ಪತಿ&ಮಕ್ಕಳಿಲ್ಲದ ಮಹಿಳೆಯರು ವಿಲ್​ ಬರೆಸಿಟ್ಟರೆ ಉತ್ತಮ: ಸವೋರ್ಚ್ಚ ನ್ಯಾಯಾಲಯದ ಸಲಹೆ | ಸಂಭಾವ್ಯ ವಿವಾದ ತಪ್ಪಿಸುವ ಉದ್ದೇಶ

Supreme Court
Supreme Court
Published on
ನವದೆಹಲಿ: ಪತಿ, ಪುತ್ರ ಅಥವಾ ಪುತ್ರಿಯರಿಲ್ಲದ ಎಲ್ಲ ಮಹಿಳೆಯರು ಉಯಿಲು (ವಿಲ್​) ಬರೆಸುವುದು ಉತ್ತಮ ಎಂದು ಸುಪ್ರೀಂಕೋರ್ಟ್​ ಬುಧವಾರ ಸಲಹೆ ಮಾಡಿದೆ. ಪಾಲಕರು ಮತ್ತು ಅತ್ತೆ-&ಮಾವಂದಿರ ನಡುವೆ ಸಂಭಾವ್ಯ ವಿವಾದಗಳನ್ನು ನಿವಾರಿಸಲು ಇದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್​. ಮಹಾದೇವನ್​ ಇದ್ದ ಪೀಠ ಅಭಿಪ್ರಾಯಪಟ್ಟಿತು. 1956ರ ಹಿಂದೂ ಉತ್ತರಾಧಿಕಾರ ಕಾನೂನಿನ 15(1)(ಬಿ) ಸೆಕ್ಷನ್​ ಪ್ರಶ್ನಿಸಿ ಮಹಿಳಾ ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಮಹಿಳೆಯರಿಗೆ ಈ ಮನವಿ ಮಾಡಿತು.
ಮಹಿಳೆಯರು ಸ್ವಯಾರ್ಜಿತ ಆಸ್ತಿ ಹೊಂದಿರಲಾರರು ಎಂದು ಈ ಕಾನೂನನ್ನು ರೂಪಿಸುವ ವೇಳೆ ಸಂಸತ್ತು ಭಾವಿಸಿದ್ದಿರಬಹುದು. ಆದರೆ, ಇತ್ತೀಚಿನ ದಶಕಗಳಲ್ಲಿ ಮಹಿಳೆಯರ ಪ್ರಗತಿಯನ್ನು ಅಲಕ್ಷಿಸಲಾಗದು ಎಂದು ಉತ್ತರಾಧಿಕಾರ ಕಾನೂನನ್ನು ಪ್ರಸ್ತಾಪಿಸಿದ ನ್ಯಾಯ ಮೂರ್ತಿಗಳು ಹೇಳಿದರು. ಹಿಂದೂ ಮಹಿಳೆಯರ ಸಹಿತ ದೇಶದಲ್ಲಿ ಸ್ತ್ರೀಯರ ಶಿಕ್ಷಣ, ಉದ್ಯೋಗ, ಉದ್ಯಮಶೀಲತೆಯಿಂದಾಗಿ ಅವರೂ ಸ್ವಂತ ಆಸ್ತಿ ಗಳಿಸುತ್ತಿದ್ದಾರೆಂದು ಪೀಠ ಟಿಪ್ಪಣಿ ಮಾಡಿತು. ಪುತ್ರ, ಪುತ್ರಿ ಅಥವಾ ಪತಿ ಇಲ್ಲದ ಹಿಂದೂ ಮಹಿಳೆಯೊಬ್ಬಳು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಗಳು ಮಾತ್ರವೇ ಇಂಥ ಸ್ವಯಾರ್ಜಿತ ಸಂಪತ್ತಿನ ಉತ್ತರಾಧಿಕಾರಿ ಆಗಬೇಕಾದರೆ ಅದು ತಾಯಿ ಕುಟುಂಬಕ್ಕೆ ನೋವುಂಟು ಮಾಡಬಹುದು ಎಂದು ಕೋರ್ಟ್​ ಹೇಳಿತು.
ಅಂಗಾಂಗ ಕಸಿಗೆ ಏಕರೂಪದ ನಿಯಮ ರೂಪಿಸಿ: ಅಂಗಾಂಗ ಕಸಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಗಳೊಂದಿಗೆ ಸಮಾಲೋಚಿಸುವ ಮೂಲಕ ರಾಷ್ಟ್ರೀಯ ನೀತಿ ಮತ್ತು ಏಕರೂಪದ ನಿಯಮಗಳನ್ನು ರೂಪಿಸುವಂತೆ ಸುಪ್ರೀಂಕೋರ್ಟ್​ ಬುಧವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಭಾರತೀಯ ಅಂಗಾಂಗ ಕಸಿ ಸೊಸೈಟಿ ಸಲ್ಲಿಸಿದ ಪಿಐಎಲ್​ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್​. ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದ್​ ಚಂದ್ರನ್​ ಅವರನ್ನೊಳಗೊಂಡ ಪೀಠ ಈ ನಿರ್ದೇಶನಗಳನ್ನು ನೀಡಿದ್ದು, 1994ರ ಮಾನವ ಅಂಗಾಂಗ ಕಸಿ ಕಾಯ್ದೆಗೆ 2011ರ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದೆ. ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ನಿಯಮಗಳು, 2014ರ ಕಾಯ್ದೆಯನ್ನು ಇದುವರೆಗೂ ಅಳವಡಿಸಿಕೊಳ್ಳದ ಕರ್ನಾಟಕ, ತಮಿಳುನಾಡು, ಮಣಿಪುರದಂಥ ರಾಜ್ಯಗಳು ಇದರ ಮಹತ್ವ ಅರಿತು ತ್ವರಿತವಾಗಿ ಅನುಸರಿಸುವಂತೆ ನಿರ್ದೇಶಿಸಿತು.
ನಿಯಮಗಳ ರದ್ದು: ವಿವಿಧ ನ್ಯಾಯಮಂಡಳಿಗಳ (ಟ್ರಿಬ್ಯುನಲ್​) ಸದಸ್ಯರ ನೇಮಕಾತಿ, ಅವಧಿ ಮತ್ತು ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ 2021ರ ಟ್ರಿಬ್ಯುನಲ್​ಗಳ ಸುಧಾರಣೆ ಕಾನೂನಿನ ಕೆಲವು ನಿಯಮಗಳನ್ನು ಸುಪ್ರೀಂ ಕೋರ್ಟ್​ ಬುಧವಾರ ರದ್ದುಪಡಿಸಿದೆ. ಸಣ್ಣ ತಿದ್ದುಪಡಿಗಳೊಂದಿಗೆ ಅವುಗಳನ್ನು ಮತ್ತೆ ಕಾನೂನನ್ನಾಗಿ ಕೇಂದ್ರ ಸರ್ಕಾರ ರೂಪಿಸಿದೆ ಎಂದ ಪೀಠ, ಅವುಗಳನ್ನು ರದ್ದು ಮಾಡಿ ಆದೇಶಿಸಿತು.
ಶಾಲಾ ಕ್ರೀಡಾಕೂಟಕ್ಕೆ ಆಕ್ಷೇಪ: ದೆಹಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟು ವಿಷಯುಕ್ತವಾಗುತ್ತಿರುವುದ ರಿಂದ ನವೆಂಬರ್​&-ಡಿಸೆಂಬರ್​ನಲ್ಲಿ ದೆಹಲಿ&ಎನ್​ಸಿಆರ್​ ವ್ಯಾಪ್ತಿಯಲ್ಲಿ ನಿಗದಿಯಾಗಿರುವ ಶಾಲಾ ಕ್ರೀಡಾಕೂಟಗಳನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್​ ಸೂಚಿಸಿದೆ. ಎನ್​ಸಿಆರ್​ ವಲಯದ ಎಲ್ಲ ಶಾಲೆಗಳಿಗೆ ಈ ಸಂಬಂಧ ನಿರ್ದೇಶನ ನೀಡುವಂತೆ ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ (ಸಿಎಕ್ಯೂಎಂ) ಬುಧವಾರ ಸುಪ್ರೀಂ ಸಲಹೆ ಮಾಡಿತು. ಪತಿ&ಮಕ್ಕಳಿಲ್ಲದ ಮಹಿಳೆಯರು ವಿಲ್​ ಬರೆಸಿಟ್ಟರೆ ಉತ್ತಮ ವಿಷಮಯ ವಾತಾವರಣದಲ್ಲಿ ಕ್ರೀಡಾಕೂಟಗಳನ್ನು ನಡೆಸುವುದರಿಂದ ಮಕ್ಕಳನ್ನು ಗ್ಯಾಸ್​ ಚೇಂಬರ್​ಗೆ ತಳ್ಳಿದಂತಾಗುತ್ತದೆ ಎಂದು ಕೋರ್ಟ್​ನ ಅಮಿಕಸ್​ ಕ್ಯೂರಿಯಾದ ಹಿರಿಯ ನ್ಯಾಯವಾದಿ ಅಪರಾಜಿತಾ ಸಿಂಗ್​ ಕಳವಳ ವ್ಯಕ್ತಪಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net