ಆರೋಗ್ಯ, ಶಕ್ತಿ ಮತ್ತು ಯಶಸ್ಸು ನಿಮ್ಮದಾಗಲಿ!...ಪ್ರಧಾನಿ ಮೋದಿಗೆ ಜಾರ್ಜಿಯಾ ಮೆಲೋನಿ ಹೃದಯಸ್ಪರ್ಶಿ ಶುಭಹಾರೈಕೆ! | Giorgia Meloni Wish

Giorgia Meloni Wish
Giorgia Meloni Wish
Published on
Giorgia Meloni Wish: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಜಾಗತಿಕ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೆಲೋನಿ, ಪ್ರಧಾನಿ ಮೋದಿ ಅವರನ್ನು ತಮ್ಮ ಸ್ನೇಹಿತ ಎಂದು ಕರೆದಿದ್ದು, ಅವರಿಗೆ ಆರೋಗ್ಯ, ಶಕ್ತಿ ಮತ್ತು ಯಶಸ್ಸನ್ನು ಹಾರೈಸಿದ್ದಾರೆ.

ಮೆಲೋನಿ ಪೋಸ್ಟ್​!

ನನ್ನ ಸ್ನೇಹಿತ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಇಟಲಿ ಮತ್ತು ಭಾರತ ತಮ್ಮ ಆಳವಾದ ಸ್ನೇಹದ ಬಂಧವನ್ನು ಬಲಪಡಿಸುವುದನ್ನು ಮುಂದುವರಿಸುತ್ತಿದ್ದು, ನಮ್ಮ ರಾಷ್ಟ್ರಗಳ ಸಹಕಾರ ಮತ್ತು ಸಮೃದ್ಧಿಯ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸುತ್ತಿವೆ ಎಂದು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ಈ ವರ್ಷದ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿ ಅವರು ಇಟಲಿಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಮೆಲೋನಿ ಅವರೊಂದಿಗೆ ವಿವಿಧ ವಲಯಗಳ ಕುರಿತು ಚರ್ಚೆ ನಡೆಸಿದ್ದರು. ಈ ಭೇಟಿಯ ಸಮಯದಲ್ಲಿ, ಭಾರತ-ಇಟಲಿ ಬಾಂಧವ್ಯವನ್ನು ವಿಶೇಷ ಆಯಕಟ್ಟಿನ ಪಾಲುದಾರಿಕೆ ಹಂತಕ್ಕೆ ಏರಿಸಲಾಯಿತು.
ವ್ಲಾಡಿಮಿರ್ ಪುಟಿನ್ ವಿಶ್​!
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಪ್ರಧಾನಿ ಮೋದಿ ಅವರ 76ನೇ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮೋದಿಯವರ ವೈಯಕ್ತಿಕ ಕೊಡುಗೆಯನ್ನು ಪುಟಿನ್ ಶ್ಲಾಘಿಸಿದ್ದಾರೆ.
ನಿಮ್ಮ ದೇಶವಾಸಿಗಳಿಂದ ನೀವು ಅಪಾರ ಗೌರವವನ್ನು ಪಡೆಯುತ್ತಿದ್ದೀರಿ ಮತ್ತು ಜಾಗತಿಕ ವೇದಿಕೆಯಲ್ಲಿ ಉತ್ತಮ ಪ್ರಾಬಲ್ಯ ಹೊಂದಿದ್ದೀರಿ. ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಹಾಗೂ ಆದ್ಯತೆಯ ಆಯಕಟ್ಟಿನ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಪುಟಿನ್ ಹೇಳಿದ್ದಾರೆ.

ನೆತನ್ಯಾಹು ಶುಭಾಶಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಪ್ರಧಾನಿ ಮೋದಿಯವರಿಗೆ ಶುಭಾಶಯ ಕೋರಿದ್ದು, ಅವರ ನಾಯಕತ್ವವು ಭಾರತವನ್ನು ವಿಶ್ವದ ಬಲಶಾಲಿ ಶಕ್ತಿಯನ್ನಾಗಿ ಪರಿವರ್ತಿಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಭಾರತ ಹಾಗೂ ಇಸ್ರೇಲ್ ನಡುವೆ ಅಪರೂಪದ ಪಾಲುದಾರಿಕೆಯನ್ನು ನಿರ್ಮಿಸಿದ್ದಾರೆ ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಜನ್ಮದಿನದ ಶುಭಾಶಯಗಳು, ನರೇಂದ್ರ ಎಂದು ನೆತನ್ಯಾಹು ಹೇಳಿರುವುದಾಗಿ ಇಸ್ರೇಲ್ ಪ್ರಧಾನಿ ಕಾರ್ಯಾಲಯ ಉಲ್ಲೇಖಿಸಿದೆ. ಇಸ್ರೇಲ್ ಮತ್ತು ಭಾರತದ ನಡುವಿನ ಸ್ನೇಹವು ಎಂದಿಗೂ ಇಷ್ಟೊಂದು ಬಲವಾಗಿರಲಿಲ್ಲ, ಮತ್ತು ಒಟ್ಟಾಗಿ ನಾವು ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇವೆ. ನಿಮಗಾಗಿ ಇನ್ನು ಹಲವು ವರ್ಷಗಳ ನಾಯಕತ್ವ, ಆರೋಗ್ಯ ಮತ್ತು ಯಶಸ್ಸನ್ನು ಹಾರೈಸುತ್ತೇನೆ ಎಂದು ನೆತನ್ಯಾಹು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ 76ನೇ ಜನ್ಮದಿನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೇಶಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ಆಯೋಜಿಸುತ್ತಿದ್ದು, ಸರಣಿ ಸೇವಾ ಆಧಾರಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ಮೋದಿ ಕಾರ್ಯವನ್ನು ಗುರುತಿಸುವ ಅಂಗವಾಗಿ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.
ಬಿಜೆಪಿಯ ಈ ಅಭಿಯಾನವು ಒಂದು ತಿಂಗಳ ಕಾಲ ಮುಂದುವರಿಯಲು ಯೋಜಿಸಲಾಗಿದ್ದು, ಸೇವಾ ಆಧಾರಿತ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕವನ್ನು ಒಳಗೊಂಡಿದೆ. ರಕ್ತದಾನ ಶಿಬಿರಗಳು, ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸ್ವಚ್ಛತಾ ಅಭಿಯಾನಗಳು, ಯುವಜನ ಕಾರ್ಯಕ್ರಮಗಳು ಮತ್ತು ಇತರ ಉಪಕ್ರಮಗಳನ್ನು ಯೋಜಿತ ಚಟುವಟಿಕೆಗಳಲ್ಲಿ ಸೇರಿಸಲಾಗಿದೆ.
1950ರ ಸೆಪ್ಟೆಂಬರ್ 17 ರಂದು ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದ ಪ್ರಧಾನಿ ಮೋದಿ ಅವರು ಗುರುವಾರ 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಅಕ್ಟೋಬರ್ 7 ರಂದು ಸಾರ್ವಜನಿಕ ಅಧಿಕಾರದಲ್ಲಿ ಸತತ 25 ವರ್ಷಗಳನ್ನು ಪೂರೈಸಲಿದ್ದಾರೆ. 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಾರಂಭವಾದ ಅವರ ರಾಜಕೀಯ ಪಯಣ, 2014 ರಲ್ಲಿ ಪ್ರಧಾನಿಯಾಗುವ ಮೂಲಕ ಮುಂದುವರಿಯಿತು. ಅವರು 2014 ರಲ್ಲಿ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net