India | ಬಾಂಗ್ಲಾದಲ್ಲಿ ಅಸ್ಥಿರತೆ; ಯೂನಸ್ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ನರಕಯಾತನೆ: 2,900 ದಾಳಿಗಳ ಅಂಕಿಅಂಶ ಬಿಡುಗಡೆ ಮಾಡಿದ ಭಾರತ
ಯೂನಸ್ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ನರಕಯಾತನೆ: 2,900 ದಾಳಿಗಳ ಅಂಕಿಅಂಶ ಬಿಡುಗಡೆ ಮಾಡಿದ ಭಾರತ
Published on:
Copied
Follow Us
ನವದೆಹಲಿ: ಬಾಂಗ್ಲಾದೇಶದಲ್ಲಿ ಯೂನಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ಹಿಂಸಾತ್ಮಕ ದಾಳಿಗಳು ನಡೆದಿವೆ ಎಂದು ಭಾರತ(India) ಅಧಿಕೃತ ಮಾಹಿತಿ ನೀಡಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿಗಳು
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತನ್ನ ಕಳವಳವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಲ್ಲದೆ, ಅಲ್ಪಸಂಖ್ಯಾತರ ಮೇಲಿನ ಈ ದಾಳಿಗಳು ಕೇವಲ ಬಿಡಿ ಘಟನೆಗಳಲ್ಲ ಅಥವಾ ರಾಜಕೀಯ ಅಸ್ಥಿರತೆಯ ಭಾಗವಲ್ಲ. ಇದು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ವ್ಯವಸ್ಥಿತ ದೌರ್ಜನ್ಯ ಎಂದು ಭಾರತ ಹೇಳಿದೆ.
ನೆರೆಯ ದೇಶಗಳ ಭೀಕರ ಹತ್ಯೆಗಳು
ಇತ್ತೀಚೆಗೆ ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಮತ್ತು ರಾಜಬಾರಿ ಜಿಲ್ಲೆಯಲ್ಲಿ ಅಮೃತ್ ಮಂಡಲ್ ಹತ್ಯೆಗಳು ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿವೆ. ಅಲ್ಲದೆ, ಮೈಮೆನ್ಸಿಂಗ್‌ನಲ್ಲಿ ನಡೆದ ದಾಳಿಯು ತೀವ್ರ ಸ್ವರೂಪದ್ದಾಗಿದ್ದು, ಅಲ್ಪಸಂಖ್ಯಾತರ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎತ್ತಿದೆ.
ಬಾಂಗ್ಲಾದಲ್ಲಿ 2,900 ಪ್ರಕರಣಗಳಲ್ಲಿ ಕೊಲೆ, ದೈಹಿಕ ಹಲ್ಲೆ, ಮಹಿಳೆಯರ ಮೇಲಿನ ದೌರ್ಜನ್ಯ, ದೇವಸ್ಥಾನಗಳ ಧ್ವಂಸ, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಅಕ್ರಮವಾಗಿ ಭೂಮಿ ಕಬಳಿಸುವಿಕೆಗಳು ಸೇರಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಯೂನಸ್ ಸರ್ಕಾರದ ಸುಳ್ಳು ನಿರೂಪಣೆಗೆ ಟಾಂಗ್
ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿಲ್ಲ, ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂಬ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಮರ್ಥನೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಅಂಕಿಅಂಶಗಳ ಸಮೇತ ಭಾರತವು ಈ ದೌರ್ಜನ್ಯಗಳ ಗಂಭೀರತೆಯನ್ನು ಜಗತ್ತಿನ ಮುಂದೆ ಇಟ್ಟಿದೆ.
ಭಾರತದ ರಾಜತಾಂತ್ರಿಕ ನಡೆ
ಭಾರತ ಸರ್ಕಾರವು ಈ ವಿಷಯವನ್ನು ಬಾಂಗ್ಲಾ ಸರ್ಕಾರದ ಮುಂದೆ ಹಲವು ಬಾರಿ ಪ್ರಸ್ತಾಪಿಸಿದೆ. ಅಲ್ಲದೆ, ಅಲ್ಪಸಂಖ್ಯಾತರಿಗೆ ಭದ್ರತೆ ಒದಗಿಸುವುದು ಯಾವುದೇ ದೇಶದ ಪ್ರಾಥಮಿಕ ಜವಾಬ್ದಾರಿ ಎಂದು ನೆನಪಿಸಿದೆ. ಅಲ್ಲದೆ, ಇಸ್ಕಾನ್ (ISKCON) ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನ ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆಯೂ ಭಾರತ ತನ್ನ ಆಕ್ಷೇಪವನ್ನು ದಾಖಲಿಸಿದೆ.
ಬಾಂಗ್ಲಾ ಹಿಂಸಾತ್ಮಕ ಘಟನೆಗಳಿಗೆ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರತಿಕ್ರಿಯೆ
ವಿಶ್ವಸಂಸ್ಥೆ: ಬಾಂಗ್ಲಾ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ತಂಡವೊಂದನ್ನು ಕಳುಹಿಸಿದೆ. ಯಾವುದೇ ಸಮುದಾಯವನ್ನು ಧರ್ಮ ಅಥವಾ ರಾಜಕೀಯ ಕಾರಣಕ್ಕಾಗಿ ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್: ಈ ಸಂಸ್ಥೆಯು ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಪತ್ರ ಬರೆದಿದ್ದು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಲು ವಿಫಲವಾಗಿರುವುದು ಆತಂಕಕಾರಿ ಎಂದು ಹೇಳಿದೆ. ಅಲ್ಲದೆ, ಅಪರಾಧಿಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್: ಅಮೆರಿಕವು ಕೂಡ ಬಾಂಗ್ಲಾದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಬೇಕು ಎಂದು ಯೂನಸ್ ಸರ್ಕಾರಕ್ಕೆ ಸಂದೇಶ ರವಾನಿಸಿದೆ,(ಏಜೆನ್ಸೀಸ್).