ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರಿಂದ ಆಹ್ವಾನ! Ali Khamenei Funeral

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರಿಂದ ಆಹ್ವಾನ!
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರಿಂದ ಆಹ್ವಾನ!
Published on
ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ(Ali Khamenei Funeral) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಧಿಕೃತ ಆಹ್ವಾನ ನೀಡಿದ್ದಾರೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಕಳೆದ ಫೆಬ್ರವರಿ 28 ರಂದು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆದ ಮೊದಲ ದಿನದ ಭೀಕರ ವೈಮಾನಿಕ ದಾಳಿಯಲ್ಲಿ 86 ವರ್ಷದ ಖಮೇನಿ ಮೃತಪಟ್ಟಿದ್ದರು. ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಕ್ಕೆ ಕಾರಣವಾಗಿದ್ದ ಈ ಘಟನೆಯ ಹಲವು ತಿಂಗಳುಗಳ ಬಳಿಕ, ಈಗ ಅವರ ಭವ್ಯ ಅಂತ್ಯಕ್ರಿಯೆಗೆ ಇರಾನ್ ಸರ್ಕಾರ ದಿನಾಂಕ ನಿಗದಿಪಡಿಸಿದೆ. ಮುಂಬರುವ ಜುಲೈ 4 ರಿಂದ ಜುಲೈ 9 ರವರೆಗೆ ಇರಾನ್‌ನಲ್ಲಿ ಸರಣಿ ಶೋಕ ಸಭೆ ಹಾಗೂ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.

ಜುಲೈ 4 ರಿಂದ ಅಂತ್ಯಕ್ರಿಯೆ ಆರಂಭ; ಮಶಾದ್‌ನಲ್ಲಿ ದಫನ್

ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಕಳೆದ 36 ವರ್ಷಗಳಿಂದ ಇಸ್ಲಾಮಿಕ್ ಗಣರಾಜ್ಯದ ಪರಮೋಚ್ಚ ಅಧಿಕಾರ ನಡೆಸಿದ್ದ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮಗಳು ಜುಲೈ 4 ರಿಂದ ಆರಂಭವಾಗಲಿವೆ. ಜುಲೈ 7 ರಂದು ಟೆಹ್ರಾನ್‌ನ ದಕ್ಷಿಣದಲ್ಲಿರುವ ಪವಿತ್ರ ನಗರವಾದ ಕೋಮ್​ನಲ್ಲಿ ವಿಶೇಷ ಧಾರ್ಮಿಕ ಪ್ರಾರ್ಥನೆಗಳು ನಡೆಯಲಿದ್ದು, ಅಂತಿಮವಾಗಿ ಜುಲೈ 9 ರಂದು ಅವರ ತವರು ನಗರಿ ಹಾಗೂ ಈಶಾನ್ಯ ಇರಾನ್‌ನ ಪವಿತ್ರ ನಗರವಾಗಿರುವ ಮಶಾದ್​ನಲ್ಲಿ ಪಾರ್ಥಿವ ಶರೀರವನ್ನು ದಫನ್ ಮಾಡಲಾಗುವುದು.
ಇಸ್ಲಾಮಿಕ್ ಕಾನೂನಿನ ಪ್ರಕಾರ ಮೃತದೇಹವನ್ನು ಸಾಧ್ಯವಾದಷ್ಟು ಬೇಗ ದಫನ ಮಾಡಬೇಕಿದ್ದರೂ, ಯುದ್ಧದ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ನೀಡಲು ಅವಕಾಶವಿದೆ. ಫೆಬ್ರವರಿಯಲ್ಲಿ ನಡೆದ ಹತ್ಯೆಯ ನಂತರ ಅವರ ಅಂತ್ಯಕ್ರಿಯೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಜೂನ್ ಕೊನೆಯಲ್ಲಿ ನಡೆಯಬಹುದು ಎನ್ನಲಾಗಿದ್ದ ಕಾರ್ಯಕ್ರಮಗಳನ್ನು ಈಗ ಅಧಿಕೃತವಾಗಿ ಜುಲೈ ಮೊದಲ ವಾರಕ್ಕೆ ನಿಗದಿಪಡಿಸಲಾಗಿದೆ.

ದಾಖಲೆ ಬರೆಯಲಿದೆಯೇ ಜನಸಾಗರ? ಪಾಕ್ ಪ್ರಧಾನಿಗೂ ಆಹ್ವಾನ

ಟೆಹ್ರಾನ್, ಕೋಮ್ ಮತ್ತು ಮಶಾದ್ ನಗರಗಳಲ್ಲಿ ನಡೆಯಲಿರುವ ಈ ಅಂತಿಮಯಾತ್ರೆಯಲ್ಲಿ ಬರೋಬ್ಬರಿ 2 ಕೋಟಿಗೂ (20 ಮಿಲಿಯನ್) ಹೆಚ್ಚು ಇಸ್ಲಾಮಿಕ್ ಅನುಯಾಯಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಒಂದು ವೇಳೆ ಈ ಅಂದಾಜು ನಿಜವಾದರೆ, ಇದು 1989ರಲ್ಲಿ ಇರಾನ್ ಸ್ಥಾಪಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 1 ಕೋಟಿ ಜನರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲಿದೆ.
ಈ ಐತಿಹಾಸಿಕ ವಿದಾಯದ ಸಂದರ್ಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳ ನಾಯಕರಿಗೆ ಇರಾನ್ ಅಧ್ಯಕ್ಷರು ಆಹ್ವಾನ ಕಳುಹಿಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಸೂದ್ ಪೆಜೆಶ್ಕಿಯಾನ್ ಡಿಜಿಟಲ್ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಯುದ್ಧ ನಿಲ್ಲಿಸಿದ್ದು, ಸದ್ಯ ಸ್ವಿಟ್ಜರ್ಲೆಂಡ್‌ನಲ್ಲಿ ದೀರ್ಘಾವಧಿ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಭಾರತಕ್ಕೆ ಬಂದಿರುವ ಆಹ್ವಾನ ರಾಜತಾಂತ್ರಿಕವಾಗಿ ಮಹತ್ವ ಪಡೆದಿದೆ.

ನೂತನ ಸುಪ್ರೀಂ ಲೀಡರ್ ಕೋಮಾದಲ್ಲಿದ್ದಾರೆಯೇ?

ಮತ್ತೊಂದೆಡೆ, ಮಾಜಿ ಸುಪ್ರೀಂ ಲೀಡರ್ ಖಮೇನಿ ಅವರ ನಿಧನದ ನಂತರ ಮಾರ್ಚ್ 8 ರಿಂದ ಅವರ 56 ವರ್ಷದ ಪುತ್ರ ಮೊಜ್ತಾಬಾ ಹೊಸೇನಿ ಖಮೇನಿ ಇರಾನ್‌ನ ನೂತನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ನಿಗೂಢತೆ ಆವರಿಸಿದೆ.
ಅಮೆರಿಕದ ಉನ್ನತ ಅಧಿಕಾರಿಗಳಾದ ಮಾರ್ಕೊ ರೂಬಿಯೋ ಮತ್ತು ಪೀಟ್ ಹೆಗ್ಸೆತ್ ಸೇರಿದಂತೆ ಪ್ರಮುಖರು, ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಸದ್ಯ ಕೋಮಾದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವುದು ಅಂತಾರಾಷ್ಟ್ರೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಇರಾನ್ ಜಾಗತಿಕ ಸಮುದಾಯದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಈ ಅಂತ್ಯಕ್ರಿಯೆಯ ಆಹ್ವಾನ ಹೊರಬಿದ್ದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net