಯ ಮನೆಗೆ ತನ್ನ ವಾಸ ಬದಲಿಸಿದಳು. ಅಲ್ಲಿ ಅವಳು ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಶರ್ಮಾ ಅವರ ಮಗ, ಅಣ್ಣ ಬಲರಾಮ್ ಜೊತೆ ಸೇರಿ ಎಲ್‌ಎಲ್‌ಬಿ (LLB) ಕೋರ್ಸ್‌ಗೆ ದಾಖಲಾದಳು. ಪೊಲೀಸರ ಪ್ರಕಾರ, ಇದೇ ಅವಧಿಯಲ್ಲಿ ಆಯುಷಿ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಬೇಕೆಂಬ ತನ್ನ ಕೆಟ್ಟ ಆಲೋಚನೆಯನ್ನು ಬಲರಾಮ್ ಎದುರು ಬಿಚ್ಚಿಟ್ಟಿದ್ದಾಳೆ.
ತಾಯಿಯನ್ನು ಮುಗಿಸುವ ತನ್ನ ಸಂಚಿಗೆ ಸಹಾಯ ಮಾಡಿದರೆ ಕುಟುಂಬದ ಆಸ್ತಿಯಲ್ಲಿ ಪಾಲು ನೀಡುವುದಾಗಿ ಆಯುಷಿ, ತನ್ನ ಅಣ್ಣ ಬಲರಾಮ್‌ಗೆ ಆಮಿಷ ಒಡ್ಡಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಗ್ರಾ ರಸ್ತೆಯಲ್ಲಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಐದು ಬಿಗಾ ಜಮೀನು ಮತ್ತು ಭರತ್‌ಪುರದಲ್ಲಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ನಾಲ್ಕು ಬಿಗಾ ಜಮೀನನ್ನು ಕೊಡುವುದಾಗಿ ಅವಳು ಭರವಸೆ ನೀಡಿದ್ದಳು. ಪ್ರತಿಯಾಗಿ, ತಾಯಿಯ ಸಾವಿನ ನಂತರ ಜೈಪುರದಲ್ಲಿರುವ ಆಸ್ತಿಗಳು ತನಗೇ ಸಿಗುತ್ತವೆ ಹಾಗೂ ಅನುಕಂಪದ ಆಧಾರದ ಆ ಸರ್ಕಾರಿ ಕೆಲಸವೂ ತನಗೆ ಒಲಿಯುತ್ತದೆ ಎಂಬುದು ಆಕೆಯ ಲೆಕ್ಕಾಚಾರವಾಗಿತ್ತು. ಪೊಲೀಸರ ತನಿಖೆಯ ಪ್ರಕಾರ, ಈ ಭೀಕರ ಕೊಲೆಯ ಸಂಚನ್ನು ಆಯುಷಿಯ ಚಿಕ್ಕಪ್ಪ ಮೋಹನ್ ಶರ್ಮಾಗೂ ತಿಳಿಸಲಾಗಿತ್ತು.

ಮೊದಲ ಪ್ರಯತ್ನ ವಿಫಲ

ಅಧಿಕಾರಿಗಳ ಪ್ರಕಾರ, ಆರಂಭದಲ್ಲಿ ತಾಯಿ ನೀರಜ ಅವರನ್ನು ವಾಹನದಿಂದ ಡಿಕ್ಕಿ ಹೊಡೆದು ಸಾಯಿಸಿ, ಅದೊಂದು ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಕೊಲೆ ನಡೆಯುವ ಸುಮಾರು ಒಂದು ತಿಂಗಳ ಮುನ್ನ ಚಿಕ್ಕಪ್ಪ ಮೋಹನ್ ಶರ್ಮಾ, ಭರತ್‌ಪುರದ ಹೇಮಂತ್ ಶರ್ಮಾ ಎಂಬಾತನನ್ನು ಸಂಪರ್ಕಿಸಿದ್ದನು. ಆ ಹೇಮಂತ್ ಎಂಬಾತ ನೀರಜ ಅವರ ಮನೆಯ ಹೊರಗಡೆ ಥಾರ್ ಕಾರಿನಿಂದ ಅವರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದನಾದರೂ, ನೀರಜ ಅವರ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಆದರೆ, ಈ ಘಟನೆ ನೀರಜ ಅವರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು.

ಮೂಢನಂಬಿಕೆಯ ತಂತ್ರ ಪ್ರಯೋಗ

ತಕ್ಷಣವೇ ಈ ಬಗ್ಗೆ ತಮ್ಮ ಸಹೋದರನಿಗೆ ಮಾಹಿತಿ ನೀಡಿದ ನೀರಜ, ಮನೆಯಿಂದ ಹೊರಗೆ ಓಡಾಡುವುದನ್ನು ಕಮ್ಮಿ ಮಾಡಿದರು. ಅವರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿದಾಗ, ಹೆದರಿ ಅವರೇ ಮನೆ ಬಿಟ್ಟು ಓಡಿಹೋಗಲಿ ಎಂಬ ಕಾರಣಕ್ಕೆ ಮಗಳು ಆಯುಷಿ ಮೂಢನಂಬಿಕೆಯ ತಂತ್ರಗಳನ್ನು ಬಳಸತೊಡಗಿದಳು. ಮನೆ ಸುತ್ತ ನಿಂಬೆಹಣ್ಣು, ಮೆಣಸಿನಕಾಯಿ ಮತ್ತು ಕೆಂಪು ಬಣ್ಣದ ಪದಾರ್ಥಗಳನ್ನು ಎಸೆಯುವ ಮೂಲಕ ತಾಯಿಯನ್ನು ಹೆದರಿಸಲು ಯತ್ನಿಸಿದಳು. ತಮಗೆ ಪ್ರಾಣಾಪಾಯ ಇರುವುದನ್ನು ಅರಿತ ನೀರಜ, ಸುರಕ್ಷತೆಗಾಗಿ ಮನೆಯ ಸುತ್ತಲೂ ಮೆಶ್ ಸ್ಕ್ರೀನ್‌ಗಳನ್ನು ಅಳವಡಿಸಿದ್ದಲ್ಲದೆ, ಮನೆಯ ಹೊರಗೆ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಮ್ಮೆ ಪ್ರಯತ್ನಿಸಲು ಒತ್ತಡ

ಮೊದಲ ಪ್ರಯತ್ನ ವಿಫಲವಾದರೂ ಮಗಳು ಆಯುಷಿ, ತನ್ನ ತಾಯಿಯನ್ನು ಮುಗಿಸಲು ಸತತವಾಗಿ ಒತ್ತಡ ಹೇರುತ್ತಲೇ ಇದ್ದಳು. ಇದರಿಂದಾಗಿ ಚಿಕ್ಕಪ್ಪ ಮೋಹನ್ ಶರ್ಮಾ ಮತ್ತೆ ಹೇಮಂತ್ ಶರ್ಮನನ್ನು ಸಂಪರ್ಕಿಸಿದ್ದು, ಆತ ಈ ಕೊಲೆ ಕೃತ್ಯವನ್ನು ಮುಗಿಸಲು 7 ಲಕ್ಷ ರೂಪಾಯಿ ಸುಪಾರಿ ಬೇಡಿಕೆ ಇಟ್ಟಿದ್ದನು. ಹಣದ ಒಪ್ಪಂದದ ಬಳಿಕ ಹೇಮಂತ್, ಭರತ್‌ಪುರದಿಂದ ಹರಿಯಾಣ ನೋಂದಣಿಯ ಸ್ಕಾರ್ಪಿಯೋ ಕಾರನ್ನು 35,000 ರೂಪಾಯಿಗೆ ಬಾಡಿಗೆಗೆ ಪಡೆದಿದ್ದನು. ದಾಳಿ ನಡೆಸಲು ಆತ ಆಕಾಶ್ ಶರ್ಮಾ ಮತ್ತು ಅರವಿಂದ್ ಶರ್ಮಾ ಎಂಬಿಬ್ಬರನ್ನು ಹಂತಕರನ್ನಾಗಿ ನೇಮಿಸಿಕೊಂಡರೆ, ತಾಯಿ ನೀರಜ ಅವರ ಓಡಾಟದ ಮೇಲೆ ನಿರಂತರ ನಿಗಾ ಇಡಲು ರೋಹಿತ್ ಮತ್ತು ಮೋಹಿತ್ ಎಂಬುವವರನ್ನು ನಿಯೋಜಿಸಿದ್ದನು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಡೆದೇಹೋಯ್ತು ಭೀಕರ ಕೊಲೆ

ಜುಲೈ 4 ರಂದು ತಾಯಿ ನೀರಜ ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಫಿಸಿಯೋಥೆರಪಿಗೆ ಕರೆದೊಯ್ದಿದ್ದಾಗ, ಮಗಳು ಆಯುಷಿ ಫೋನ್ ಮಾಡಿ ತುರ್ತು ಕೆಲಸವಿದೆ ಎಂದು ಸುಳ್ಳು ಹೇಳಿ ತಕ್ಷಣ ಮನೆಗೆ ಬರುವಂತೆ ನಂಬಿಸಿದ್ದಳು. ನೀರಜ 60 ಅಡಿ ಅಗಲದ ರಸ್ತೆಯ ಕೊನೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಬೈಕ್‌ನಲ್ಲಿ ಕಾದು ಕುಳಿತಿದ್ದ ರೋಹಿತ್ ಮತ್ತು ಮೋಹಿತ್ ಹಂತಕ ಆಕಾಶ್‌ನ ಸ್ಕಾರ್ಪಿಯೋ ಕಾರಿಗೆ ಸಿಗ್ನಲ್ ನೀಡಿದ್ದಾರೆ. ತಕ್ಷಣವೇ 100 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವೇಗದಲ್ಲಿ ಬಂದ ಕಾರು ನೀರಜ ಅವರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನೀರಜ ಅವರು ಹಲವು ಮೀಟರ್ ದೂರಕ್ಕೆ ಹಾರಿ ಬಿದ್ದು ಸ್ಥಳದಲ್ಲೇ ಸಾವಿಗೀಡಾದರು. ಅಪಘಾತದ ನಂತರ ಆಯುಷಿ ತನಗೇನೂ ತಿಳಿಯದಂತೆ ಸೋದರಮಾವನಿಗೆ ಫೋನ್ ಮಾಡಿ ಅಳುತ್ತಾ, ತಾಯಿ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ನಾಟಕವಾಡಿದ್ದಾಳೆ. ಬಳಿಕ ಚಿಕ್ಕಪ್ಪ ಮೋಹನ್ ಶರ್ಮಾ ಸ್ಥಳಕ್ಕೆ ಬಂದು ಶವವನ್ನು ಸ್ವಗ್ರಾಮಕ್ಕೆ ಸಾಗಿಸಿದ್ದಾನೆ. ಆದರೆ, ಆಯುಷಿಯ ನಡವಳಿಕೆಯಿಂದ ಅನುಮಾನಗೊಂಡ ಆಕೆಯ ಸೋದರಮಾವ ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಈ ತನಿಖೆಗೆ ಮನೆಯ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳೇ ದೊಡ್ಡ ತಿರುವು ನೀಡಿದವು. ಖಾಲಿ ಇದ್ದ ರಸ್ತೆಯ ತುತ್ತತುದಿಯಲ್ಲಿ ನೀರಜ ಅವರು ನಡೆದುಕೊಂಡು ಹೋಗುತ್ತಿದ್ದರೂ ಅಷ್ಟು ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದ್ದು ಹಾಗೂ ಅಪಘಾತಕ್ಕೂ ಮುನ್ನವೇ ಸ್ಕಾರ್ಪಿಯೋ ಕಾರು ಮತ್ತು ಬೈಕ್ ಸವಾರರು ಅಲ್ಲಿ ಹೊಂಚು ಹಾಕಿ ಕುಳಿತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾದವು. ಅಪಘಾತದ ನಂತರ ಯಾರೂ ಗಾಯಾಳುವಿನ ಸಹಾಯಕ್ಕೆ ಬಾರದೆ ಬೈಕ್‌ನಲ್ಲಿ ಪರಾರಿಯಾಗಿದ್ದು ಪೊಲೀಸರ ಅನುಮಾನವನ್ನು ಖಚಿತಪಡಿಸಿತು. ಸಿಸಿಟಿವಿ ದೃಶ್ಯಗಳ ಬೆನ್ನುಹತ್ತಿದ ಪೊಲೀಸರು ಅಪಘಾತ ಎಸಗಿದ ಹಾನಿಗೊಳಗಾಗಿದ್ದ ಸ್ಕಾರ್ಪಿಯೋ ಕಾರನ್ನು ಪತ್ತೆಹಚ್ಚಿದರು. ಕಾರಿನ ಮಾಲೀಕ ಇದನ್ನು ಹೇಮಂತ್ ಶರ್ಮಾಗೆ ಬಾಡಿಗೆಗೆ ನೀಡಿರುವುದಾಗಿ ಬಾಯಿಬಿಟ್ಟರೆ, ಪೊಲೀಸರ ವಿಚಾರಣೆ ಎದುರಿಸಿದ ಹೇಮಂತ್ ಇಡೀ ಕೊಲೆ ಸಂಚಿನ ಸೂತ್ರಧಾರ ಚಿಕ್ಕಪ್ಪ ಮೋಹನ್ ಶರ್ಮಾ ಹಾಗೂ ಮಗಳು ಆಯುಷಿ ಎಂಬುದನ್ನು ಒಪ್ಪಿಕೊಂಡಿದ್ದಾನೆ.

ತಪ್ಪೊಪ್ಪಿಕೊಂಡ ಆಯುಷಿ

ಕೊಲೆ ಕೃತ್ಯದ ಬಳಿಕ ಪೊಲೀಸರು ಆರೋಪಿ ಆಯುಷಿ ಇದ್ದ ರೂಪವಾಸ್ ಗ್ರಾಮಕ್ಕೆ ತಲುಪಿದಾಗ, ಕಾನೂನು ವಿದ್ಯಾರ್ಥಿನಿಯಾಗಿದ್ದ ಅವಳು ಆರಂಭದಲ್ಲಿ ಪೊಲೀಸರನ್ನೇ ಹೆದರಿಸಲು ಯತ್ನಿಸಿದ್ದಾಳೆ. ಆದರೆ ಸ್ಥಳೀಯ ಪೊಲೀಸರು ಮತ್ತು ಗ್ರಾಮಸ್ಥರ ಸಹಾಯದಿಂದ, ಹೇಳಿಕೆ ದಾಖಲಿಸುವ ನೆಪದಲ್ಲಿ ಆಯುಷಿ ಮತ್ತು ಆಕೆಯ ಅತ್ತೆಯನ್ನು ಅಧಿಕಾರಿಗಳು ಪೊಲೀಸ್ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾದರು. ನಂತರ ಅತ್ತೆಯನ್ನು ಕಳುಹಿಸಿ, ಆಯುಷಿಳನ್ನು ತೀವ್ರ ವಿಚಾರಣೆಗಾಗಿ ಜೈಪುರಕ್ಕೆ ಕರೆತರಲಾಯಿತು. ಅಲ್ಲಿ ಇತರ ಆರೋಪಿಗಳನ್ನು ಪೊಲೀಸ್​ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಳು. ಆಘಾತಕಾರಿ ಸಂಗತಿ ಏನೆಂದರೆ, ಹೆತ್ತ ತಾಯಿಯನ್ನೇ ಕೊಂದರೂ ವಿಚಾರಣೆ ವೇಳೆ ಆಕೆ ಯಾವುದೇ ಪಶ್ಚಾತ್ತಾಪ ಪಡದೆ ಪೊಲೀಸರ ಪ್ರಶ್ನೆಗಳಿಗೆ ಉಡಾಫೆಯಿಂದ ಉತ್ತರಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆರೋಪಗಳ ಕುರಿತು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗಲೂ ಆಯುಷಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾಳೆ. ಸದ್ಯ ಈ ಪ್ರಕರಣ ರಾಜಸ್ಥಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net