ಇಸ್ರೇಲ್-ಇರಾನ್ ಯುದ್ಧ: ಕಳವಳ ವ್ಯಕ್ತಪಡಿಸಿದ ಭಾರತ, ಪ್ರಜೆಗಳಿಗೆ ಬಿಗ್ ಅಲರ್ಟ್! | Israel-Iran war

Israel-Iran war
Israel-Iran war
Published on
ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ(Israel-Iran war) ಮತ್ತೆ ಯುದ್ಧದ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಉಭಯ ದೇಶಗಳು ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 100 ದಿನಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಈ ಸಂಘರ್ಷದಿಂದಾಗಿ ಲಕ್ಷಾಂತರ ಜನ ಸಾಮಾನ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಜಾಗತಿಕ ಆರ್ಥಿಕತೆ ಮತ್ತು ಕಚ್ಚಾ ತೈಲ (ಎನರ್ಜಿ ಸಪ್ಲೈ) ಪೂರೈಕೆಯ ಮೇಲೂ ಇದು ತೀವ್ರ ಪರಿಣಾಮ ಬೀರಿದೆ ಎಂದು ಭಾರತ ಕಳಕಳಿ ವ್ಯಕ್ತಪಡಿಸಿದೆ.

ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕಟ್ಟುನಿಟ್ಟಿನ ಸೂಚನೆ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೆ ಹೊಸ ಸುರಕ್ಷತಾ ಮಾರ್ಗಸೂಚಿಯನ್ನು (Advisory) ಬಿಡುಗಡೆ ಮಾಡಿದೆ.
ಇಸ್ರೇಲ್‌ನಲ್ಲಿರುವ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಸರ್ಕಾರ ನೀಡುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ತಮ್ಮ ಮನೆ ಮತ್ತು ಕೆಲಸದ ಸ್ಥಳಗಳ ಹತ್ತಿರ ಇರುವ ಸುರಕ್ಷಿತ ಆಶ್ರಯ ತಾಣಗಳನ್ನು (Shelters) ಮೊದಲೇ ಗುರುತಿಸಿ ಇಟ್ಟುಕೊಳ್ಳಬೇಕು.
ಸೈರನ್ ಸದ್ದ ಕೇಳಿಸಿದ ತಕ್ಷಣ ಆಶ್ರಯ ತಾಣಗಳಿಗೆ ಓಡಬೇಕು ಮತ್ತು ಅನಗತ್ಯವಾಗಿ ಎಲ್ಲೂ ಓಡಾಡಬಾರದು ಎಂದು ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿಗಾಗಿ ಭಾರತೀಯ ಮಿಷನ್ 24 ಗಂಟೆಯೂ ಕೆಲಸ ಮಾಡುವ ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದೆ.

ಇರಾನ್‌ನಿಂದ ತಕ್ಷಣವೇ ಹೊರಡಿ: ಸರ್ಕಾರದ ಆದೇಶ!

ಇನ್ನೊಂದೆಡೆ, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅತ್ಯಂತ ತುರ್ತು ಸೂಚನೆಯೊಂದನ್ನು ಹೊರಡಿಸಿದೆ. ಭಾರತೀಯರು ಸದ್ಯಕ್ಕೆ ಇರಾನ್ ದೇಶಕ್ಕೆ ಪ್ರವಾಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದೆ. ಈಗಾಗಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನವೇ ತಕ್ಷಣವೇ ಅಲ್ಲಿಂದ ಸ್ವದೇಶಕ್ಕೆ ಮರಳುವಂತೆ ಹೈ-ಪ್ರಯಾರಿಟಿ ಅಲರ್ಟ್ ನೀಡಲಾಗಿದೆ.
ಇಸ್ರೇಲ್ ಮತ್ತು ಇರಾನ್ ದೇಶಗಳು ಪರಸ್ಪರ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳನ್ನು ನಡೆಸುತ್ತಿರುವುದರಿಂದ ಗಡಿ ಭಾಗದಲ್ಲಿ ಹಾಗೂ ಸಮುದ್ರ ಮಾರ್ಗದಲ್ಲೂ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ಪ್ರಜೆಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net