ದಳಪತಿ ವಿಜಯ್ ರಾಜಕೀಯ ಯಶಸ್ಸಿಗೆ ರಜನಿಕಾಂತ್ ಅಸೂಯೆ ಪಟ್ಟಿದ್ದಾರಾ?: ವದಂತಿಗಳಿಗೆ ಸೂಪರ್‌ಸ್ಟಾರ್ ಕೌಂಟರ್! Rajinikanth

ದಳಪತಿ ವಿಜಯ್ ರಾಜಕೀಯ ಯಶಸ್ಸಿಗೆ ರಜನಿಕಾಂತ್ ಅಸೂಯೆ ಪಟ್ಟಿದ್ದಾರಾ?: ವದಂತಿಗಳಿಗೆ ಸೂಪರ್‌ಸ್ಟಾರ್ ಕೌಂಟರ್!
ದಳಪತಿ ವಿಜಯ್ ರಾಜಕೀಯ ಯಶಸ್ಸಿಗೆ ರಜನಿಕಾಂತ್ ಅಸೂಯೆ ಪಟ್ಟಿದ್ದಾರಾ?: ವದಂತಿಗಳಿಗೆ ಸೂಪರ್‌ಸ್ಟಾರ್ ಕೌಂಟರ್!
Published on
ಚೆನ್ನೈ: ತಮಿಳು ಚಿತ್ರರಂಗದ ಇಬ್ಬರು ದೈತ್ಯ ನಟರಾದ ಸೂಪರ್‌ಸ್ಟಾರ್ ರಜನಿಕಾಂತ್(Rajinikanth) ಮತ್ತು ದಳಪತಿ ವಿಜಯ್ ನಡುವೆ ಸದ್ಯ ಎಲ್ಲವೂ ಸರಿಯಿಲ್ಲ ಹಾಗೂ ವಿಜಯ್ ಅವರ ರಾಜಕೀಯ ಯಶಸ್ಸನ್ನು ಕಂಡು ರಜನಿ ಅಸೂಯೆ ಪಡುತ್ತಿದ್ದಾರೆ ಎಂಬ ವದಂತಿಗಳಿಗೆ ಸ್ವತಃ ರಜನಿಕಾಂತ್ ಅವರೇ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ ಎದ್ದಿರುವ ಊಹಾಪೋಹಗಳ ಕುರಿತು ಬುಧವಾರ ಮಾತನಾಡಿದ ರಜನಿ, ನನಗೆ ವಿಜಯ್ ರಾಜಕೀಯ ಬೆಳವಣಿಗೆಯ ಬಗ್ಗೆ ಯಾವುದೇ ಅಸೂಯೆ ಇಲ್ಲ. ಆದರೆ, ನಾನು ಯಾವುದೇ ವಿಷಯದ ಬಗ್ಗೆ ಮಾತನಾಡಲು ಹೋದರೂ ಅದು ಹೊಸ ವಿವಾದ ಸೃಷ್ಟಿಸುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.

"ಮಾತನಾಡಿದ್ರೆ ತಪ್ಪು, ಸುಮ್ಮನಿದ್ರೂ ತಪ್ಪು!": ರಜನಿ ಅಳಲು

ತಮ್ಮ ರಾಜಕೀಯ ನಿಲುವಿನ ಬಗ್ಗೆ ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿದ 76 ವರ್ಷದ ರಜನಿಕಾಂತ್, ಯಾರಾದರೂ ನನ್ನನ್ನು ಯಾವುದಾದರೂ ವಿಷಯದ ಬಗ್ಗೆ ಮಾತನಾಡಲು ಕೇಳಿದರೆ ನಾನು ಹಿಂಜರಿಯುತ್ತೇನೆ. ಏಕೆಂದರೆ ನಾನು ಏನನ್ನಾದರೂ ಹೇಳಿದರೆ ಅದು ನನಗೂ ಮತ್ತು ಇತರರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ನನ್ನ ಪ್ರತಿಯೊಂದು ಮಾತೂ ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗುತ್ತದೆ ಎಂದಿದ್ದಾರೆ.
ನಾನು ಯಾವುದಾದರೂ ವಿಷಯದ ಬಗ್ಗೆ ಮೌನವಾಗಿ ಉಳಿದರೆ, ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ನನ್ನ ಮೌನವನ್ನು ಪ್ರಶ್ನಿಸುತ್ತಾರೆ. ಅದೇ ನಾನು ಧ್ವನಿ ಎತ್ತಿ ಮಾತನಾಡಿದರೆ, ಓಹ್, ಈಗ ಇವರು ಮಾತನಾಡುತ್ತಿದ್ದಾರೆ ಎನ್ನುತ್ತಾರೆ. ಇನ್ನು ಕೆಲವರು ಇವರು ಈ ವಿಷಯದ ಬಗ್ಗೆ ಮಾತನಾಡಬಾರದಿತ್ತು ಎಂದು ಆಕ್ಷೇಪಿಸುತ್ತಾರೆ. ನಮ್ಮನ್ನು ಇಷ್ಟಪಡದವರು ನಾವು ಏನು ಮಾಡಿದರೂ ಇಷ್ಟಪಡುವುದಿಲ್ಲ. ನಮ್ಮನ್ನು ಈಗ ಇಷ್ಟಪಡುವವರು ಯಾವಾಗಲೂ ಇಷ್ಟಪಡುತ್ತಲೇ ಇರುತ್ತಾರೆ ಎಂದು ಭಾವಿಸುವುದು ಮೂರ್ಖತನವಾಗಿದೆ. ಹಾಗಾಗಿ ನಾವು ತುಂಬಾ ಜಾಗರೂಕರಾಗಿರಬೇಕು ಎಂದು ರಜನಿ ತತ್ವಜ್ಞಾನದ ಮಾತುಗಳನ್ನಾಡಿದ್ದಾರೆ.

ವಿಜಯ್ ರಾಜಕೀಯ ಎಂಟ್ರಿ ಮತ್ತು ರಜನಿ ಹಳೇ ಇತಿಹಾಸ

ನಟ ವಿಜಯ್ ಸಿನಿಮಾ ರಂಗವನ್ನು ತೊರೆದು ರಾಜಕೀಯಕ್ಕೆ ಕಾಲಿಟ್ಟಾಗಿನಿಂದಲೂ, ರಜನಿಕಾಂತ್ ಅವರ ನಿಲುವೇನು ಎಂಬ ಬಗ್ಗೆ ಕಾಲಿವುಡ್‌ನಲ್ಲಿ ಭಾರಿ ಚರ್ಚೆ ನಡೆಯುತ್ತಿತ್ತು. ಏಕೆಂದರೆ, ರಜನಿಕಾಂತ್ ಸ್ವತಃ ಮೂರು ದಶಕಗಳ ಕಾಲ ರಾಜಕೀಯ ಪ್ರವೇಶದ ಬಗ್ಗೆ ಯೋಚಿಸಿ, 2018ರಲ್ಲಿ 'ರಜನಿ ಮಕ್ಕಳ್ ಮಂದ್ರಂ' ಎಂಬ ಸಂಘಟನೆ ಸ್ಥಾಪಿಸಿ, ಅಂತಿಮವಾಗಿ 2021ರ ಜುಲೈನಲ್ಲಿ ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದಿದ್ದರು.
ತಮಿಳುನಾಡು ರಾಜಕಾರಣದಲ್ಲಿ ರಜನಿಕಾಂತ್ ಅವರ ಒಂದು ಸಣ್ಣ ಹೇಳಿಕೆಯೂ ಎಷ್ಟು ಪ್ರಭಾವ ಬೀರುತ್ತದೆ ಎಂಬುದಕ್ಕೆ 1996ರ ಚುನಾವಣೆಯೇ ಸಾಕ್ಷಿ. ಅಂದು ಎಐಎಡಿಎಂಕೆ ನಾಯಕಿ ಜಯಲಲಿತಾ ವಿರುದ್ಧ ಮಾತನಾಡಿದ್ದ ರಜನಿ, ಒಂದು ವೇಳೆ ಜಯಲಲಿತಾ ಮತ್ತೆ ಅಧಿಕಾರಕ್ಕೆ ಬಂದರೆ ಆ ದೇವರೂ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಈ ಒಂದೇ ಒಂದು ಹೇಳಿಕೆ ಅಂದು ಜಯಲಲಿತಾ ಅವರ ಭಾರಿ ಚುನಾವಣಾ ಸೋಲಿಗೆ ಕಾರಣವಾಗಿತ್ತು ಎಂಬುದು ಇತಿಹಾಸವಾಗಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಪಕ್ಷದ ಹೊಸ ಇತಿಹಾಸ!

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಯಾವುದೇ ಸ್ಪಷ್ಟ ಬಹುಮತವನ್ನು ಪಡೆಯದಿದ್ದರೂ, ಒಟ್ಟು 234 ಕ್ಷೇತ್ರಗಳ ಪೈಕಿ ಬರೋಬ್ಬರಿ 108 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತದನಂತರ ಕಾಂಗ್ರೆಸ್ ಮತ್ತು ಡಿಎಂಕೆಯಿಂದ ಹೊರಬಂದ ಕೆಲವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ವಿಜಯ್ ಸದ್ಯ ತಮಿಳುನಾಡು ರಾಜಕಾರಣದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರು ವಿಜಯ್ ಬೆನ್ನಿಗೆ ನಿಂತು ವದಂತಿಗಳಿಗೆ ಬ್ರೇಕ್ ಹಾಕಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net