ಅರಾವಳಿ ಬೆಟ್ಟಗಳ ಕುರಿತ ವ್ಯಾಖ್ಯಾನ: ತನ್ನ ಹಿಂದಿನ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್​ | Aravalli hills

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ದೆಹಲಿ: ಅರಾವಳಿ ಬೆಟ್ಟಗಳ ಬಗೆಗಿನ ತನ್ನ ಹಿಂದಿನ ನ. 20ರ ವ್ಯಾಖ್ಯಾನದ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ(ಡಿ. 29) ತಡೆ ನೀಡಿದ್ದು, ಈ ಕುರಿತು ತಜ್ಞರ ಸಮಿತಿ ರಚಿಸಿ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 
ನ. 20ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್​, 100 ಮೀಟರ್​ಗಳಿಗಿಂತ ಎತ್ತರ ಇರುವ ಬೆಟ್ಟಗಳು ಮಾತ್ರ ಅರಾವಳಿ ಬೆಟ್ಟ ಎಂದು ಪರಿಗಣಿಸುವುದನ್ನು ಅನುಮೋದಿಸಿತ್ತು. ಈ ಕ್ರಮವು ಅನಿಯಂತ್ರಿತ ಗಣಿಗಾರಿಕೆ ಮತ್ತು ತೀವ್ರ ಪರಿಸರ ನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿದ್ದರು.
ಈ ಹಿನ್ನೆಲೆ ಅರಾವಳಿ ಪ್ರದೇಶದಲ್ಲಿನ ಗಣಿಗಾರಿಕೆ ಚಟುವಟಿಕೆಗಳು ಮತ್ತು ಪರಿಸರದ ಮೇಲಿನ ಅವುಗಳ ಪ್ರಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್, ನ್ಯಾ. ಜೆ.ಕೆ. ಮಹೇಶ್ವರಿ ಹಾಗೂ ಎ.ಜಿ. ಮಸಿಹ್ ನೇತೃತ್ವದ ತ್ರಿಸದಸ್ಯ ಪೀಠ ತನ್ನ ಹಿಂದಿನ ಆದೇಶಕ್ಕೆ ತಡೆ ನೀಡಿದೆ.
ಹಿಂದಿನ ಸಮಿತಿಯ ವರದಿ ಅಥವಾ ಅರಾವಳಿ ಶ್ರೇಣಿಯ ಕುರಿತು ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವ ಮೊದಲು ನ್ಯಾಯಯುತ ಮತ್ತು ಸ್ವತಂತ್ರ ತಜ್ಞರ ಮೌಲ್ಯಮಾಪನ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ, ಬೆಟ್ಟಗಳ ಎತ್ತರ, ಪರಿಸರ ಮಹತ್ವ ಮತ್ತು ಈ ಪ್ರದೇಶದಲ್ಲಿ ಅನುಮತಿಸಲಾದ ಗಣಿಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಶೀಲಿಸಲು ಉನ್ನತ-ಶಕ್ತಿಯ ತಜ್ಞರ ಸಮಿತಿಯನ್ನು ರಚಿಸುವ ಅಗತ್ಯವಿದೆ ಹೇಳಿದೆ.
ಅರಾವಳಿ ಶ್ರೇಣಿಗಳ ಬಗೆಗಿನ ಹಿಂದಿನ ಸಮಿತಿಯು ಮಾಡಿದ ಶಿಫಾರಸುಗಳ ಪರಿಸರ ಪರಿಣಾಮವನ್ನು ತಜ್ಞರ ಸಮಿತಿಯು ಪರಿಶೀಲಿಸಬೇಕು. ಹಿಂದಿನ ಸಮಿತಿಯು ಹೆಚ್ಚಾಗಿ ಅಧಿಕಾರಿಗಳಿಂದ ಕೂಡಿದೆ ಎಂದು ಗಮನಿಸಿದ್ದು, ಹೀಗಾಗಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ನಿರ್ದೇಶನ ನೀಡಿದೆ.
ಕೇಂದ್ರ, ಅರಾವಳಿ ಪ್ರದೇಶದ ನಾಲ್ಕು ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರಿಗೆ ನೋಟಿಸ್ ಜಾರಿ ಮಾಡಿದ್ದು, 2026 ಜನವರಿ 21ಕ್ಕೆ ವಿಚಾರಣೆಯನ್ನು ಮುಂದೂಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net