ಅಮೆರಿಕ-ಇರಾನ್ ಯುದ್ಧದ ಜ್ವಾಲೆಗೆ ಕರಗುತ್ತಿದೆಯೇ ಭಾರತದ ಇಂಧನ ಕೋಟೆ! ಮೋದಿ ಎಚ್ಚರಿಸಿದ ಆ ವಿಪತ್ತಿನ ಅಸಲಿ ರಹಸ್ಯವೇನು? India’s strategic oil reserves

ಅಮೆರಿಕ-ಇರಾನ್ ಯುದ್ಧದ ಜ್ವಾಲೆಗೆ ಕರಗುತ್ತಿದೆಯೇ ಭಾರತದ ಇಂಧನ ಕೋಟೆ! ಮೋದಿ ಎಚ್ಚರಿಸಿದ ಆ ವಿಪತ್ತಿನ ಅಸಲಿ ರಹಸ್ಯವೇನು?
ಅಮೆರಿಕ-ಇರಾನ್ ಯುದ್ಧದ ಜ್ವಾಲೆಗೆ ಕರಗುತ್ತಿದೆಯೇ ಭಾರತದ ಇಂಧನ ಕೋಟೆ! ಮೋದಿ ಎಚ್ಚರಿಸಿದ ಆ ವಿಪತ್ತಿನ ಅಸಲಿ ರಹಸ್ಯವೇನು?
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ-ಇರಾನ್ ಮಹಾ ಯುದ್ಧದ ಬೆಂಕಿಗೆ ಕರಗುತ್ತಿದೆಯೇ ಭಾರತದ ತೈಲ ನಿಧಿ?
  • ಡೊನಾಲ್ಡ್ ಟ್ರಂಪ್ ಅವರ 'ಆಪರೇಷನ್ ಸ್ಲೆಡ್ಜ್ ಹ್ಯಾಮರ್' ರಣತಂತ್ರಕ್ಕೆ ನಡುಗಿದ ಜಾಗತಿಕ ಇಂಧನ ಮಾರುಕಟ್ಟೆ!
  • ಕರಾಳ ಯುದ್ಧ ದೀರ್ಘಕಾಲ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್ ಖಾಲಿಯಾಗುತ್ತಾ?
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪರೇಷನ್ ಸ್ಲೆಡ್ಜ್ ಹ್ಯಾಮರ್ ದಾಳಿಯ ಸನ್ನಾಹ ಮತ್ತು ಇರಾನ್ ಕ್ರಾಂತಿಕಾರಿ ಪಡೆಗಳ ಜಲಮಾರ್ಗದ ದಿಗ್ಬಂಧನ ಇಡೀ ಜಗತ್ತನ್ನು ದಶಕದ ಮಹಾ ವಿಪತ್ತಿನ ಕಡೆಗೆ ತಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತ ತನ್ನ ಒಟ್ಟು ಕಚ್ಚಾ ತೈಲದ(India’s strategic oil reserves) ಅಗತ್ಯತೆಯಲ್ಲಿ ಶೇ. 90 ರಷ್ಟು ಭಾಗವನ್ನು ವಿದೇಶಿ ಆಮದಿನ ಮೇಲೆಯೇ ಅವಲಂಬಿಸಿದೆ. ಪ್ರತಿದಿನ ಭಾರತಕ್ಕೆ ಬರೊಬ್ಬರಿ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲದ ಅವಶ್ಯಕತೆಯಿದ್ದು, ಪ್ರಸ್ತುತ ಯುದ್ಧದ ಜ್ವಾಲೆ ಭಾರತದ ಹೊಸ್ತಿಲಿಗೆ ಬಂದು ತಲುಪಿದೆ.
ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಒಟ್ಟು ಪ್ರಮಾಣದಲ್ಲಿ ಶೇ. 30 ರಷ್ಟು ಭಾಗ ಕೇವಲ 'ಹೊರ್ಮುಜ್ ಜಲಸಂಧಿ ಮೂಲಕವೇ ಹಾದುಬರುತ್ತದೆ. ಸದ್ಯ ಇರಾನ್ ಈ ಜಲಮಾರ್ಗದ ಮೇಲೆ ಕಠಿಣ ನಿಯಂತ್ರಣ ಸಾಧಿಸಿದ್ದು, ವಾಣಿಜ್ಯ ಹಡಗುಗಳಿಗೆ ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಹೆಚ್ಚುವರಿ ತೆರಿಗೆ ವಿಧಿಸುತ್ತಿದೆ. ಈ ಜಾಗತಿಕ ತೈಲ ದಿಗ್ಬಂಧನದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 111 ಡಾಲರ್‌ಗೆ ಜಿಗಿದಿದೆ.

ದೇಶದ ತೈಲ ಕಂಪನಿಗಳಿಗೆ ಪ್ರತಿದಿನ ₹1,000 ಕೋಟಿ ನಷ್ಟದ ಭೀತಿ!

ಕಳೆದ ಮೂರು ತಿಂಗಳುಗಳಿಂದ ಜಾಗತಿಕ ಬಿಕ್ಕಟ್ಟು ಇದ್ದರೂ ಭಾರತ ಸರ್ಕಾರ ಸಾರ್ವಜನಿಕರ ಮೇಲೆ ತೈಲ ಬೆಲೆಯ ಭಾರಿ ಹೊರೆಯನ್ನು ಹೇರದೆ ನಿಯಂತ್ರಿಸಿತ್ತು. ಆದರೆ ಮೇ ತಿಂಗಳ ಆರಂಭದ ದತ್ತಾಂಶಗಳ ಪ್ರಕಾರ, ಬೆಲೆ ಏರಿಕೆ ಮಾಡದ ಕಾರಣ ಭಾರತದ ತೈಲ ಮಾರಾಟ ಕಂಪನಿಗಳು (OMCs) ಪ್ರತಿದಿನ ಬರೊಬ್ಬರಿ ₹1,000 ಕೋಟಿ ರೂಪಾಯಿಗಳ ಭೀಕರ ನಷ್ಟವನ್ನು ಅನುಭವಿಸುತ್ತಿವೆ. ಈ ಒತ್ತಡ ತಡೆಯಲಾರದೆ ಕಳೆದ ವಾರವಷ್ಟೇ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ₹3 ರಷ್ಟು ಹೆಚ್ಚಿಸಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹97.77 ಹಾಗೂ ಡೀಸೆಲ್ ಬೆಲೆ ₹90.67 ತಲುಪಿದೆ. ಇಂತಹ ಯುದ್ಧದ ಸಂದರ್ಭಗಳಿಗಾಗಿಯೇ ದೇಶಗಳು ವ್ಯೂಹಾತ್ಮಕ ಪೆಟ್ರೋಲಿಯಂ ಸಂರಕ್ಷಣಾಗಾರಗಳನ್ನು ನಿರ್ಮಿಸುತ್ತವೆ.

ಯುದ್ಧದ ಇತಿಹಾಸ ಮತ್ತು ಭಾರತದ 74 ದಿನಗಳ ರಕ್ಷಣಾ ಕವಚ!

ತುರ್ತು ಪರಿಸ್ಥಿತಿಗಾಗಿ ತೈಲವನ್ನು ಭೂಗತವಾಗಿ ಸಂಗ್ರಹಿಸಿಡುವ ಕಲ್ಪನೆ ಬಂದಿದ್ದು ಎರಡನೇ ಮಹಾಯುದ್ಧದ ಕೊನೆಯಲ್ಲಿ. 1956 ರ ಸೂಯೆಜ್ ಕಾಲುವೆ ಬಿಕ್ಕಟ್ಟು ಮತ್ತು 1973 ರ ಯೋಮ್ ಕಿಪ್ಪೂರ್ ಯುದ್ಧದ ತೈಲ ಆಘಾತದ ಬಳಿಕ ಅಮೆರಿಕ ತನ್ನದೇ ಆದ ಬೃಹತ್ ತೈಲ ಬ್ಯಾಂಕ್ ಸ್ಥಾಪಿಸಿತು. ಸದ್ಯ ಅಮೆರಿಕ 413 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಹೊಂದಿದ್ದರೆ, ಜಗತ್ತಿನಲ್ಲೇ ಅತಿ ದೊಡ್ಡ ತೈಲ ಬ್ಯಾಂಕ್ ಹೊಂದಿರುವ ಚೀನಾ ಬರೊಬ್ಬರಿ 1.4 ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ತುರ್ತು ಪರಿಸ್ಥಿತಿಗಾಗಿ ಬಚ್ಚಿಟ್ಟಿದೆ. ಚೀನಾ ಕೇವಲ ತೈಲವಲ್ಲದೆ ಗೋಧಿ, ಅಕ್ಕಿ, ಹಂದಿ ಮಾಂಸವನ್ನು ಕೂಡ ಜಾಗತಿಕ ಯುದ್ಧ ಎದುರಿಸಲು ಸಂಗ್ರಹಿಸಿಟ್ಟಿದೆ.
ಭಾರತ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿದ್ದು 2004 ರಲ್ಲಿ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಅನ್ನು ಸ್ಥಾಪಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದರ ಮೊದಲ ಹಂತವನ್ನು 2019 ರಲ್ಲಿ ದೇಶಕ್ಕೆ ಸಮರ್ಪಿಸಿದರು. ಪ್ರಸ್ತುತ ಭಾರತದ ಅಧಿಕೃತ ವ್ಯೂಹಾತ್ಮಕ ತೈಲ ಸಂಗ್ರಹವು ದೇಶದ ಕೇವಲ 9.5 ದಿನಗಳ ಅಗತ್ಯವನ್ನು ಮಾತ್ರ ಪೂರೈಸಬಲ್ಲದು. ಆದರೆ, ತೈಲ ಕಂಪನಿಗಳು ಹೊಂದಿರುವ 64.5 ದಿನಗಳ ಪ್ರತ್ಯೇಕ ದಾಸ್ತಾನನ್ನು ಒಗೂಡಿಸಿದರೆ, ಭಾರತದ ಬಳಿ ಪ್ರಸ್ತುತ ಒಟ್ಟು 74 ದಿನಗಳ ಕಾಲ ದೇಶವನ್ನು ಮುನ್ನಡೆಸಬಲ್ಲ ಇಂಧನದ ಕವಚವಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದಾಗ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ಭಾರತದ ಸಂರಕ್ಷಣಾಗಾರಗಳಲ್ಲಿ ಹೆಚ್ಚುವರಿ 30 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹಿಸಲು ಒಪ್ಪಂದ ಮಾಡಿಕೊಂಡಿದೆ.

ಕಠಿಣ ಬಂಡೆಗಳನ್ನು ಕೊರೆದು ತೈಲ ಬ್ಯಾಂಕ್ ನಿರ್ಮಾಣ: ಎಲ್ಲೆಲ್ಲಿದೆ ಭಾರತದ ತೈಲ ನಿಧಿ..?

ಅಮೆರಿಕ ಅಥವಾ ಚೀನಾದಂತೆ ಭಾರತ ಭಾರಿ ಪ್ರಮಾಣದಲ್ಲಿ ತೈಲ ಸಂಗ್ರಹಣೆ ವಿಸ್ತರಿಸಲು ಸಾಧ್ಯವಾಗದಿರಲು ಮುಖ್ಯ ಕಾರಣ ಇದರ ತಾಂತ್ರಿಕ ಜಟಿಲತೆ. ಸಮುದ್ರ ತೀರದ ಗಟ್ಟಿಯಾದ ಕಠಿಣ ಪರ್ವತ ಹಾಗೂ ಬಂಡೆಗಳ ಒಳಭಾಗವನ್ನು ಬೃಹತ್ ಟನಲ್ ಬೋರಿಂಗ್ ಯಂತ್ರಗಳ ಮೂಲಕ ಕೊರೆದು, ತೈಲ ಸೋರಿಕೆಯಾಗದಂತೆ ವಿಶೇಷ ಲೈನಿಂಗ್ ಮಾಡಿ ಈ ಭೂಗತ ಗುಹೆಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕೆ ಭಾರಿ ಹಣ ಮತ್ತು ಸಮಯದ ಅಗತ್ಯವಿದೆ. ಭಾರತ ಸದ್ಯ ಮೊದಲ ಹಂತದಲ್ಲಿ ಮೂರು ಪ್ರಮುಖ ಕರಾವಳಿ ಭಾಗಗಳಲ್ಲಿ ತೈಲ ಸಂಗ್ರಹಾಗಾರಗಳನ್ನು ಹೊಂದಿದೆ.
1. ವಿಶಾಖಪಟ್ಟಣಂ (ಆಂಧ್ರಪ್ರದೇಶ): 1.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ.
2. ಮಂಗಳೂರು (ಕರ್ನಾಟಕ): 1.50 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ.
3. ಪಾದೂರು (ಕರ್ನಾಟಕ): 2.50 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ.
ಒಟ್ಟಾರೆಯಾಗಿ ಭಾರತ ಮೊದಲ ಹಂತದಲ್ಲಿ 5.33 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಮುಂದಿನ ಹಂತವಾಗಿ ಒಡಿಶಾದ ಚಂದಿಖೋಲ್ (4 MMT) ಮತ್ತು ಕರ್ನಾಟಕದ ಪಾದೂರಿನಲ್ಲಿ (ಹೆಚ್ಚುವರಿ 2.5 MMT) ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಸ್ತರಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ರಾಜಸ್ಥಾನದ ಉಪ್ಪಿನ ಗುಹೆಗಳಲ್ಲಿ 5.625 MMT ಸಾಮರ್ಥ್ಯದ ಮತ್ತು ಮಧ್ಯಪ್ರದೇಶದ ಬಿನಾದಲ್ಲಿ ಮೇಲ್ಮೈ ಸಂಗ್ರಹಾಗಾರಗಳ ನಿರ್ಮಾಣಕ್ಕೆ ರಣತಂತ್ರ ರೂಪಿಸಲಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net