ರಾಕಿ ಭಾಯ್ ಇಮೇಜ್ ಬದಿಗಿಟ್ಟ್ರಾ ಯಶ್! ಹಸಿಬಿಸಿ ದೃಶ್ಯಗಳ ಮೂಲಕ ಅಭಿಮಾನಿಗಳ ಮೈಂಡ್ ಸೆಟ್ ಬದಲಿಸುವುದು ಚಿತ್ರತಂಡದ ಪ್ಲ್ಯಾನ್​? Toxic

Toxic
Toxic
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಬಾರಿಗೆ ಇಂತಹ ದೃಶ್ಯಗಳಲ್ಲಿ ನಟಿಸಿದ್ದೇಕೆ 'ರಾಕಿಂಗ್ ಸ್ಟಾರ್'?
  • ಯಶ್ ಹಸಿಬಿಸಿ ದೃಶ್ಯಗಳ ಹಿಂದಿದೆ ಬಿಗ್ ಸೀಕ್ರೆಟ್!
  • ಪ್ರೇಕ್ಷಕರ ಮೈಂಡ್ ಸೆಟ್ ಬದಲಿಸುವ ಪ್ರಯತ್ನವೇ?
ಬೆಂಗಳೂರು: ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಸಿನಿಮಾವಾದ ಟಾಕ್ಸಿಕ್ ( Toxic ) ಟೀಸರ್ ಸಾಮಾಜಿಕ​ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಯಶ್​ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿರುವುದು ಎಲ್ಲರ ಹುಬ್ಬೇರಿಸಿದೆ. ಈ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಹಿಂದೆ ಬಿಗ್ ಸೀಕ್ರೆಟ್ ಇದೆ ಎಂದು ಸಿನಿಮಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಜನವರಿ 8, 2026 ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆಯಾದ 'Toxic: Introducing Raya' ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದೊಂದು ಮಾದಕವಸ್ತು ಮಾಫಿಯಾ ಹಿನ್ನೆಲೆಯ ಕಥೆಯಾಗಿದ್ದು, ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಸಿನಿಮಾದ ತಾಂತ್ರಿಕ ಗುಣಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಪ್ರಶಸ್ತಿ ವಿಜೇತ ಕಲಾತ್ಮಕ ಸಿನಿಮಾಗಳನ್ನು ಮಾಡಿದ್ದ ಗೀತು, ಈಗ ಯಶ್ ಅವರೊಂದಿಗೆ ಮಾಸ್ ಆಕ್ಷನ್ ಸಿನಿಮಾ ಮಾಡುತ್ತಿರುವುದರ ಜೊತೆ ಹಿಂದೆಂದೂ ನೋಡದ ರೀತಿಯಲ್ಲಿ ಯಶ್​​ ಅವರನ್ನು ತೋರಿಸುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಟೀಸರ್‌ನಲ್ಲಿ ಒಂದು ಹಂತದಲ್ಲಿ ಯಶ್ (ರಾಯಾ) ಕಾರಿನೊಳಗೆ ಮಹಿಳೆಯೊಬ್ಬರ ಜೊತೆ ತೀರಾ ಆಪ್ತವಾದ (Intimate scene) ಕ್ಷಣದಲ್ಲಿರುವುದು ಮತ್ತು ಅದೇ ಸಮಯದಲ್ಲಿ ಕಾರಿನ ಕೆಳಗೆ ಬಾಂಬ್ ಸ್ಫೋಟಗೊಳ್ಳುವುದು ಕಂಡುಬರುತ್ತದೆ. ಯಶ್ ಅವರ ಇಡೀ ಸಿನಿಮಾ ಕೆರಿಯರ್‌ನಲ್ಲಿ ಈ ಮಟ್ಟದ ಬೋಲ್ಡ್ ದೃಶ್ಯ ಇದೇ ಮೊದಲು ಎನ್ನಲಾಗುತ್ತಿದೆ.

ಪ್ರೇಕ್ಷಕರ ಮೈಂಡ್ ಸೆಟ್ ಬದಲಿಸುವ ಪ್ರಯತ್ನವೇ?

'ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್': ಚಿತ್ರದ ಟ್ಯಾಗ್‌ಲೈನ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಎಂದಿದೆ. ಅಂದರೆ ಇದು ಕೇವಲ ಮಾಸ್ ಆಕ್ಷನ್ ಸಿನಿಮಾ ಅಲ್ಲ, ಇದರಲ್ಲಿ ವಯಸ್ಕರಿಗೆ ಸಂಬಂಧಿಸಿದ (Adult themes) ವಿಷಯಗಳೂ ಇವೆ ಎಂಬ ಸಂದೇಶವನ್ನು ಆರಂಭದಲ್ಲೇ ನೀಡಲಾಗುತ್ತಿದೆ. ಚಿತ್ರತಂಡ ಇದನ್ನು ಉದ್ದೇಶಪೂರ್ವಕವಾಗಿಯೇ ಈ ಒಂದು ಹಸಿಬಿಸಿ ದೃಶ್ಯವನ್ನು ಮಾಡಿದೆ ಎನ್ನಲಾಗುತ್ತಿದೆ.
ಈ ಹಿಂದೆ 2025ನಲ್ಲಿ ಯಶ್​​ ಅವರ ಹುಟ್ಟುಹಬ್ಬದ ವೇಳೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆದಾಗ ಕೂಡಾ ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಇಲ್ಲಿ ಕೂಡಾ ಯಶ್​ಅವರನ್ನು ಸಖತ್​ ಬೋಲ್ಡ್​​ ಆಗಿಯೇ ತೋರಿಸಲಾಗಿತ್ತು. ಇದೀಗ ಟೀಸರ್​ನಲ್ಲಿಯೂ ಕೂಡಾ ಅದೇ ಬೋಲ್ಡ್​​ನೆಸ್​​ನ್ನು ಚಿತ್ರತಂಡ ತೋರಿಸುವ ಮೂಲಕವಾಗಿ ಯಶ್​ ಪಾತ್ರ ಹೀಗೆ ಇರಲಿದೆ ಎನ್ನುವುದನ್ನು ಪ್ರೇಕ್ಷಕರಿಗೆ ಚಿತ್ರತಂಡ ಹೇಳುತ್ತಿದ್ಯಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಕೆಜಿಎಫ್‌ನ ನಂತರ 'ರಾಕಿ' ಇಮೇಜ್ ತುಂಬಾ ಪ್ರಬಲವಾಗಿದೆ. ಅದರಿಂದ ಹೊರಬಂದು 'ರಾಯಾ' ಎಂಬ ಹೊಸ ಮತ್ತು ಹೆಚ್ಚು ಡಾರ್ಕ್ ಶೇಡ್​​ ಇರುವ ಪಾತ್ರಕ್ಕೆ ಪ್ರೇಕ್ಷಕರು ಒಗ್ಗಿಕೊಳ್ಳಲಿ ಎಂಬುದು ಚಿತ್ರತಂಡದ ಪ್ಲ್ಯಾನ್​​​ ಆಗಿರಬಹುದು.
ಕೆಜಿಎಫ್ ನಂತರ ಯಶ್ ಒಬ್ಬ 'ಮಾಸ್ ಹೀರೋ' ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ 'ಟಾಕ್ಸಿಕ್' ಚಿತ್ರದ ಮೂಲಕ ಅವರು ತಮ್ಮ ಈ ಹಿಂದಿನ ಇಮೇಜ್ ಅನ್ನು ಬದಿಗಿಟ್ಟು, ಸಂಪೂರ್ಣ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಅವರು ಸ್ವಲ್ಪ ನೆಗೆಟಿವ್ ಛಾಯೆಯಿರುವ ಪಾತ್ರ ಮಾಡುತ್ತಿರುವುದರಿಂದ, ಪಾತ್ರದ ಬೇಡಿಕೆಗೆ ತಕ್ಕಂತೆ ಕೆಲವು ಹಸಿಬಿಸಿ ಅಥವಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿರಬಹುದು. ಟಾಕ್ಸಿಕ್ ಎನ್ನುವ ಹೆಸರೇ ಸೂಚಿಸುವಂತೆ ಇದು ಒಂದು ಡಾರ್ಕ್ ಮತ್ತು ತೀವ್ರತೆಯಿಂದ ಕೂಡಿದ ಸಿನಿಮಾ. ಇಂತಹ ಸಿನಿಮಾಗಳಲ್ಲಿ ರೊಮ್ಯಾನ್ಸ್ ಕೂಡ ಅಷ್ಟೇ ತೀವ್ರವಾಗಿರುವುದು ಸಹಜ. ಚಿತ್ರತಂಡ ಪ್ರೇಕ್ಷಕರನ್ನು ಮಾನಸಿಕವಾಗಿ ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ.
ಯಶ್ ಅವರನ್ನು ಅಭಿಮಾನಿಗಳು ಹೆಚ್ಚಾಗಿ 'ಫ್ಯಾಮಿಲಿ ಮ್ಯಾನ್' ಮತ್ತು ಮಾಸ್ ಆಗಿ ನೋಡಿದ್ದಾರೆ. ಈಗ ಅವರು ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿರುವುದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆಶ್ಚರ್ಯ ಎರಡನ್ನೂ ಮೂಡಿಸಿದೆ.
ಈ ದೃಶ್ಯದಿಂದಾಗಿ ಕೆಲವರು ಯಶ್ ಫ್ಯಾಮಿಲಿ ಆಡಿಯನ್ಸ್ ಅನ್ನು ಕಳೆದುಕೊಳ್ಳಬಹುದು ಎನ್ನುತ್ತಿದ್ದರೆ, ಇನ್ನು ಕೆಲವರು ಇದು ಅಂತರಾಷ್ಟ್ರೀಯ ಮಟ್ಟದ ಮೇಕಿಂಗ್, ಯಶ್ ಹೊಸ ಪ್ರಯೋಗ ಮಾಡುತ್ತಿರುವುದು ಸ್ವಾಗತಾರ್ಹ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಒಂದು ರೀತಿಯ ಕುತೂಹಲ ಮೂಡಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಟೀಸರ್​ ಹೇಗಿದೆ?

ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್​ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದೆ.

ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net