ರಾಜಕೀಯದಲ್ಲಿ ಇನ್ನು ಸ್ತ್ರೀಯುಗ!

ರಾಜಕೀಯದಲ್ಲಿ ಇನ್ನು ಸ್ತ್ರೀಯುಗ!
ರಾಜಕೀಯದಲ್ಲಿ ಇನ್ನು ಸ್ತ್ರೀಯುಗ!
Published on
ಶೀಘ್ರದಲ್ಲೇ ದೇಶದ ರಾಜಕೀಯದಲ್ಲಿ ಪ್ರಮೀಳಾ ಸಾಮ್ರಾಜ್ಯ ಸೃಷ್ಟಿಯಾಗಲಿದ್ದು, ದಶಕಗಳ ಅಸಮತೋಲನ ನಿವಾರಣೆ ಆಗಲಿದೆ. ರಾಜನೀತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು ಎಂಬುದು ಭಾಷಣ, ಸಂವಾದಗಳಿಗೆ ಸೀಮಿತವಾಗಿತ್ತು. ಆದರೆ, 2029ರ ಲೋಕಸಭೆ ಚುನಾವಣೆಯ ಮುನ್ನ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಜಾರಿಯ ಪ್ರಕ್ರಿಯೆ ಪೂರ್ಣಗೊಳಿಸಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. 2026 ಹಾಗೂ 2027ರಲ್ಲಿ ನಡೆಯುವ ಜನಗಣತಿಯ ವರದಿ ಆಧಾರದ ಮೇಲೆ ಮಹಿಳಾ ಮೀಸಲಾತಿಯ ಜಾರಿ ನಿಯಮಗಳು ಕೂಡ ನಿರ್ಧಾರವಾಗಲಿವೆ. ಲೋಕಸಭೆ ಸದಸ್ಯರ ಸಂಖ್ಯೆ ಪ್ರಸ್ತುತ 543 ಇದ್ದದ್ದು 816ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಮಹಿಳೆಯರಿಗೆ 273 ಕ್ಷೇತ್ರಗಳು ಮೀಸಲಾಗಲಿವೆ.
ಗೃಹ ಸಚಿವ ಅಮಿತ್ ಷಾ ಸೋಮವಾರ ಈ ಸಂಬಂಧ ಎನ್​ಡಿಎ ಮತ್ತು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಸಮಾಜವಾದಿ ಪಕ್ಷ, ವೈಎಸ್​ಆರ್ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ), ರಾಷ್ಟ್ರೀಯ ಜನತಾ ದಳ, ಎಐಎಂಐಎಂ, ಬಿಜು ಜನತಾದಳ, ಶಿವಸೇನಾ
ಲೋಕಸಭೆಯ ಈಗಿನ ಒಟ್ಟು ಸಂಸದರು - 541
ಮಹಿಳೆಯರು-  74
ಒಟ್ಟು ಸದಸ್ಯರಲ್ಲಿ ಪ್ರಾತಿನಿಧ್ಯ-  13.9%
ರಾಜ್ಯಸಭೆಯ ಹಾಲಿ ಒಟ್ಟು ಸದಸ್ಯರು-  242
ಮಹಿಳೆಯರು-  41
ಒಟ್ಟು ಸದಸ್ಯರಲ್ಲಿ ಪ್ರಾತಿನಿಧ್ಯ- 16.9%

ಎಲ್ಲಿ, ಎಷ್ಟು ಮಹಿಳಾ ಸಂಸದರು?

ಪಶ್ಚಿಮ ಬಂಗಾಳ - 11
ಉತ್ತರ ಪ್ರದೇಶ - 7
ಮಹಾರಾಷ್ಟ್ರ- 7
ಮಧ್ಯಪ್ರದೇಶ - 6
ತಮಿಳುನಾಡು - 5
ಬಿಹಾರ - 5
ಗುಜರಾತ್ - 4
ಒಡಿಶಾ - 4
ರಾಜಸ್ಥಾನ - 3
ಕರ್ನಾಟಕ - 3
ಛತ್ತೀಸ್​ಗಢ - 3
ಆಂಧ್ರಪ್ರದೇಶ - 3
ತೆಲಂಗಾಣ - 2
ದೆಹಲಿ - 2
ಜಾರ್ಖಂಡ್ - 2
ಉತ್ತರಾಖಂಡ - 1
ತ್ರಿಪುರಾ - 1
ಪಂಜಾಬ್ - 1
ಕೇರಳ - 1
ಹಿಮಾಚಲ ಪ್ರದೇಶ  - 1
ಹರಿಯಾಣ - 1
ಅಸ್ಸಾಂ - 1
ದಮನ್-ದಿಯು - 1

ಹೆಚ್ಚಲಿವೆ ಕ್ಷೇತ್ರಗಳು

ಮಹಿಳಾ ಮೀಸಲಾತಿಯ ಬಳಿಕ ಲೋಕಸಭೆಯ ಕ್ಷೇತ್ರಗಳು ಗರಿಷ್ಠ ಸಂಖ್ಯೆಯಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚಲಿವೆ. ಪ್ರಸ್ತುತ, ಉತ್ತರ ಪ್ರದೇಶ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, 120ಕ್ಕೆ ಏರಿಕೆಯಾಗಲಿದೆ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 24 ಕ್ಷೇತ್ರ ಮೀಸಲಾಗಲಿವೆ. ಈ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 48ರಿಂದ 72ಕ್ಕೆ ಏರಿಕೆ ಆಗಲಿವೆ. ಬಿಹಾರದಲ್ಲಿ ಮಹಿಳೆಯರಿಗೆ 20 ಕ್ಷೇತ್ರಗಳು ಮೀಸಲಾಗಲಿವೆ. ಇಲ್ಲಿ ಲೋಕಸಭಾ ಕ್ಷೇತ್ರಗಳು 40ರಿಂದ 60ಕ್ಕೆ ತಲುಪಲಿವೆ. ಮೂಲಗಳ ಪ್ರಕಾರ, ತಮಿಳುನಾಡಿನಲ್ಲಿ ಮಹಿಳೆಯರಿಗೆ 20 ಕ್ಷೇತ್ರ, ಮಧ್ಯಪ್ರದೇಶದಲ್ಲಿ 15 ಕ್ಷೇತ್ರ, ಕರ್ನಾಟಕದಲ್ಲಿ 14, ಜಾರ್ಖಂಡ್​ನಲ್ಲಿ 7 ಹಾಗೂ ದೆಹಲಿಯಲ್ಲಿ 4 ಸ್ಥಾನ ಮೀಸಲಾಗುವ ಸಾಧ್ಯತೆ ಇದೆ.
(ಉದ್ಧವ್ ಠಾಕ್ರೆ ಬಣ) ಪಕ್ಷದ ಮುಖಂಡರೊಂದಿಗೆ ಷಾ ಸಮಾಲೋಚನೆ ನಡೆಸಿದ್ದು, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಯಬೇಕಿದೆ.
ಜನಗಣತಿ ವರದಿಯ ಆಧಾರದ ಮೇಲೆ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗುವುದರಿಂದ 2011ರ ಜನಗಣತಿ ವರದಿ ಆಧಾರದ ಮೇಲೆಯೇ ಮಹಿಳಾ ಮೀಸಲಾತಿಗೆ ಕ್ಷೇತ್ರ ನಿಗದಿಗೊಳಿಸಲು ಕೇಂದ್ರ ಸರ್ಕಾರ ಒಲವು ತೋರಿದೆ. ಇದಕ್ಕೆ ಪ್ರತಿಪಕ್ಷಗಳ ವಿರೋಧವಿದೆ. ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಸಭೆಗಳು ನಡೆಯುತ್ತಿದ್ದು, ಇನ್ನು ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅದೇನೇ ಇದ್ದರೂ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇದರ ನೇರ ಪರಿಣಾಮ ದೇಶದ ರಾಜನೀತಿಯಲ್ಲಿ ಕಂಡುಬರಲಿದೆ. 2023ರಲ್ಲಿ ಅಂಗೀಕರಿಸಲಾದ ‘ನಾರಿ ಶಕ್ತಿ ವಂದನ್’ ಕಾನೂನಿನಲ್ಲಿ ಕೆಲ ಅಗತ್ಯ ತಿದ್ದುಪಡಿ ತರಲು ಕೇಂದ್ರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸಹಕಾರವನ್ನೂ ಬಯಸುತ್ತಿದೆ. ಮಹಿಳಾ ಮೀಸಲಾತಿ ಜಾರಿಗೆ ಬಂದ ದಿನದಿಂದ 15 ವರ್ಷಗಳ ಕಾಲ ಜಾರಿಯಲ್ಲಿ ಇರುತ್ತದೆ. ಅಗತ್ಯವಿದ್ದರೆ ಸಂಸತ್ತು ಇದನ್ನು ವಿಸ್ತರಿಸುವ ಅಧಿಕಾರ ಹೊಂದಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್​ಗಢ, ಜಾರ್ಖಂಡ್, ಕೇರಳ ಸಹಿತ ಕೆಲ ರಾಜ್ಯಗಳು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ಜಾರಿಗೊಳಿಸಿವೆ. ದೇಶದಲ್ಲಿ 1931ರಿಂದಲೂ ಮಹಿಳಾ ಮೀಸಲಾತಿಯ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಪ್ರಸ್ತುತ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇದೆಯಾದರೂ, ಸಂಸತ್ತಿನಲ್ಲಿ ಮಹಿಳಾ ಬಲ ಇನ್ನಷ್ಟು ಹೆಚ್ಚಲು 2029ರವರೆಗೆ ಕಾಯಬೇಕಿದೆ. ಮಹಿಳಾ ಮೀಸಲಾತಿ ಜಾರಿಯಾದರೆ ನೀತಿ ನಿರೂಪಣೆಯಲ್ಲಿ ಮಹಿಳಾ ದೃಷ್ಟಿಕೋನಕ್ಕೆ ಆದ್ಯತೆ ಸಿಗಲಿದೆ.

ಪ್ರಾತಿನಿಧ್ಯ ಇಲ್ಲ

ಗೋವಾ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರ, ಲಡಾಕ್, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ, ಚಂಡೀಗಢ, ಲಕ್ಷದ್ವೀಪ ಹಾಗೂ ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶಗಳು ಮಹಿಳಾ ಸಂಸದರನ್ನು ಹೊಂದಿಲ್ಲ.

ಸಾಗಿ ಬಂದ ಹಾದಿ

1996 ಸಂಯುಕ್ತ ರಂಗದ (ಯುನೈಟೆಡ್ ಫ್ರಂಟ್) ಎಚ್.ಡಿ. ದೇವೇಗೌಡರ ಸರ್ಕಾರ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತು. ಆದರೆ, ಸರ್ಕಾರಕ್ಕೆ ಬೆಂಬಲವಾಗಿದ್ದ ಮಿತ್ರಪಕ್ಷಗಳೇ ಮಸೂದೆಯನ್ನು ವಿರೋಧಿಸಿದ್ದರಿಂದ, ಇದನ್ನು ಸಂಸತ್ತಿನ ಸ್ಟಾ್ಯಂಡಿಗ್ ಕಮಿಟಿಗೆ ಕಳುಹಿಸಲಾಯಿತು.
1998: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಜುಲೈ 13ರಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಯತ್ನಿಸಿತು. ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಸಂಸದ ಸುರೇಂದ್ರ ಪ್ರಸಾದ್ ಯಾದವ್ ಮಸೂದೆಯ ಪ್ರತಿಯನ್ನೇ ಹರಿದು ಹಾಕಿದರು. ಬಳಿಕ, ಕಲಾಪ ಗದ್ದಲದಲ್ಲಿ ಮುಳುಗಿದ್ದರಿಂದ, ಮಸೂದೆ ನನೆಗುದಿಗೆ ಬಿತ್ತು.
1998: ವಾಜಪೇಯಿ ಸರ್ಕಾರ ಮರುದಿನವೇ ಅಂದರೆ ಜುಲೈ 14ರಂದು ಲೋಕಸಭೆಯಲ್ಲಿ ಮತ್ತೆ ಮಸೂದೆ ಮಂಡನೆಗೆ ಯತ್ನಿಸಿತಾದರೂ, ತೀವ್ರ ಕೋಲಾಹದ ಸ್ಥಿತಿಯ ನಡುವೆ ಅದು ಸಾಧ್ಯವಾಗಲಿಲ್ಲ.
1998: ಮಸೂದೆ ಮಂಡನೆಗೆ ಮೂರನೇ ಬಾರಿ (ಡಿಸೆಂಬರ್ 11) ನಡೆದ ಯತ್ನವೂ ವಿಫಲಗೊಂಡಿತು. ಸಮಾಜವಾದಿ ಪಕ್ಷದ ಸಂಸದ ದರೇಗಾ ಪ್ರಸಾದ್ ಹಾಗೂ ಕೆಲ ಸಂಸದರು ಸ್ಪೀಕರ್ ಪೋಡಿಯಂವರೆಗೆ ತಲುಪಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಆದ್ದರಿಂದ, ಮಸೂದೆ ಮಂಡನೆಯನ್ನು ಮುಂದೂಡಲಾಯಿತು.
1998: ಡಿಸೆಂಬರ್ 23ರಂದು ಕೊನೆಗೂ ವಾಜಪೇಯಿ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಲ್ಲಿ ಯಶಸ್ವಿಯಾಯಿತು. ಆದರೆ, ಸಂಯುಕ್ತ ಜನತಾದಳ (ಜೆಡಿಯು) ಪಕ್ಷದ ವಿರೋಧದ ಪರಿಣಾಮ ಮಸೂದೆ ಅಂಗೀಕಾರವಾಗಲಿಲ್ಲ.
2000: ಈ ಅವಧಿಯಲ್ಲೂ ಅಟಲ್ ಸರ್ಕಾರ ಮಸೂದೆ ಮಂಡನೆಗೆ ಯತ್ನಿಸಿತಾದರೂ, ಪ್ರಯತ್ನ ಸಫಲಗೊಳ್ಳಲಿಲ್ಲ.
2002: ಮಹಿಳಾ ಮೀಸಲಾತಿ ಅಗತ್ಯತೆ ಬಗ್ಗೆ ಸಹಮತ ಮೂಡಿಸಲು ವಾಜಪೇಯಿ ಸರ್ಕಾರ ನಡೆಸಿದ ಪ್ರಯತ್ನ ಯಾವುದೇ ಫಲ ನೀಡಲಿಲ್ಲ.
2003: ಆಗಿನ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಶಿ ಇದೇ ವಿಷಯಕ್ಕೆ ಸಂಬಂಧಿಸಿ, ಸರ್ವಪಕ್ಷಗಳ ಸಭೆ ಕರೆದರು. ಆದರೆ, ಒಮ್ಮತ ಮೂಡಿಸುವಲ್ಲಿ ವಿಫಲರಾದರು.
2008: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮೇ 6ರಂದು ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿತು. ಕಲಾಪದಲ್ಲಿ ತೀವ್ರ ಕೋಲಾಹಲ ಏರ್ಪಟ್ಟ ಪರಿಣಾಮ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು.
2010: ರಾಜ್ಯಸಭೆಯಲ್ಲಿ ಮಾರ್ಚ್ 9ರಂದು ಮಸೂದೆ ಮಂಡಿಸಲಾಯಿತು ಮತ್ತು ಬಹುಮತದಿಂದ ಅಂಗೀಕಾರಗೊಂಡಿತು ಕೂಡ. ಆದರೆ, ಲೋಕಸಭೆಯಲ್ಲಿ ಮಂಡನೆ ಮಾಡಲು ಸಾಧ್ಯವಾಗದ ಪರಿಣಾಮ, ಈ ಮಹತ್ವದ ಬಿಲ್ ಲ್ಯಾಪ್ಸ್ ಆಗಿ ಹೋಯಿತು.
2023: ಸೆಪ್ಟೆಂಬರ್​ನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ‘ನಾರಿ ಶಕ್ತಿ ವಂದನ್ ಅಧಿನಿಯಮ’ದ ರೂಪದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು.
ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ ಅಂಗೀಕಾರಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುಮು ಸಮ್ಮತಿಯ ಬಳಿಕ ಇದು ಕಾನೂನಾಗಿದೆ. ಆದರೆ, ಇನ್ನೂ ಜಾರಿಯಾಗಿಲ್ಲ. ಈ ಕಾನೂನನ್ನು ಜಾರಿಗೊಳಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಅಧಿಸೂಚನೆ ಜಾರಿ ಮಾಡುವ ಮೂಲಕ ತಿಳಿಸಲಿದೆ. ಈ ಕಾಯ್ದೆಯು ಭಾರತದ ಲೋಕಸಭೆ, ರಾಜ್ಯಗಳ ವಿಧಾನಸಭೆಗಳು ಹಾಗೂ ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಗುರಿ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net