ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಖಾಸಗಿ ವಲಯದ ಭಾಗವಹಿಸುವಿಕೆಯಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಕುಗ್ಗುತ್ತಿಲ್ಲ. ಬದಲಾಗಿ ಮತ್ತಷ್ಟು ವಿಸ್ತಾರಗೊಳ್ಳುತ್ತಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಖಾಸಗಿ ಕೈಗಾರಿಕೆಗಳು ರಾಕೆಟ್ ಉಪಗ್ರಹ ತಯಾರಿಕೆ ಮತ್ತು ಉಡಾವಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದರೆ, ಇಸ್ರೋ ತನ್ನ ಸಂಪೂರ್ಣ ಗಮನವನ್ನು ಗಗನಯಾನ, ಚಂದ್ರಯಾನ-4, ಭಾರತೀಯ ಅಂತರಿಕ್ಷ ನಿಲ್ದಾಣ, ಶುಕ್ರ, ಮಂಗಳ ಗ್ರಹಗಳ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. ಇದು ಇಸ್ರೋವನ್ನು ದುರ್ಬಲಗೊಳಿಸುವ ನಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಕಳೆದ 6 ದಶಕಗಳಲ್ಲಿ ವಿಕ್ರಮ್ ಸಾರಾಭಾಯ್, ಸತೀಶ್ ಧವನ್, ಬ್ರಹ್ಮಪ್ರಕಾಶ್, ಯು.ಆರ್. ರಾವ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಹಲವು ಶ್ರೇಷ್ಠ ವಿಜ್ಞಾನಿಗಳ ದೂರದೃಷ್ಟಿ, ನಾಯಕತ್ವ ಹಾಗೂ ಸಮರ್ಪಣಾ ಭಾವದಿಂದ ಇಸ್ರೋ ಹೆಮ್ಮರವಾಗಿ ಬೆಳೆದಿದೆ.