ವ್ಯಕ್ತಿ ವಿಶೇಷವೋ, ಪ್ರಚಾರದ ಹುಚ್ಚೋ?

ಸೋನಂ ವಾಂಗ್ಚುಕ್
ಸೋನಂ ವಾಂಗ್ಚುಕ್
Published on

ವಾಂಗ್ಚುಕ್ ಬೆಂಬಲಿಗರು ಮತ್ತು ಅವರ ಸುತ್ತಲಿನ ಎಡಪಂಥೀಯ ಬುದ್ಧಿಜೀವಿಗಳ ಬಳಗ ಅವರನ್ನು ಒಬ್ಬ ಅಮಾಯಕ, ಬಡಪಾಯಿ ಮತ್ತು ಪರಿಸರ ಪ್ರೇಮಿ ಹೋರಾಟಗಾರನಂತೆ ಬಿಂಬಿಸಲು ಹರಸಾಹಸ ಪಡುತ್ತಿದೆ. ಆದರೆ ಸತ್ಯಸಂಗತಿ ಬೇರೆಯೇ ಇದೆ. ವಾಂಗ್ಚುಕ್ ಯಾವುದೇ ಸಾಮಾನ್ಯ ಹಿನ್ನೆಲೆಯಿಂದ ಬಂದವರಲ್ಲ. ಅವರ ತಂದೆ ಸೋನಂ ವಾಂಗ್ಯಾಲ್ ಲಡಾಖ್​ನ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದರು. ಅಷ್ಟೇ ಅಲ್ಲ, 1972ರಲ್ಲೇ ಜಮ್ಮು-ಕಾಶ್ಮೀರ ವಿಧಾನಸಭೆಯ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿದವರು. ಹಾಗಾಗಿ, ಇವರದ್ದು ರಾಜಕೀಯವಾಗಿ ಭದ್ರವಾದ ಮತ್ತು ಪ್ರಭಾವಿಯಾದ ಹಿನ್ನೆಲೆ.

ವಿಜ್ಞಾನಿಯೂ ಅಲ್ಲ, ಪೇಟೆಂಟ್ ಕೂಡ ಇಲ್ಲ!: ಫೇಸ್​ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಇವರ ಪರವಾಗಿ ಕಣ್ಣೀರು ಸುರಿಸುವ ಕೆಲವರು ಇವರೊಬ್ಬ ‘ಮಹಾನ್ ವಿಜ್ಞಾನಿ’ ಎಂದು ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ, ಇವರೊಬ್ಬ ಇಂಜಿನಿಯರ್ ಅಷ್ಟೇ, ವಿಜ್ಞಾನಿಯಲ್ಲ. ಇವರ ಹೆಸರಿನಲ್ಲಿ ಜಾಗತಿಕ ಮಟ್ಟದ ಯಾವುದೇ ಅಧಿಕೃತ ಸಂಶೋಧನೆಯ ಪೇಟೆಂಟ್ ಕೂಡ ಇಲ್ಲ. ಲಡಾಖ್​ನಲ್ಲಿ ಇವರು ನಡೆಸುವ ‘ಸೆಕ್ಮೋಲ್’ ಸಂಸ್ಥೆಯ ಅಡಿಯಲ್ಲಿ ಶಾಲೆಗಳನ್ನು ನಡೆಸುತ್ತಿರುವುದರಿಂದ ಇವರಿಗೆ ‘ಶಿಕ್ಷಣ ತಜ್ಞ’ ಎಂಬ ಪಟ್ಟ ಕಟ್ಟಲಾಗಿದೆ. ಆದರೆ ಈ ಸಂಸ್ಥೆಗೆ ಬರುತ್ತಿದ್ದ ಹಣದ ಮೂಲವನ್ನು ನೋಡಿದರೆ ಆಘಾತಕಾರಿ ಅಂಶಗಳು ಬಯಲಾಗುತ್ತವೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ, ಭಾರತವಿರೋಧಿ ಕೃತ್ಯಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಜ್ ಸೊರೊಸ್ ಸಂಸ್ಥೆ ಮತ್ತು ಫೋರ್ಡ್ ಫೌಂಡೇಶನ್​ನಿಂದ ಈ ಎನ್​ಜಿಒಗೆ ನಿರಂತರವಾಗಿ ಹಣ ಹರಿದು ಬರುತ್ತಿತ್ತು. ಹೀಗೆ ಬಂದ ವಿದೇಶಿ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಅನ್ಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪದ ಮೇಲೆ ಕೇಂದ್ರ ಸರ್ಕಾರ ತನಿಖೆ ನಡೆಸಿತ್ತು. ಅನುಮಾನಗಳು ನಿಜವೆಂದು ಸಾಬೀತಾದ ತಕ್ಷಣ ಇವರ ಸಂಸ್ಥೆಯ ಎಫ್​ಸಿಆರ್​ಎ ಪರವಾನಗಿಯನ್ನು ರದ್ದುಗೊಳಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ, ಈಗಿನ ಬಿಜೆಪಿ ಸರ್ಕಾರ ಮಾತ್ರವಲ್ಲ, 2007ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಇವರ ವಿರುದ್ಧ ಇದೇ ರೀತಿಯ ಕಠಿಣ ಕ್ರಮವನ್ನು ಕೈಗೊಂಡಿತ್ತು. ಇನ್ನು ಲಡಾಖ್ ಆಡಳಿತ ಮಂಡಳಿಯು ಇವರ ಸಂಸ್ಥೆಗೆ ನೀಡಿದ್ದ ಜಮೀನನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಅದನ್ನು ವಾಪಸ್ ಪಡೆದುಕೊಂಡಿದೆ.

ಲಡಾಖ್​ನಲ್ಲಿ ‘ಐಸ್ ಸ್ತೂಪ’ಗಳನ್ನು ನಿರ್ವಿುಸಿ ಅಲ್ಲಿನ ರೈತರಿಗೆ ಬೇಸಿಗೆಯಲ್ಲಿ ನೀರು ಒದಗಿಸಲಾಗಿದೆ ಎಂದು ವಾಂಗ್ಚುಕ್ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ, ಈ ಐಸ್ ಸ್ತೂಪಗಳ ಪರಿಕಲ್ಪನೆ ವಾಂಗ್ಚುಕ್ ಅವರದ್ದಲ್ಲ! ಇದನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಜಾರಿಗೆ ತಂದವರು ಚೆವಾಂಗ್ ನಾರ್ಫೆಲ್ ಎಂಬ ಸಾಧಕರು. ಆ ಸಾಧನೆಗಾಗಿ ನಾರ್ಫೆಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಕೂಡ ಲಭಿಸಿದೆ. ಆದರೆ ಕ್ರೆಡಿಟ್ ಮಾತ್ರ ವಾಂಗ್ಚುಕ್ ತಮ್ಮದಾಗಿಸಿಕೊಂಡರು. ಇವರ ಪ್ರಚಾರಪ್ರಿಯತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?

ದೇಶದ ಗಡಿ ಭದ್ರತೆಗೆ ಕುತ್ತು ತರುವ ಹುನ್ನಾರ?: ಯಾವಾಗ ವಿದೇಶಿ ಹಣದ ಮೂಲಗಳು ಬಂದ್ ಆದವೋ, ಆಗೆಲ್ಲ ವಾಂಗ್ಚುಕ್ ಒಂದಲ್ಲ ಒಂದು ಹೋರಾಟದ ನೆಪದಲ್ಲಿ ಮುನ್ನೆಲೆಗೆ ಬರತೊಡಗಿದರು. ಮೊದಲನೆಯದ್ದು 6ನೇ ಶೆಡ್ಯೂಲ್ ಕ್ಯಾತೆ. ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಗೊಳಿಸಿದಾಗ, ಲಡಾಖ್​ಗೆ ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ವಿಶೇಷ ಸ್ಥಾನಮಾನ ನೀಡಬೇಕೆಂದು ಇವರು ಆಗ್ರಹಿಸಿದರು. ಅದರರ್ಥ ಲಡಾಖ್ ಸ್ವಾಯತ್ತ ಪ್ರದೇಶವಾಗಬೇಕು ಮತ್ತು ಗಡಿಯಲ್ಲಿ ಸೇನೆಯು ಯಾವುದೇ ರಸ್ತೆ, ಬಂಕರ್ ನಿರ್ವಿುಸಬೇಕಾದರೂ ಸ್ಥಳೀಯರ ಅನುಮತಿ ಪಡೆಯಬೇಕು! ಚೀನಾದ ಗಡಿಗೆ ಹೊಂದಿಕೊಂಡಿರುವ ಸೂಕ್ಷ ್ಮ ಪ್ರದೇಶದಲ್ಲಿ ಇಂತಹ ಷರತ್ತು ವಿಧಿಸುವುದು ದೇಶದ ಭದ್ರತೆಗೆ ಎಷ್ಟು ಅಪಾಯಕಾರಿ? ಇದೇ ಹೋರಾಟದ ನೆಪದಲ್ಲಿ ಇವರ ಬೆಂಬಲಿಗರು ಸ್ಥಳೀಯ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚುವ ಕೆಲಸಕ್ಕೂ ಕೈಹಾಕಿದ್ದರು. ಭಾರತ ಸರ್ಕಾರ ಚೀನಾಗೆ ಟಕ್ಕರ್ ನೀಡಲು ಲಡಾಖ್ ಗಡಿಯುದ್ದಕ್ಕೂ ರಸ್ತೆ, ಸುರಂಗ ಮತ್ತು ಸೌರಶಕ್ತಿ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ನಿರ್ವಿುಸುತ್ತಿದೆ. ಆದರೆ ‘ಪರಿಸರ ಪ್ರೇಮಿ’ ಸೋಗು ಹಾಕಿಕೊಂಡಿರುವ ವಾಂಗ್ಚುಕ್, ಈ ಯೋಜನೆಗಳಿಂದ ಕುರಿಗಾಹಿಗಳ ಹುಲ್ಲುಗಾವಲು ನಾಶವಾಗುತ್ತಿದೆ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ಗಡಿಯಲ್ಲಿ ಭಾರತದ ರಕ್ಷಣಾ ಯೋಜನೆಗಳು ವಿಳಂಬವಾದರೆ ಅದರಿಂದ ನೇರ ಲಾಭ ಚೀನಾಗೆ ಅಲ್ಲವೇ?

ಸೇನೆಯ ಬಲ ಹೆಚ್ಚಿಸುವ ‘ಅಗ್ನಿವೀರ್’ ಯೋಜನೆಯನ್ನು ರೈತ ವಿರೋಧಿ, ಸೇನಾ ವಿರೋಧಿ ಎಂದು ಕರೆದು ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರು. ಅಲ್ಲದೆ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಯುವ ದಂಗೆಗಳನ್ನು ಉದಾಹರಣೆಯಾಗಿ ನೀಡಿ, ಭಾರತದಲ್ಲೂ ಯುವಕರು ಬೀದಿಗಿಳಿದು ಪ್ರಜಾಸತ್ತಾತ್ಮಕ ಸರ್ಕಾರದ ವಿರುದ್ಧ ದಂಗೆ ಏಳಬೇಕು ಎಂದು ಕರೆ ನೀಡಿದ್ದರು. ಕೋರ್ಟ್ ಕಲಾಪವೊಂದರ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಬಳಸಿದ ‘ಕಾಕ್ರೋಚ್’ (ಜಿರಳೆ) ಎಂಬ ಪದವನ್ನೇ ಇಟ್ಟುಕೊಂಡು, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅಪಹಾಸ್ಯ ಮಾಡಲು ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ಯ ಬೆಂಬಲದೊಂದಿಗೆ ವಾಂಗ್ಚುಕ್ ಈಗ ದೆಹಲಿಯಲ್ಲಿ ಕೂತಿದ್ದಾರೆ. ಕಾಶ್ಮೀರ ಭಾರತದ ಅಂಗವೇ ಅಲ್ಲ ಎನ್ನುವವರ ಜೊತೆ ಕೈಜೋಡಿಸಿ ಉಪವಾಸ ಕೂರುವ ಇವರನ್ನು ಗೌರವಿಸಬೇಕೇ?

‘3 ಈಡಿಯಟ್ಸ್’ ಸುಳ್ಳು: 2009ರ ಸೂಪರ್ ಹಿಟ್ ಸಿನಿಮಾ ‘ಥ್ರೀ ಈಡಿಯಟ್ಸ್’ನ ಫುನ್ಸುಕ್ ವಾಂಗ್ಡು ಪಾತ್ರಕ್ಕೆ ತಾನೇ ಪ್ರೇರಣೆ ಎಂದು ವಾಂಗ್ಚುಕ್ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಲಂಡನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಸ್ವತಃ ನಟ ಆಮೀರ್ ಖಾನ್ ಸತ್ಯಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.

‘ಈ ಸಿನಿಮಾ ಸ್ವಘೊಷಿತ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಜೀವನ ಆಧಾರಿತವಲ್ಲ. ಸಿನಿಮಾ ಮಾಡುವಾಗ ನನಗಾಗಲಿ, ನಿರ್ದೇಶಕ ರಾಜಕುಮಾರ್ ಹಿರಾನಿಗಾಗಲಿ ಅಥವಾ ಕಥೆಗಾರ ಅಭಿಜಾತ್ ಜೋಶಿಗಾಗಲಿ ಈ ವಾಂಗ್ಚುಕ್ ಯಾರೆಂದೇ ಗೊತ್ತಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ಸುಳ್ಳು, ನಕಲಿ ಪ್ರಚಾರ ಮಾಡುತ್ತಿರುವ ಇವರನ್ನು ಜನರು ಹೇಗೆ ನಂಬಬೇಕು?

ಪ್ರಸ್ತುತ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆ ಸೇರಿರುವ ವಾಂಗ್ಚುಕ್ ಅವರನ್ನು ಮುಂದಿಟ್ಟುಕೊಂಡು, ಜಿರಳೆ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಧಾನಿ ಮೋದಿಯವರ ರಾಜೀನಾಮೆ ಕೇಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ, ಈ ಇಡೀ ಉಪವಾಸ ಸತ್ಯಾಗ್ರಹದ ನಾಟಕದ ಹಿಂದಿರುವ ಅಸಲಿ ಮುಖಗಳು ಮತ್ತು ರಾಜಕೀಯ ಪ್ರಹಸನ ದೇಶದ ಜನರಿಗೆ ಸಂಪೂರ್ಣವಾಗಿ ಅನಾವರಣಗೊಂಡಂತಾಗಿದೆ. ಹಾಂ, ಆಸ್ಪತ್ರೆ ಸೇರಿರುವ ವಾಂಗ್ಚುಕ್ ಅವರು ಶೀಘ್ರ ಗುಣಮುಖರಾಗಲಿ. ಇನ್ನಾದರೂ ಒಳಿತನ್ನು ಮಾಡಲಿ.

ಕೊನೆಯಲ್ಲೊಂದು ಸ್ಪಷ್ಟನೆ: 2011ರಲ್ಲಿ ಜಂತರ್ ಮಂತರ್​ನಲ್ಲಿ ಅಣ್ಣಾ ಹಜಾರೆ ಉಪವಾಸ ಕುಳಿತಾಗ ಅಪಾರ ಪ್ರಚಾರ ನೀಡಿದ ಮಾಧ್ಯಮಗಳು ಸೋನಂ ವಾಂಗ್ಚುಕ್ ಉಪವಾಸ ಕುಳಿತಾಗ ಗಪ್​ಚುಪ್ ಆಗಿರುವುದೇಕೆ ಎಂದು ಕೆಲ ‘ಜಿರಳೆ’ಗಳು ಕೇಳುತ್ತಿವೆ. ಒಂದು ವಿಷಯ ಅರ್ಥಮಾಡಿಕೊಳ್ಳಬೇಕು, ಅಣ್ಣಾ ಹಜಾರೆ ಅವರು ಅಂದು ಉಪವಾಸ ಕುಳಿತದ್ದು ಭಾರತದಲ್ಲಿ ಬೇರುಬಿಟ್ಟಿರುವ ವ್ಯಾಪಕ ಭ್ರಷ್ಟಾಚಾರ ತಡೆಗೆ ಬಲಿಷ್ಠ ಜನ್ ಲೋಕಪಾಲ ಮಸೂದೆ ಜಾರಿ ಮಾಡಬೇಕೆಂದು ಆಗ್ರಹಿಸಿ, ಇಂದು ಸೋನಂ ವಾಂಗ್ಚುಕ್ ಮತ್ತು ಇತರರ ಹೋರಾಟ ಮೊದಲು ಓರ್ವ ಮಂತ್ರಿ, ತದನಂತರ ಚುನಾಯಿತ ಪ್ರಧಾನಮಂತ್ರಿ ರಾಜೀನಾಮೆ ಕೊಡಬೇಕು ಎಂಬಲ್ಲಿಯವರೆಗೆ... ಗೊತ್ತುಗುರಿಯಿಲ್ಲದ ಇಂಥ ಹೋರಾಟ ಗುರಿ ತಲುಪುವುದಾದರೂ ಹೇಗೆ ಎಂದು ಮಾಧ್ಯಮಗಳೂ ಭಾವಿಸಿರಲು ಸಾಕು!

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net