ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮರುಮತದಾನದ ಭರಾಟೆ; ಮುಂಜಾನೆ 9 ಗಂಟೆಯ ವೇಳೆಗೆ ಶೇ. 20.47 ರಷ್ಟು ವೋಟಿಂಗ್ | Falta Repoll

Falta RePoll |  ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮರುಮತದಾನ ಭರಾಟೆ
Falta RePoll | ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮರುಮತದಾನ ಭರಾಟೆ
Published on
Falta Repoll: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ಮುಂಜಾನೆಯಿಂದಲೇ ಮರುಮತದಾನ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣೆಯ ವೇಳೆ ವ್ಯಾಪಕ ಚುನಾವಣಾ ಅಕ್ರಮಗಳು ನಡೆದ ವರದಿಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಆದೇಶಿಸಿತ್ತು.
ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದ ಮರುಮತದಾನದಲ್ಲಿ ಮುಂಜಾನೆ 9 ಗಂಟೆಯ ವೇಳೆಗೆ ಶೇಕಡಾ 20.47 ರಷ್ಟು ಮತದಾನ ದಾಖಲಾಗಿದೆ. ಸದ್ಯ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಮುಂದುವರಿದಿದೆ.
ಈ ಮರುಚುನಾವಣೆಯ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳಿದ್ದು, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಮಂಗಳವಾರ (ಮೇ 19) ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರೂ, ಅಧಿಕೃತವಾಗಿ ನಾಮಪತ್ರ ಹಿಂಪಡೆಯುವ ಅವಧಿ ಮುಗಿದಿದ್ದರಿಂದ ಅವರ ಹೆಸರು ಇವಿಎಂ (EVM) ಯಂತ್ರಗಳಲ್ಲೇ ಮುಂದುವರಿದಿದೆ. ಕಣದಲ್ಲಿರುವ ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ಬಿಜೆಪಿಯ ದೆಬಾಂಗ್ಶು ಪಾಂಡಾ, ಸಿಪಿಐ(ಎಂ)ನ ಶಂಭು ನಾಥ್ ಕುರ್ಮಿ ಮತ್ತು ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ ಸೇರಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಫಾಲ್ಟಾ ಜನತೆಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದಾರೆ, ಹಾಗಾಗಿ ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿಯ ಹಿತದೃಷ್ಟಿಯಿಂದ ನಾನು ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಖಾನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಳೆದ ತಿಂಗಳು ಚುನಾವಣೆಗೂ ಮುನ್ನ ದಕ್ಷಿಣ 24 ಪರಗಣ ಜಿಲ್ಲೆಗೆ ವಿಶೇಷ ವೀಕ್ಷಕರಾಗಿ ಬಂದಿದ್ದ ಉತ್ತರ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ಚುನಾವಣಾ ಅಕ್ರಮ ಎಸಗದಂತೆ ಎಚ್ಚರಿಕೆ ನೀಡಿದ್ದಾಗ ಜಹಾಂಗೀರ್ ಖಾನ್ ಜೊತೆಗೆ ತೀವ್ರ ವಾಗ್ವಾದ ನಡೆದಿತ್ತು.
ಈ ಘಟನೆಯಿಂದಾಗಿ ಜಹಾಂಗೀರ್ ಖಾನ್ ಭಾರಿ ಸುದ್ದಿಯಾಗಿದ್ದರು. ಇದು ಎರಡನೇ ಹಂತದ ಮತದಾನಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ತಮ್ಮನ್ನು ತಾವು ಫಾಲ್ಟಾ ಕ್ಷೇತ್ರದ ಪುಷ್ಪ (ಅಲ್ಲು ಅರ್ಜುನ್ ಅಭಿನಯದ ಸಿನೆಮಾ ಉಲ್ಲೇಖಿಸಿ) ಎಂದು ಕರೆದುಕೊಳ್ಳುತ್ತಿದ್ದ ಜಹಾಂಗೀರ್ ಖಾನ್, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ.
ಖಾನ್ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಪುಷ್ಪ ಚಿತ್ರದ ಡೈಲಾಗ್ ಬಳಸಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನೇಕರು ಪುಷ್ಪ ಆಗಲು ಪ್ರಯತ್ನಿಸುತ್ತಾರೆ ಆದರೆ ಈ ಬಾರಿ ಪುಷ್ಪ ಫುಸ್ಸ್ (ಫ್ಲಾಪ್) ಆಗಿದೆ. ಡೈಮಂಡ್ ಹಾರ್ಬರ್‌ನಲ್ಲಿ ಎಬಿ ಜುಖೇಗಾ ನಹೀ (ಅಭಿಷೇಕ್ ಬ್ಯಾನರ್ಜಿ ಬಗ್ಗುವುದಿಲ್ಲ) ಎಂಬ ಪೋಸ್ಟರ್‌ಗಳಿದ್ದವು. ಆದರೆ ಈಗ ಅವರ ಏಜೆಂಟ್ ಬಗ್ಗಿದ್ದಾನೆ, ಮುಂದೆ ಎಬಿಯ ಆರ್ಚರಿ ಕೂಡ ಬಗ್ಗಲಿದೆ ಎಂದು ಲೇವಡಿ ಮಾಡಿದ್ದಾರೆ.
ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಚುನಾವಣಾ ಬೂತ್‌ಗಳಲ್ಲಿ ಕೂರಲು ಕನಿಷ್ಠ ಏಜೆಂಟರೂ ಸಿಗದ ಕಾರಣಕ್ಕಾಗಿಯೇ ಅವನು ಕಣದಿಂದ ಓಡಿಹೋಗಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ. ಫಾಲ್ಟಾ ಕ್ಷೇತ್ರದ ಈ ಮರುಚುನಾವಣೆಯಲ್ಲಿ 1.15 ಲಕ್ಷ ಮಹಿಳೆಯರು ಹಾಗೂ ಒಂಬತ್ತು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2.36 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net