ಇಂದು ಮತ್ತು ನಾಳೆ ಅಯೋಧ್ಯೆ ರಾಮಮಂದಿರ ಟ್ರಸ್ಟ್ ಸಿಇಒ ಹುದ್ದೆಗೆ ಸಂದರ್ಶನ; 18 ಮಂದಿ ಆಯ್ಕೆ | Ram Mandir Trust

ಅಯೋಧ್ಯೆಯ ರಾಮಮಂದಿರ
ಅಯೋಧ್ಯೆಯ ರಾಮಮಂದಿರ
Published on
ಲಖನೌ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ(Ram Mandir Trust) ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ರಾಮ ಮಂದಿರದ ಆವರಣದಲ್ಲಿ ಇಂದು(ಆ. 11) ಮತ್ತು ನಾಳೆ ಸಿಇಒ ಹುದ್ದೆಗೆ ಸಂದರ್ಶನಗಳನ್ನು ನಡೆಸಲಾಗುತ್ತಿದೆ. ಒಟ್ಟು 18 ಜನರನ್ನು ಸಂದರ್ಶನಗಳಿಗೆ ಆಯ್ಕೆ ಮಾಡಲಾಗಿದೆ.
ರಾಮ ಮಂದಿರ ಟ್ರಸ್ಟ್‌ನ ಸಿಇಒ ಆಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಈಗ ಕುತೂಹಲ ಕೆರಳಿಸಿದ್ದು, ಮಂದಿರದಲ್ಲಿ ಹಣ ಕಳ್ಳತನವಾದ ಘಟನೆಯ ಬಳಿಕ ಟ್ರಸ್ಟ್ ಪೂರ್ಣ ಪ್ರಮಾಣದ ಸಿಇಒ ಅವರನ್ನು ನೇಮಿಸಲು ನಿರ್ಧರಿಸಿದೆ. ಈ ಹಿನ್ನೆಲೆ ಹುದ್ದೆಗೆ 5,300ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 18 ಜನರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ರಾಮ ಮಂದಿರದಲ್ಲಿರುವ ಪ್ರವಾಸಿ ವಸತಿ ಕೇಂದ್ರದಲ್ಲಿರುವ ಸಮ್ಮೇಳನ ಕೊಠಡಿಯಲ್ಲಿ ನಡೆಯುತ್ತಿದೆ. ಮಾಜಿ ನ್ಯಾಯಾಧೀಶರಾದ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಸುರೇಶ್ ಹವಾರೆ ಅವರನ್ನೊಳಗೊಂಡ ಸಮಿತಿಯು ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುತ್ತಿದೆ.
ಇನ್ನೂ ಸಂದರ್ಶನಕ್ಕೆ ಆಯ್ಕೆಯಾದ 18 ಅಭ್ಯರ್ಥಿಗಳು ಬೆಳಗ್ಗೆ 9 ಗಂಟೆ ಸುಮಾರಿಗೆ ಅಯೋಧ್ಯಾ ವಿಮಾನ ನಿಲ್ದಾಣ ಆಗಮಿಸಿದರು. ಬಳಿಕ ಆಡಳಿತ ಮಂಡಳಿ ಪ್ರತಿಯೊಬ್ಬ ಅಭ್ಯರ್ಥಿಯನ್ನು ಅವರವರ ಹೋಟೆಲ್‌ಗಳಿಗೆ ಸ್ಥಳಾಂತರಿಸಿದ ಬಳಿಕ, ಸಮ್ಮೇಳನ ಕೊಠಡಿಗೆ ಕರೆಸಿಕೊಂಡಿತು. ಸಂದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡದಂತೆ ಸೂಚನೆ ನೀಡಲಾಗಿದೆ. ಸಂದರ್ಶನ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳು, ಅಯೋಧ್ಯಾ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ ಅಲ್ಲಿಂದ ತಮ್ಮ ಸ್ಥಳಕ್ಕೆ ತೆರಳುತ್ತಾರೆ ಎಂದು ಟ್ರಸ್ಟ್ ಪದಾಧಿಕಾರಿಗಳು ಹೇಳಿದ್ದಾರೆ.
ಸಂದರ್ಶನಗಳ ನಂತರ, ಆಯ್ಕೆ ಸಮಿತಿಯು ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರ ಹೆಸರುಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪರಿಗಣನೆಗೆ ಸಲ್ಲಿಸುತ್ತದೆ. ಸೆಪ್ಟೆಂಬರ್ 2ರಂದು ಟ್ರಸ್ಟ್ ಹೊಸ ಸಿಇಒ ನೇಮಕವನ್ನು ಘೋಷಿಸಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net