ರೈಲ್ವೆ ಪ್ರಯಾಣಿಕರಿಗಾಗಿ ಹೊಸ ವೆಬ್​ಸೈಟ್​​​​​​​ ಬಿಡುಗಡೆ ಮಾಡಿದ IRCTC; ಇನ್ಮುಂದೆ ಸರ್ವರ್ ಕ್ರ್ಯಾಶ್ , ಕ್ಯಾಪ್ಚಾ ಕಿರಿಕಿರಿ ಇರಲ್ಲ

IRCTC New Website
IRCTC New Website
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಪ್ರಯಾಣಿಕರಿಗಾಗಿ ಹೊಸ ವೆಬ್​ಸೈಟ್​​ ಜಾರಿ ಮಾಡಿದ ಐಆರ್​ಸಿಟಿಸಿ
  • ಸುಲಭವಾಗಿ ಟಿಕೆಟ್​ ಬುಕ್ಕಿಂಗ್​, ರಿಸರ್ವೇಶನ್​​​ ಸೇರಿದಂತೆ ಹಲವು ವ್ಯವಸ್ಥೆ ಅಭಿವೃದ್ಧಿ
  • ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಂದ ಮಾಹಿತಿ ಬಹಿರಂಗ
IRCTC New Website: ತುರ್ತಾಗಿ ರೈಲಿನ ಟಿಕೆಟ್​ ಬುಕ್ ಮಾಡುವ ಸಂದರ್ಭದಲ್ಲಿ ಕಾಡುತ್ತಿದ್ದ ಸಮಸ್ಯೆಗಳು ಹಾಗೂ ತತ್ಕಾಲ್​​ನಲ್ಲಾಗುತ್ತಿದ್ದ ಸರ್ವರ್​ ಬ್ಯುಸಿ, ಕ್ಯಾಪ್ಚಾ ತೊಡಕಿಗೆ ಮುಕ್ತಿ ನೀಡಲು ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ನಿರ್ಧರಿಸಿದೆ. ಇದರ ಭಾಗವಾಗಿ ಹೊಸ ವೆಬ್​ಸೈಟ್​ ಅನ್ನು ಅಭಿವೃದ್ಧಿ ಪಡಿಸಿದ್ದು, ಇಂದಿನಿಂದಲೇ ಪ್ರಯಾಣಿಕರಿಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು, ರೈಲ್ವೆ ಇಲಾಖೆಯ ವೆಬ್​ಸೈಟ್​​ ಅಭಿವೃದ್ಧಿ ಬಗ್ಗೆ ಹಾಗೂ ಬುಕ್ಕಿಂಗ್​ ಸಾಮರ್ಥ್ಯದ ಬಗ್ಗೆ ವಿವರಿಸಿದ್ದಾರೆ.

ಬುಕ್ಕಿಂಗ್​ ಸಾಮರ್ಥ್ಯ ಹೆಚ್ಚಳ

ಹಿಂದಿನ ವೆಬ್​ಸೈಟ್​ನಲ್ಲಿ ಪ್ರತಿ ನಿಮಿಷಕ್ಕೆ 32 ಸಾವಿರ ಟಿಕೆಟ್​ಗಳನ್ನು ಏಕಕಾಲದಲ್ಲಿ ಬುಕ್​ ಮಾಡುವ ಸಾಮರ್ಥ್ಯವಿತ್ತು. ಇದರಿಂದ ಹಲವರು ಸರ್ವರ್​ ಬ್ಯುಸಿ, ಹ್ಯಾಂಗ್​ ಆಗುವ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಇನ್ಮುಂದೆ ಅದರ ಕಿರಿಕಿರಿ ಇರೋದಿಲ್ಲ. ಈ ಹೊಸ ವೆಬ್​​ಸೈಟ್​ 1.5 ಲಕ್ಷ ಟಿಕೆಟ್​ ಬುಕ್​ ಮಾಡಿದರೂ ಸಹ ವೆಬ್​ಸೈಟ್​ನಲ್ಲಿ ಲೋಡ್​ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.
ಇದರೊಂದಿಗೆ ಪ್ಯಾಸೆಂಜರ್ ರಿಸರ್ವೇಶನ್​​ ಸಿಸ್ಟಂ ಬ್ಯಾಕೆಂಡ್​ ಅನ್ನು ನವೀಕರಿಸಲಾಗಿದ್ದು, ಈ ಹಿಂದೆ ನಿಮಿಷಕ್ಕೆ 4 ಲಕ್ಷ ಜನರು ರಿಸರ್ವೇಶನ್​ ಸೀಟ್​ ಬಗ್ಗೆ ವಿಚಾರಣೆ ಅಥವಾ ಸರ್ಚ್​ ಮಾಡುವ ಅವಕಾಶವಿತ್ತು. ಇನ್ಮುಂದೆ ಇದರ ಸಾಮರ್ಥ್ಯ 40 ಲಕ್ಷಕ್ಕೆ ಏರಿಕೆಯಾಗಲಿದೆ. ಸೀಟಿನ ವಿವರ, ರೈಲು ಲಭ್ಯತೆ, ದರ, ದಿನಾಂಕ ಬುಕ್ಕಿಂಗ್​ ಅನ್ನು ಸುಲಭಗೊಳಿಸಲಿದೆ.

ಫೇರ್​ ಕ್ಯಾಲೆಂಡರ್​ ಎಂದರೇನು?

ನೀವು ದಿನಾಂಕ ಹಾಗೂ ದರದ ಆಧಾರದ ಮೇಲೆ ಟಿಕೆಟ್​ ಬುಕ್ ಮಾಡುವ ಅವಕಾಶವನ್ನು ರೈಲ್ವೆ ಇಲಾಖೆ ಕೊಟ್ಟಿದೆ. ಈ ಹೊಸ ಅಭಿವೃದ್ಧಿಗೆ ಫೇರ್​ ಕ್ಯಾಲೆಂಡರ್​ ಎಂದು ಹೆಸರಿಟ್ಟಿದ್ದು, ಇದರ ಮೂಲಕ ನಿಮಗೆ ಯಾವ ದಿನದಂದು ಟ್ರಾವೆಲ್​ ಅನುಕೂಲವೋ, ಯಾವ ದಿನದಂದು ದರ ಕಡಿಮೆ ಇದೆಯೋ ಎಂಬುದನ್ನು ಪರಿಶೀಲಿಸಿ ಟಿಕೆಟ್​ ಬುಕ್ ಮಾಡಿಕೊಳ್ಳಬಹುದಾಗಿದೆ.

ಬಹುಭಾಷೆಯನ್ನು ಒಳಗೊಂಡ ವೆಬ್​ಸೈಟ್​​

ಹೊಸದಾಗಿ ಅಭಿವೃದ್ಧಿಪಡಿಸಿರುವ ವೆಬ್​ಸೈಟ್​ ಹಲವು ಭಾಷೆಯನ್ನು ಒಳಗೊಂಡಿದೆ. ದೇಶದ ಹಲವು ರಾಜ್ಯಗಳ ಜನರು ತಮ್ಮ ಭಾಷೆಯಲ್ಲಿ ಬುಕ್ಕಿಂಗ್​ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಇದರಿಂದಾಗಿ ಕಾಡುವ ಗೊಂದಲಗಳ ನಿವಾರಣೆಯಾಗಲಿದೆ. ಹೊಸ ವೆಬ್​ಸೈಟ್​ನಿಂದಾಗಿ ಅಂಗವಿಕಲರು, ರೋಗಿಗಳು, ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಸುಲಭವಾಗಿ ಟಿಕೆಟ್​ ಬುಕ್​ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ತಮ್ಮ ರಿಯಾಯಿತಿ ಟಿಕೆಟ್​ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಎಲ್ಲ ವರ್ಗದ ಸೀಟ್​ ಪ್ರದರ್ಶನ

ಇದುವರೆಗೂ ಸೀಟನ್ನು ನಾವು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಇರಲಿಲ್ಲ. ಅಲ್ಲದೆ ಸ್ಲೀಪರ್, ಎಸಿ 3-ಟೈರ್ ಮತ್ತು ಎಸಿ 2-ಟೈರ್‌ ಸೇರಿದಂತೆ ವಿವಿಧ ಭಾಗದ ಸೀಟು ಪರಿಶೀಲನೆಗೆ ಪದೇ ಪದೆ ಆಯ್ಕೆ ಬದಲಾಯಿಸಬೇಕಾಗಿತ್ತು. ಪ್ರತ್ಯೇಕ ಟ್ಯಾಬ್​ಗಳನ್ನು ಓಪನ್​ ಮಾಡಬೇಕಿತ್ತು. ಆದರೆ ಹೊಸ ವೆಬ್​ಸೈಟ್​ನಲ್ಲಿ ಆ ಸಮಸ್ಯೆ ಇರೋದಿಲ್ಲ. ಒಂದೇ ವೆಬ್​ಸೈಟ್​ನಲ್ಲಿ ಎಲ್ಲದರ ಮಾಹಿತಿ ಸಿಗಲಿದೆ.

ವೆಬ್​ಸೈಟ್​ ಜಾರಿ ಎಂದು?

ಲೈವ್​ ಟ್ರೈನ್​ ಸ್ಟೇಟಸ್​​, ಟಿಕೆಟ್​ ಬುಕ್ಕಿಂಗ್​, ಸೀಟು ಪರಿಶೀಲನೆಯ ಸೇವೆಯನ್ನು ಒಳಗೊಂಡ ಸೂಪರ್​ ಆಪ್ ಹೊಸ ವೆಬ್​ಸೈಟ್​​​ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ತತ್ಕಾಲ್​ ಬಳಕೆ ಇನ್ನು ಸುಲಭ

ತತ್ಕಾಲ್​ನಲ್ಲಿ ಟಿಕೆಟ್​ ಬುಕ್​ ಮಾಡುವ ಸಂದರ್ಭದಲ್ಲಿ ಕಾಡುತ್ತಿದ್ದ ಕ್ಯಾಪ್ಚಾ, ಪಾಪ್​ಅಪ್​ ಹಾಗೂ ಆಗಾಗ್ಗೆ ಕಾಡುತ್ತಿದ್ದ ಗ್ರಾಫಿಕ್​ ಸಮಸ್ಯೆಗಳನ್ನು ಇಲ್ಲಿ ತೆಗೆದುಹಾಕಲಾಗುತ್ತದೆ, ಇದರಿಂದಾಗಿ ಬುಕಿಂಗ್ ಪ್ರಕ್ರಿಯೆಯಲ್ಲಿ ಸಮಯ ಉಳಿತಾಯವಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ಇನ್ಮುಂದೆ ಸುಲಭವಾಗಿ ಟಿಕೆಟ್​ ಬುಕ್​ ಮಾಡಿಕೊಳ್ಳಬಹುದಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net