ಕೂದಲಿನ ಅಂದಕ್ಕೆ ತೀರ ಅಗತ್ಯ ಪೋಷಕಾಂಶಗಳ ಸೇವನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರೋಟೀನ್: ಕೂದಲು ಕೆರಟಿನ್ ಎಂಬ ಪೊ›ಟೀನ್​ನಿಂದಲೇ ತಯಾರಾಗಿರುವುದು. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದು ಕೂದಲಿನ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಇಲ್ಲದಿದ್ದರೆ ಕೂದಲು ಒರಟಾಗುತ್ತದೆ ಮತ್ತು ಬೆಳವಣಿಗೆ ಚೆನ್ನಾಗಿ ಆಗುವುದೇ ಇಲ್ಲ. ಬೇಳೆ, ಕಾಳು, ಮೊಸರು, ಬೀಜಗಳು ಹಾಗೂ ಮಾಂಸಹಾರಗಳಿಂದ ನಮಗೆ ಪೋ›ಟೀನ್ ಸಿಗುತ್ತದೆ.

ವಿಟಮಿನ್ ಬಿ7 (ಬಯೋಟಿನ್): ಇದು ಕೆರೆಟಿನ್ ಉತ್ಪಾದನೆಯಲ್ಲಿ ಅತ್ಯಂತ ಅವಶ್ಯಕ. ತುಂಬಾ ಜನರ ಕೂದಲು ತೆಳ್ಳಗಾಗಲು ಇದೇ ಕಾರಣ. ಇದು ನಮಗೆ ಬಾದಾಮಿ, ವಾಲ್ ನಟ್, ಮಶ್ರೂಮ್ ಗೆಣಸು ಹಾಗೂ ಮೊಟ್ಟೆಗಳಲ್ಲಿ ಸಿಗುತ್ತದೆ.

ಕಬ್ಬಿಣ: ನಮಗೆಲ್ಲ ಗೊತ್ತಿರುವ ಹಾಗೆ ಕೆಂಪು ರಕ್ತಕಣಗಳು ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪಿಸುತ್ತವೆ. ಕಬ್ಬಿಣದ ಅಂಶ ಕಡಿಮೆಯಾದರೆ ಸರಿಯಾಗಿ ಆಮ್ಲಜನಕ ಸಿಗದೇ ಹೇರ್ ಫಾಲಿಕಲ್ ಗಳಲ್ಲಿ ಸಮಸ್ಯೆಯಾಗಿ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುವುದಿಲ್ಲ. ಕಬ್ಬಿಣವು ನಮಗೆ ಬೇಳೆ, ಕಾಳುಗಳು, ಸೊಪ್ಪುಗಳು, ಖರ್ಜೂರ, ಒಣ ದ್ರಾಕ್ಷಿ, ಬೂದುಗುಂಬಳ ಮುಂತಾದ ಪದಾರ್ಥಗಳಿಂದ ಸಿಗುತ್ತದೆ.

ವಿಟಮಿನ್ ಸಿ: ಇದು ಅದ್ಭುತವಾದ ಆಂಟಿ ಆಕ್ಸಿಡೆಂಟ್ ಆಗಿದ್ದು ಕೂದಲುಗಳ ರಕ್ಷಣೆ ಮಾಡುತ್ತದೆ ಮತ್ತು ನಾವು ಸೇವಿಸಿದ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಮಗೆ ನೆಲ್ಲಿಕಾಯಿ, ಹುಳಿ ಹಣ್ಣುಗಳು, ಪೇರಲೆ ಹಣ್ಣು ಇತ್ಯಾದಿಗಳಿಂದ ಲಭ್ಯವಾಗುತ್ತದೆ. ಹಾಗಾಗಿಯೇ ಕೂದಲಿನ ಆರೋಗ್ಯಕ್ಕೆ ನಿತ್ಯವೂ ಒಂದು ನೆಲ್ಲಿಕಾಯಿ ಯನ್ನು ಸೇವಿಸಬೇಕೆಂದು ಹೇಳುವುದು.

ಒಮೆಗಾ ತ್ರೀ ಫ್ಯಾಟಿ ಆಸಿಡ್: ನಮ್ಮ ತಲೆಯ ಚರ್ಮದ ಭಾಗಕ್ಕೆ ತೇವಾಂಶವನ್ನು ಇದೇ ಕೊಡುತ್ತದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ. ಅಗಸೆ ಬೀಜ, ಚಿಯಾ ಬೀಜ, ವಾಲ್ನಟ್, ಮೀನುಗಳಿಂದ ಒಮೆಗಾ ತ್ರಿ ಸಿಗುತ್ತದೆ. ಒಮೆಗಾ ತ್ರಿ ಪೋಷಕಾಂಶ ಇರುವ ಮಾತ್ರೆಗಳು ಕೂಡಾ ಲಭ್ಯವಿರುವ ಕಾರಣ ಅವುಗಳಸೇವನೆಯಿಂದಲೂ ಕೂದಲಿನ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

ಝಿಂಕ್: ಕೂದಲಿನ ಅಂಗಾಂಶ ಚೆನ್ನಾಗಿ ಬೆಳೆಯಲು ಮತ್ತು ಹಾಳಾದಾಗ ದುರಸ್ತಿಯಾಗಲು ಝಿಂಕ್ ಬೇಕೇ ಬೇಕು. ಇದು ಕೂದಲಿನ ಬುಡದಲ್ಲಿ ಇರುವ ಕೊಬ್ಬು ಭರಿತ ಗ್ರಂಥಿಗಳು ಸರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಇದು ನಮಗೆ ಬೀಜಗಳು ಮತ್ತು ನಟ್​ಗಳಲ್ಲಿ ಒಳ್ಳೆಯ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಕುಂಬಳ ಬೀಜ ಮತ್ತು ಗೋಡಂಬಿಗಳಲ್ಲಿ ಸಿಗುತ್ತದೆ.

ವಿಟಮಿನ್ ಇ: ಇದು ಕೂಡ ಜೀವಕೋಶಗಳ ಮೇಲಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿ ರಕ್ತಸಂಚಾರವನ್ನು ಸುಧಾರಿಸುತ್ತದೆ. ಇದು ನಮಗೆ ಸೂರ್ಯಕಾಂತಿ ಬೀಜ, ಬಾದಾಮಿ, ಪಾಲಕ್ ಹಾಗೂ ಬಸಳೆ ಸೊಪ್ಪುಗಳಲ್ಲಿ ಲಭ್ಯವಾಗುತ್ತದೆ.

ವಿಟಮಿನ್ ಡಿ: ಇದು ಕೂದಲು ಹುಟ್ಟಲು ಬೇಕಾದ ರಂಧ್ರಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ನಮಗೆಲ್ಲ ಗೊತ್ತಿರುವಂತೆ ಬಿಸಿಲು ನಮ್ಮ ಚರ್ಮದ ಮೇಲೆ ಬಿದ್ದಾಗ ನಮ್ಮ ಚರ್ಮವು ವಿಟಮಿನ್ ಡಿ ಯನ್ನು ಉತ್ಪಾದಿಸುತ್ತದೆ.

ಹಾಗಾಗಿ ದಿನಕ್ಕೆ ಕನಿಷ್ಠ 10 ನಿಮಿಷ ನಾವು ಬಿಸಿಲ ಸ್ನಾನ ಮಾಡಬೇಕು.ಇದೆಲ್ಲಾ ಸರಿ; ಆದರೆ ಇವೆಲ್ಲವುಗಳನ್ನು ಹೀರಿಕೊಳ್ಳುವ ಶಕ್ತಿ ನಮ್ಮ ಕರುಳಿಗೆ ಬೇಕಲ್ಲವೇ? ಹಾಗಾಗಿ ಕರುಳಿನ ಆರೋಗ್ಯ ಕೂಡ ಇಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರಗಳನ್ನು ಮಾತ್ರ ನಾವು ಸೇವಿಸಬೇಕು. ಜಂಕ್​ಫುಡ್, ಮೈದಾ, ಕರಿದ ಪದಾರ್ಥಗಳು ಮುಂತಾದವು ನಮ್ಮ ಕರುಳಿನ ಆರೋಗ್ಯವನ್ನು ಹಾಳು ಮಾಡುತ್ತವೆ. ಇಷ್ಟೇ ಅಲ್ಲದೆ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆಗಳು ಕರುಳಿನ ಮೇಲೆ ನೇರ ಪರಿಣಾಮವನ್ನು ಉಂಟು ಮಾಡಿ ಕರುಳು ಬೇಗ ಹಾಳಾಗಲು ಕಾರಣವಾಗುತ್ತವೆ. ಇವುಗಳನ್ನು ಸರಿ ಮಾಡಿಕೊಳ್ಳದಿದ್ದರೆ ಎಷ್ಟೇ ಪೋಷಕಾಂಶ ಭರಿತ ಆಹಾರ ಸೇವಿಸಿದರೂ ಪ್ರಯೋಜನವಿರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net