ಅದೃಷ್ಟ ಅಂದ್ರೆ ಇದು... ಫ್ರೆಂಡ್​ ಬಳಿ 1000 ರೂ. ಸಾಲ ಮಾಡಿ ಲಾಟರಿ ಖರೀದಿಸಿದ ವ್ಯಕ್ತಿಗೆ 11 ಕೋಟಿ ಬಂಪರ್​! Jaipur man

11 ಕೋಟಿ ಬಹುಮಾನ ಗೆದ್ದ ರಾಜಸ್ಥಾನ ಮೂಲದ ಅಮಿತ್​ ಸೆಹರಾ
11 ಕೋಟಿ ಬಹುಮಾನ ಗೆದ್ದ ರಾಜಸ್ಥಾನ ಮೂಲದ ಅಮಿತ್​ ಸೆಹರಾ
Published on

ಪ್ರಮುಖ ಮುಖ್ಯಾಂಶಗಳು

  • ಲಾಟರಿ ಖರೀದಿ ಮಾಡಲು ಸ್ನೇಹಿತನಿಂದ 1000 ರೂಪಾಯಿ ಸಾಲ ಪಡೆದ ವ್ಯಕ್ತಿಗೆ ಖುಲಾಯಿಸಿದ ಅದೃಷ್ಟ
  • ಬರೋಬ್ಬರಿ 11 ಕೋಟಿ ರೂ. ಬಂಪರ್​ ಬಹುಮಾನ ಗೆದ್ದ ರಾಜಸ್ಥಾನ ಮೂಲದ ವ್ಯಕ್ತಿ
  • ಲಾಟರಿ ಗೆಲುವಿನಿಂದ ಬಂದ ಹಣದಲ್ಲಿ ಒಂದು ಉತ್ತಮ ಮನೆ ಕಟ್ಟಲು ನಿರ್ಧಾರ
ಜೈಪುರ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರಾಜಸ್ಥಾನದ ಜೈಪುರ ಮೂಲದ ವ್ಯಕ್ತಿಯೊಬ್ಬರ ( Jaipur man ) ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಲಾಟರಿ ಖರೀದಿ ಮಾಡಲು ಸ್ನೇಹಿತನಿಂದ 1000 ರೂಪಾಯಿ ಸಾಲ ಪಡೆದ ವ್ಯಕ್ತಿಯೊಬ್ಬ ಬರೋಬ್ಬರಿ 11 ಕೋಟಿ ರೂ. ಬಂಪರ್​ ಬಹುಮಾನ ಗೆದ್ದಿದ್ದಾನೆ. ಈ ವಿಚಾರವನ್ನು ಕೇಳಿದ ಅನೇಕ ಮಂದಿ ಎಂಥಾ ಅದೃಷ್ಟವಂತನಪ್ಪ! ಎಂದು ಹುಬ್ಬೇರಿಸಿದ್ದಾರೆ. ಅಂದಹಾಗೆ, ಆ ಅದೃಷ್ಟಶಾಲಿಯ ಹೆಸರು ಅಮಿತ್​ ಸೆಹರಾ ಎಂದು. ಈತ ರಾಜಸ್ಥಾನದ ಜೈಪುರದ ಕೋಟ್‌ಪುಟ್ಲಿ ಗ್ರಾಮದ ನಿವಾಸಿ.
ಲಾಟರಿ ಗೆಲುವಿನಿಂದ ಬಂದ ಹಣದಲ್ಲಿ ಒಂದು ಉತ್ತಮ ಮನೆ ಕಟ್ಟಲು ಮತ್ತು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಳಸುವುದಾಗಿ ಅಮಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಮಿತ್​ ರಾಜಸ್ಥಾನದ ನಿವಾಸಿ ಆದರೆ, ಲಾಟರಿ ಬಹುಮಾನ ಗೆದ್ದಿರುವುದು ಪಂಜಾಬ್‌ನ ಬಟಿಂಡಾ ಪ್ರದೇಶದಿಂದ. ಹೀಗಾಗಿ ಪಂಜಾಬ್ ಸರ್ಕಾರಕ್ಕೆ ಕೃತಜ್ಞನಾಗಿರುವುದಾಗಿ ಅಮಿತ್ ಹೇಳಿದ್ದಾರೆ. ಅಂದಹಾಗೆ, ಅಮಿತ್​ ಮೊದಲ ಬಹುಮಾನ ಗೆದ್ದಿರುವುದಾಗಿ ಪಂಜಾಬ್​ನ ಲಾಟರಿ ಸಂಸ್ಥೆಯು ಕೂಡ ದೃಢಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಅಮಿತ್​, ನಾನು ಜೈಪುರ ಜಿಲ್ಲೆಯ ಕೋಟ್‌ಪುಟ್ಲಿ ಗ್ರಾಮದವನು. ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ಇದಕ್ಕೆ ಕಾರಣರಾದ ಪಂಜಾಬ್ ಸರ್ಕಾರ ಮತ್ತು ಲಾಟರಿ ಏಜೆನ್ಸಿಗೆ ಧನ್ಯವಾದಗಳು. ಇಂದು ನನ್ನ ಎಲ್ಲಾ ದುಃಖಗಳು ದೂರವಾಗಿವೆ. ನನಗೆ 11 ಕೋಟಿ ರೂ. ಸಿಕ್ಕಿದೆ ಎಂದು ಅಮಿತ್​ ಹೇಳಿದರು. 
ಇದೇ ವೇಳೆ ಲಾಟರಿ ಗೆಲುವಿನ ಹಿಂದಿನ ಕಹಾನಿ ಬಿಚ್ಚಿಟ್ಟ ಅಮಿತ್​, ನಾನು ಸ್ನೇಹಿತನೊಂದಿಗೆ ಪ್ರಯಾಣಿಸುವಾಗ ಪಂಜಾಬ್​ನ ಬಟಿಂಡಾವನ್ನು ತಲುಪಿದೆ. ಈ ವೇಳೆ ನಾನು ನನ್ನ ಸ್ನೇಹಿತನಿಂದ 1000 ರೂ. ಸಾಲ ಪಡೆದು ಎರಡು ಟಿಕೆಟ್‌ಗಳನ್ನು ಖರೀದಿಸಿದೆ. ನನಗೆ ಒಂದು ಮತ್ತು ನನ್ನ ಹೆಂಡತಿಗೆ ಒಂದು ಟಿಕೆಟ್​ ಖರೀದಿ ಮಾಡಿದೆ. ನನ್ನ ಪತ್ನಿಯ ಟಿಕೆಟ್‌ಗೆ 1000 ರೂ. ಬಹುಮಾನ ಬಂದರೆ, ನನಗೆ ಮೊದಲ ಬಹುಮಾನ ಬಂದಿತು ಎಂದು ಅಮಿತ್​ ಖುಷಿ ವ್ಯಕ್ತಪಡಿಸಿದರು. 
ಮಾತು ಮುಂದುವರಿಸಿದ ಅಮಿತ್​, ನಾನು ದೀಪಾವಳಿ ಬಂಪರ್ ಲಾಟರಿಯನ್ನು ಖರೀದಿಸಿದೆ. ಇದೀಗ 11 ಕೋಟಿ ರೂ. ಬಹುಮಾನ ಬಂದಿದೆ. ಇದರಲ್ಲಿ ತೆರಿಗೆ ಎಲ್ಲ ಕಡಿತವಾಗಿ ನನಗೆ ಬರುವ ಹಣದಲ್ಲಿ ಲಾಟರಿ ಟಿಕೆಟ್ ಖರೀದಿಸಲು ಹಣದ ಸಹಾಯ ಮಾಡಿದ ನನ್ನ​ ಸ್ನೇಹಿತನ ಇಬ್ಬರು ಹೆಣ್ಣುಮಕ್ಕಳಿಗೆ ತಲಾ 50 ಲಕ್ಷ ರೂಪಾಯಿ ನೀಡುತ್ತೇನೆ. ಉಳಿದ ಹಣವನ್ನು ಮನೆ ಕಟ್ಟಲು ಮತ್ತು ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಳಸುತ್ತೇನೆ ಎಂದು ಅಮಿತ್ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net