ನಾರಿಶಕ್ತಿಗೆ ವಂದನೆ ಅಭಿನಂದನೆ ಹೇಳುವ ಸಮಯ...

 ಅಶ್ವಿನಿ ಭಿಡೆ ಮತ್ತು ರೀತು ತಾವ್ಡೆ
ಅಶ್ವಿನಿ ಭಿಡೆ ಮತ್ತು ರೀತು ತಾವ್ಡೆ
Published on

ಮುಂಬೈ ಪಾಲಿಕೆ ವಿಶೇಷ ಇಲ್ಲಿಗೇ ಮುಗಿಯಲಿಲ್ಲ. ಎರಡು ತಿಂಗಳ ಹಿಂದಷ್ಟೇ ನೂತನ ಆಡಳಿತ ಅಧಿಕಾರ ವಹಿಸಿಕೊಂಡಿದೆ. ಘಾಟ್ಕೋಪರ್ ವಾರ್ಡನ್ನು ಪ್ರತಿನಿಧಿಸುವ, ಈ ಹಿಂದೆ ಕಾಂಗ್ರೆಸ್​ನಲ್ಲಿದ್ದು 2012ರಲ್ಲಿ ಬಿಜೆಪಿ ಸೇರಿರುವ ರೀತು ತಾವ್ಡೆ ಮೇಯರ್ ಆಗಿದ್ದಾರೆ. ಮಹಾರಾಷ್ಟ್ರ ನಗರಾಭಿವೃದ್ಧಿ ಇಲಾಖೆಯು ಲಾಟರಿ ವ್ಯವಸ್ಥೆ ಮೂಲಕ ಮೇಯರ್ ಸ್ಥಾನ ಯಾರಿಗೆಂದು ನಿರ್ಣಯಿಸಿದ್ದು, ಸಾಮಾನ್ಯ ವರ್ಗದ ಮಹಿಳೆಗೆ ದೊರಕಿತ್ತು. ಶಿವಸೇನೆ ಉದ್ಧವ್ ಠಾಕ್ರೆ ಬಣದ ಕಿಶೋರಿ ಪೆಡ್ನೆಕರ್ ವಿಪಕ್ಷ ನಾಯಕಿ. ಸುಧಾರಣೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ಕ್ರಮವಾಗಿ ಸಂಧ್ಯಾ ದೋಶಿ ಮತ್ತು ರಾಜಶ್ರೀ ಶಿರವಾಡಕರ್ ಮುಖ್ಯಸ್ಥರು. ಇಷ್ಟೇ ಅಲ್ಲ, ಮುನ್ಸಿಪಲ್ ಸೆಕ್ರೆಟರಿ ಆಗಿರುವವರು ಮಂಜಿರಿ ದೇಶಪಾಂಡೆ. ಒಟ್ಟಿನಲ್ಲಿ ಮುಂಬೈಯಲ್ಲಿ ಮಹಿಳೆಯರ ರಾಜ್ಯಭಾರ ಎಂದು ಹೇಳಬಹುದು. ‘ಇದು ಮುಂಬೈಗೆ ಹೆಮ್ಮೆಯ ವಿಷಯ’ ಎಂದು ರೀತು ತಾವ್ಡೆ ಹೇಳುತ್ತಾರೆ.

ಇತ್ತ, ಬೆಂಗಳೂರಲ್ಲಿ ಪಾಲಿಕೆಗೆ ಜನಪ್ರತಿನಿಧಿಗಳು ಇಲ್ಲದೆ ಐದು ವರ್ಷ ಆಗಿದ್ದು, ಈಗ ಅಂತೂ ಚುನಾವಣೆ ನಡೆಯುವ ಸಾಧ್ಯತೆ ಗೋಚರಿಸಿದೆ. ಯಾವಾಗ ನಡೆಯುತ್ತದೆ ಅಂತ ನೋಡಬೇಕಷ್ಟೆ. ಇಲ್ಲೀಗ ಹಳೆಯ ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಎಲ್ಲ ಐದು ಪಾಲಿಕೆಗಳು ಸೇರಿ ಒಟ್ಟು 369 ವಾರ್ಡಗಳಿದ್ದು, ಮಹಿಳೆಯರಿಗೆ 176 ಸೀಟುಗಳನ್ನು ಮೀಸಲಿಡಲಾಗಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50 ಮೀಸಲಾತಿ ಇದ್ದು, ಆ ಲೆಕ್ಕದಲ್ಲಿ ಬೆಂಗಳೂರಲ್ಲಿ 185 ಸೀಟು ಸಿಗಬೇಕಿತ್ತು, ಒಂಬತ್ತು ಕಡಿಮೆಯಾಗಿದೆ. ಹಾಗೇ, ರಾಜ್ಯದಲ್ಲಿ ಸಾವಿರದಷ್ಟು ಹೊರತುಪಡಿಸಿ ಉಳಿದ ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯಬೇಕಿದೆ.

ಮೀಸಲಾತಿ ಸನಿಹ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ನೀಡುವ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿರುವ ಕಾರಣಕ್ಕೆ ಇವೆಲ್ಲ ನೆನಪಾಯಿತು. ಈ ಚರ್ಚೆ ಮೂರು ದಶಕಗಳಿಂದ ಇದ್ದರೂ, ಅಂತೂ ಈಗ ಸಾಧ್ಯವಾಗುವ ಲಕ್ಷಣ ಕಾಣುತ್ತಿದೆ. ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತದೆ. ಆ ಲೆಕ್ಕದಲ್ಲಿ 2011ರ ನಂತರ 2021ರಲ್ಲಿ ನಡೆಯಬೇಕಿತ್ತು. ಆದರೆ ಕರೋನಾ ಕಾರಣಕ್ಕೆ ನಡೆಸಲಿಲ್ಲ. ಈಗ ಜನಗಣತಿ ಪ್ರಕ್ರಿಯೆಗೆ ಚಾಲನೆ ದೊರಕಿದ್ದು ಮೊದಲ ಹಂತದಲ್ಲಿ ಜನರು ಸ್ವಯಂಗಣತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಏಪ್ರಿಲ್ 1ರಿಂದ 15ರವರೆಗೆ ಇದು ನಡೆಯುತ್ತದೆ. ಎರಡನೇ ಹಂತವಾಗಿ, 2017ರಲ್ಲಿ ಜನಸಂಖ್ಯೆ ಎಣಿಕೆ ನಡೆಯುತ್ತದೆ. ಈ ಸಲ ಜನಗಣತಿಯಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಗಣತಿ ಮುಗಿದ ಬಳಿಕ ತ್ವರಿತವಾಗಿ ಅಂಕಿಅಂಶಗಳನ್ನು ಕ್ರೋಡೀಕರಿಸಿ ವರದಿ ತಯಾರಿಸಲು ಸುಲಭವಾಗುತ್ತದೆ. ಹಿಂದೆಲ್ಲ ಇದಕ್ಕೆ ಬಹು ಸಮಯ ಹಿಡಿಯುತ್ತಿತ್ತು. ಹೀಗಿದ್ದರೂ, ಮಹಿಳಾ ಮೀಸಲಾತಿ ಜಾರಿಗೆ ತರಲು ಈ ಜನಗಣತಿ ವರದಿ ತಡ ಆಗುವುದರಿಂದ 2011ರ ಗಣತಿ ವರದಿ ಆಧಾರದಲ್ಲೇ ನಿಗದಿ ಮಾಡಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ ಒಮ್ಮತ ಮೂಡಿಸುವ ಯತ್ನ ನಡೆಯುತ್ತಿದೆ. ಈ ಮೀಸಲಾತಿ ಜಾರಿಗೆ ಬಂದರೆ ದೇಶದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಈಗ ಇರುವ 543ರಿಂದ 816ಕ್ಕೆ ಹೆಚ್ಚುವ ಸಾಧ್ಯತೆ ಇದೆ. ಇದರಲ್ಲಿ ಮಹಿಳೆಯರಿಗೆ 273 ಸ್ಥಾನಗಳು ಮೀಸಲಾಗಿರಲಿವೆ. ಈ ವಿಷಯ ರ್ಚಚಿಸಲು ಕೇಂದ್ರ ಸರ್ಕಾರ ಇದೇ ಏಪ್ರಿಲ್ 16ರಿಂದ 18ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಈಗಿನ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಲಾಭ ಎತ್ತುವಳಿ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ಈ ವಿಷಯದಲ್ಲಿ ಅವಸರ ಮಾಡುತ್ತಿದೆ ವಿನಾ ನೈಜ ಕಾಳಜಿಯಿಂದಲ್ಲ ಎಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಟೀಕಿಸಿವೆ. ಮಹಿಳಾ ಮೀಸಲಾತಿ ಮಸೂದೆ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಹೆಸರಿನಲ್ಲಿ ಈಗಾಗಲೇ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿದೆ. ಅದಕ್ಕೆ ರಾಷ್ಟ್ರಪತಿಗಳ ಸಹಿ ಕೂಡ ಆಗಿ ಕಾನೂನು ಆಗಿದೆ. ಆದರೆ ಇನ್ನೂ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರ ಈಗ ನಾರಿ ಶಕ್ತಿ ವಂದನ್ ಕಾಯಿದೆ, 2023 ಹಾಗೂ ಕ್ಷೇತ್ರ ಮರು ವಿಂಗಡಣೆ ವಿಧೇಯಕಗಳನ್ನು ಮಂಡಿಸಿ ಸಂಸತ್ತಿನ ಅಂಗೀಕಾರ ಪಡೆಯುವ ಆಲೋಚನೆ ಹೊಂದಿದೆ. ಇದರಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಸಹ ಸೇರಿದೆ. ಇವೆಲ್ಲ ಅಂಗೀಕಾರವಾಗಿ ಕಾನೂನಾಗಿ ಜಾರಿಗೆ ಬಂದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಸ್ಥಾನಗಳನ್ನು ಮೀಸಲಿರಿಸಬೇಕಾಗುತ್ತದೆ. 2029ರ ಲೋಕಸಭಾ ಚುನಾವಣೆಯಲ್ಲಿ ಇದರನ್ವಯ ಕ್ಷೇತ್ರ ಹಂಚಿಕೆಯಾಗುವ ನಿರೀಕ್ಷೆ ಇದೆ.

ಮಹಿಳೆಯರ ಮಹತ್ವ: ದೇಶದ ಒಟ್ಟು ಮತದಾರರಲ್ಲಿ ಮಹಿಳೆಯರ ಸಂಖ್ಯೆ ಸರಿಸುಮಾರು ಅರ್ಧದಷ್ಟು ಇದ್ದರೂ ರಾಜಕೀಯ ಪಕ್ಷಗಳು ಈಚಿನ ವರ್ಷಗಳಲ್ಲಿ ಹೆಚ್ಚು ಆದ್ಯತೆ ನೀಡುತ್ತಿವೆ. ಬಿಹಾರದ ನಿತೀಶ್ ಕುಮಾರ್ ಅವರಂಥ ಚತುರ ನಾಯಕ ಚುನಾವಣಾ ರಾಜಕೀಯದಲ್ಲಿ ಮಹಿಳೆಯರ ಪ್ರಾಮುಖ್ಯವನ್ನು ಚೆನ್ನಾಗಿ ಅರಿತು ಹಲವು ವರ್ಷಗಳ ಹಿಂದೆಯೇ ಮಹಿಳಾಪರ ಯೋಜನೆಗಳನ್ನು ರೂಪಿಸಿ ಒಂದರ್ಥದಲ್ಲಿ ಮಹಿಳಾ ವೋಟ್ ಬ್ಯಾಂಕ್ ಅನ್ನೇ ನಿರ್ವಿುಸಿಕೊಂಡ ಉದಾಹರಣೆ ಸಹ ಇದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಸಹ ಚುನಾವಣೆ ಗೆಲುವಿನಲ್ಲಿ ಮಹಿಳಾ ಮತದಾರರು ಹೇಗೆ ನಿರ್ಣಾಯಕವಾಗಬಲ್ಲರು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ.

ಈಗಿಗಂತೂ, ಚುನಾವಣಾ ಪ್ರಣಾಳಿಕೆಯಲ್ಲಿ ನಗದು ಕೊಡುಗೆಯೂ ಸೇರಿದಂತೆ ಮಹಿಳಾ ಕೇಂದ್ರಿತ ಯೋಜನೆಗಳನ್ನು ಘೊಷಿಸುವುದು ಅನಿವಾರ್ಯ ಎಂಬ ಸನ್ನಿವೇಶ ಸೃಷ್ಟಿಯಾಗಿಬಿಟ್ಟಿದೆ. ಇದಲ್ಲದೆ, ಬಜೆಟ್​ನಲ್ಲೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಪ್ರಕಟಿಸುವ ಪರಿಪಾಠ ಚಾಲ್ತಿಯಲ್ಲಿದೆ. ಕರ್ನಾಟಕದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದೇ ಏಪ್ರಿಲ್​ನಲ್ಲಿ ನಡೆಯಲಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸಹ ಮಹಿಳಾ ಮತದಾರರ ಬಗ್ಗೆ ಹೆಚ್ಚು ಗಮನ ನೀಡಲಾಗಿದೆ. ದೇಶದ ಇತರ ರಾಜ್ಯಗಳ ಹಾಗೆ ಈ ರಾಜ್ಯಗಳಲ್ಲಿ ಕೂಡ ಜನಸಂಖ್ಯೆಗೆ ಹೋಲಿಸಿದರೆ ಮಹಿಳಾ ಜನಪ್ರತಿನಿಧಿಗಳ ಪ್ರಮಾಣ ಕಡಿಮೆಯೇ ಇದೆ. ಇದೇನೇ ಇದ್ದರೂ ಕೆಲವು ಪಕ್ಷ ಅಥವಾ ನಾಯಕರಿಗೆ ಮಹಿಳೆಯರ ಪ್ರಬಲ ಆಶೀರ್ವಾದ ಇದೆ ಎಂಬುದು ಗಮನಾರ್ಹ. ಪಶ್ಚಿಮ ಬಂಗಾಳವನ್ನೇ ತೆಗೆದುಕೊಂಡರೆ, ಮೈತ್ರಿಕೂಟದ ಮೂಲಕ ಚುನಾವಣೆಗೆ ಸ್ಪರ್ಧಿಸಲಿ ಅಥವಾ ಏಕಾಂಗಿಯಾಗಿ ಕಣಕ್ಕೆ ಹೋಗಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಶೇಕಡ 50ರಷ್ಟು ಮಹಿಳಾ ಮತಗಳನ್ನು ನಿರಂತರವಾಗಿ ಪಡೆಯುತ್ತ ಬಂದಿದೆ. ದೀದಿ ಮೇಲೆ ಅಷ್ಟು ಅಕ್ಕರೆ. ಬಂಗಾಳದಲ್ಲಿ ಬಿಜೆಪಿ ಸಹ ಮಹಿಳಾ ಮತದಾರರ ಮತ ಪಡೆಯುವಲ್ಲಿ ಕ್ರಮೇಣ ಯಶಸ್ಸು ಕಾಣುತ್ತ ಬಂದಿದೆ. 2011 ಮತ್ತು 2016ರಲ್ಲಿ ಈ ಪ್ರಮಾಣ ಕ್ರಮವಾಗಿ ಶೇಕಡ 4 ಮತ್ತು 10 ಇದ್ದುದು 2021ರ ಹೊತ್ತಿಗೆ ಶೇಕಡ 36ಕ್ಕೆ ಏರಿದೆ. ಇನ್ನು ತಮಿಳುನಾಡಿನಲ್ಲಿ ನೋಡುವುದಾದರೆ ಮಹಿಳೆಯರ ಒಲವು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಹಂಚಿಕೆಯಾಗುತ್ತ ಬಂದಿದೆ. 2016ರಲ್ಲಿ ಎಐಎಡಿಎಂಕೆ ಶೇಕಡ 46 ಮತ ಪ್ರಮಾಣ ಗಳಿಸಿದ್ದರೆ, 2021ರಲ್ಲಿ ಡಿಎಂಕೆ ಶೇಕಡ 45 ಮಹಿಳಾ ಮತಗಳನ್ನು ತನ್ನದಾಗಿಸಿಕೊಂಡಿತ್ತು. ಅಸ್ಸಾಂನಲ್ಲಿ ಈ ಹಿಂದೆ ಕಾಂಗ್ರೆಸ್ ಹೆಚ್ಚು ಮತ ಪ್ರಮಾಣ ಹೊಂದಿದ್ದರೆ ಈಗ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕ ಮತಗಳನ್ನು ಪಡೆಯುತ್ತಿದೆ. 2011ರಲ್ಲಿ ಕಾಂಗ್ರೆಸ್ಸಿಗೆ ಶೇಕಡ 39ರಷ್ಟು ಮತ ಗಳಿಕೆ ಆಗಿದ್ದರೆ 2021ರ ವೇಳೆಗೆ ಬಿಜೆಪಿ ಶೇಕಡ 44 ಮಹಿಳಾ ಮತಗಳನ್ನು ತನ್ನದಾಗಿಸಿಕೊಂಡಿತ್ತು. ಈ ಸಲ ಯಾರ ಒಲವು ಯಾರತ್ತ ಎಂಬುದು ಮೇ 4ರಂದು ಬಹಿರಂಗವಾಗಲಿದೆ.

ಕೊನೇ ಮಾತು: ಮಹಿಳಾ ಮೀಸಲಾತಿ ನೀತಿ ಜಾರಿಯಾದಲ್ಲಿ ಪಂಚಾಯಿತಿ ವ್ಯವಸ್ಥೆಗಳ ಹಾಗೆ ಶಾಸನಸಭೆಗಳಲ್ಲೂ ಸ್ತ್ರೀಯರ ಹಾಜರಾತಿ ಹೆಚ್ಚುತ್ತದೆ. ಆಗ, ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂಬ ಸೊಲ್ಲು ದೇಶದ ಎಲ್ಲೆಡೆಯಲ್ಲೂ ಪ್ರತಿಧ್ವನಿಸಬಹುದು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net