ನಿಮ್ಮ ಫೋನ್‌ನಲ್ಲಿ ಯಾವಾಗಲೂ ಸಿಗ್ನಲ್ ಕಡಿಮೆ ಇರುತ್ತದೆಯೇ? ಫುಲ್ ನೆಟ್‌ವರ್ಕ್ ಪಡೆಯಲು ಈ 5 ತಂತ್ರಗಳನ್ನು ಅನುಸರಿಸಿ! | Network

 Network
Network
Published on
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ, ಅತಿ ಮುಖ್ಯವಾದ ಕೆಲಸದಲ್ಲಿರುವಾಗ ಅಥವಾ ತುರ್ತು ಕರೆ ಮಾಡುವಾಗ ಫೋನ್‌ನಲ್ಲಿ ಸಿಗ್ನಲ್ ಕೈಕೊಟ್ಟರೆ ಉಂಟಾಗುವ ಕಿರಿಕಿರಿ ಅಷ್ಟಿಷ್ಟಲ್ಲ. ಎಷ್ಟೋ ಬಾರಿ ಮನೆಯ ಒಳಗಡೆ ಅಥವಾ ಕೆಲವು ನಿರ್ದಿಷ್ಟ ಜಾಗಗಳಲ್ಲಿ ನೆಟ್‌ವರ್ಕ್ ಸಿಗುವುದೇ ಅಪರೂಪವಾಗುತ್ತದೆ. ನೀವು ಕೂಡ ಪದೇ ಪದೇ 'ಲೋ ಸಿಗ್ನಲ್' ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚಿಂತಿಸಬೇಡಿ. ನಿಮ್ಮ ಫೋನ್‌ನಲ್ಲಿ ಪೂರ್ಣ ನೆಟ್‌ವರ್ಕ್ ಪಡೆಯಲು ಇಲ್ಲಿವೆ ಐದು ಸರಳ ಮತ್ತು ಪರಿಣಾಮಕಾರಿ ತಂತ್ರಗಳು ಇಲ್ಲಿವೆ.

1. ಫ್ಲೈಟ್ ಮೋಡ್ (Flight Mode) ಆನ್ ಮತ್ತು ಆಫ್ ಮಾಡಿ

ಇದು ಅತ್ಯಂತ ಸರಳ ಮತ್ತು ವೇಗವಾದ ತಂತ್ರ. ನಿಮ್ಮ ಫೋನ್‌ನಲ್ಲಿ ಸಿಗ್ನಲ್ ಸರಿಯಾಗಿ ಸಿಗದಿದ್ದಾಗ, ಒಮ್ಮೆ 'ಫ್ಲೈಟ್ ಮೋಡ್' ಅನ್ನು ಆನ್ ಮಾಡಿ, ಕೆಲವು ಸೆಕೆಂಡುಗಳ ನಂತರ ಆಫ್ ಮಾಡಿ. ಹೀಗೆ ಮಾಡುವುದರಿಂದ ಫೋನ್ ಹತ್ತಿರದ ನೆಟ್‌ವರ್ಕ್ ಟವರ್‌ನೊಂದಿಗೆ ಹೊಸದಾಗಿ ಸಂಪರ್ಕ ಸಾಧಿಸುತ್ತದೆ, ಇದರಿಂದ ಸಿಗ್ನಲ್ ಸುಧಾರಿಸುವ ಸಾಧ್ಯತೆ ಹೆಚ್ಚು.

2. ಫೋನ್ ಕೇಸ್ (Phone Case) ಒಮ್ಮೆ ತೆಗೆದು ನೋಡಿ

ಕೆಲವೊಮ್ಮೆ ನಾವು ಬಳಸುವ ದಪ್ಪನೆಯ ಅಥವಾ ಲೋಹದ ಅಂಶವಿರುವ ಫೋನ್ ಕವರ್‌ಗಳು ಫೋನ್‌ನ ಒಳಗಿರುವ ಆಂಟೆನಾವನ್ನು ಮರೆಮಾಚುತ್ತವೆ. ಇದು ನೆಟ್‌ವರ್ಕ್ ಸ್ವೀಕರಿಸಲು ಅಡ್ಡಿಯಾಗಬಹುದು. ಸಿಗ್ನಲ್ ತುಂಬಾ ಕಡಿಮೆ ಇದ್ದಾಗ ಒಮ್ಮೆ ಫೋನ್ ಕೇಸ್ ತೆಗೆದು ನೆಟ್‌ವರ್ಕ್ ಚೆಕ್ ಮಾಡಿ.

3. ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಹಳೆಯದಾಗಿದ್ದರೂ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಂಪನಿಗಳು ಆಗಾಗ್ಗೆ ನೀಡುವ ಸಾಫ್ಟ್‌ವೇರ್ ಅಪ್‌ಡೇಟ್‌ಗಳಲ್ಲಿ ನೆಟ್‌ವರ್ಕ್ ಸುಧಾರಣೆಗೆ ಸಂಬಂಧಿಸಿದ 'ಪ್ಯಾಚ್‌ಗಳನ್ನು' ನೀಡಿರುತ್ತಾರೆ. ಆದ್ದರಿಂದ ನಿಮ್ಮ ಫೋನ್ ಅನ್ನು ಯಾವಾಗಲೂ ಅಪ್-ಟು-ಡೇಟ್ ಆಗಿ ಇಟ್ಟುಕೊಳ್ಳಿ.

4. ವೈ-ಫೈ ಕಾಲಿಂಗ್ (Wi-Fi Calling) ಬಳಸಿ

ಮನೆಯ ಒಳಗಡೆ ನೆಟ್‌ವರ್ಕ್ ತೀರಾ ಕಡಿಮೆ ಇದ್ದರೆ, ನೀವು 'ವೈ-ಫೈ ಕಾಲಿಂಗ್' ವೈಶಿಷ್ಟ್ಯವನ್ನು ಬಳಸಬಹುದು. ನಿಮ್ಮ ಫೋನ್‌ನಲ್ಲಿ ವೈ-ಫೈ ಕನೆಕ್ಷನ್ ಇದ್ದರೆ, ಸಿಗ್ನಲ್ ಇಲ್ಲದಿದ್ದರೂ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಬಳಸಿ ಉತ್ತಮ ಗುಣಮಟ್ಟದ ಕರೆಗಳನ್ನು ಮಾಡಬಹುದು. ಫೋನ್ ಸೆಟ್ಟಿಂಗ್ಸ್‌ನಲ್ಲಿ ಈ ಆಯ್ಕೆಯನ್ನು ಆನ್ ಮಾಡಿಕೊಳ್ಳಿ.

5. ನೆಟ್‌ವರ್ಕ್ ಸೆಟ್ಟಿಂಗ್ಸ್ ರೀಸೆಟ್ ಮಾಡಿ

ಯಾವುದೇ ತಂತ್ರ ಕೆಲಸ ಮಾಡದಿದ್ದಾಗ, ಫೋನ್‌ನ 'ನೆಟ್‌ವರ್ಕ್ ಸೆಟ್ಟಿಂಗ್ಸ್' ಅನ್ನು ರೀಸೆಟ್ ಮಾಡುವುದು ಉತ್ತಮ. ಇದು ನಿಮ್ಮ ಫೋನ್‌ನಲ್ಲಿರುವ ವೈ-ಫೈ, ಬ್ಲೂಟೂತ್ ಮತ್ತು ಮೊಬೈಲ್ ಡೇಟಾ ಸೆಟ್ಟಿಂಗ್‌ಗಳನ್ನು ಮೊದಲಿನ ಸ್ಥಿತಿಗೆ ತರುತ್ತದೆ, ಇದರಿಂದ ತಾಂತ್ರಿಕ ದೋಷಗಳಿದ್ದರೆ ಸರಿಹೋಗುತ್ತವೆ. (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net