ದೋಸ್ತಿಯಲ್ಲಿ ಶುರುವಾಯ್ತು ಕಿತ್ತಾಟ! ಭ್ರಷ್ಟಾಚಾರದಲ್ಲಿ ಮೋದಿಗಿಂತ ಮಮತಾ ಕಮ್ಮಿಯಿಲ್ಲ! ದೀದಿ ವಿರುದ್ಧ ರಾಹುಲ್ ಕೆಂಡಮಂಡಲ! Rahul Gandhi

ದೋಸ್ತಿಯಲ್ಲಿ ಶುರುವಾಯ್ತು ಕಿತ್ತಾಟ! ಭ್ರಷ್ಟಾಚಾರದಲ್ಲಿ ಮೋದಿಗಿಂತ ಮಮತಾ ಕಮ್ಮಿಯಿಲ್ಲ! ದೀದಿ ವಿರುದ್ಧ ರಾಹುಲ್ ಕೆಂಡಮಂಡಲ!
ದೋಸ್ತಿಯಲ್ಲಿ ಶುರುವಾಯ್ತು ಕಿತ್ತಾಟ! ಭ್ರಷ್ಟಾಚಾರದಲ್ಲಿ ಮೋದಿಗಿಂತ ಮಮತಾ ಕಮ್ಮಿಯಿಲ್ಲ! ದೀದಿ ವಿರುದ್ಧ ರಾಹುಲ್ ಕೆಂಡಮಂಡಲ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಈಗ 'ಇಂಡಿಯಾ' ಮೈತ್ರಿಕೂಟದ ಒಳಗಿನ ಒಡಕು ಬೀದಿಗೆ ಬಂದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಅವರು ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೆಂಡ ಕಾರಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ದೀದಿ ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

"TMC ಲಿಂಕ್ ಇದ್ದರೆ ಮಾತ್ರ ಕೆಲಸ: ಉದ್ಯೋಗ ಹಗರಣದ ಬಗ್ಗೆ ಕಿಡಿ

ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಬಂಗಾಳದ ಜನಸಾಮಾನ್ಯರ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಉದ್ಯೋಗ ತಾರತಮ್ಯ: ಪಶ್ಚಿಮ ಬಂಗಾಳದಲ್ಲಿ ನೀವು ಟಿಎಂಸಿ ಜೊತೆ ಸಂಪರ್ಕ ಹೊಂದಿದ್ದರೆ ಮಾತ್ರ ನಿಮಗೆ ಕೆಲಸ ಸಿಗುತ್ತದೆ. ಸಾಮಾನ್ಯ ಜನರು ಹತಾಶೆಯಿಂದ ಕೈ ಮಸೆಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿಪಕ್ಷ ನಾಯಕ ದೂರಿದ್ದಾರೆ.
ಭ್ರಷ್ಟಾಚಾರದ ಹೋಲಿಕೆ: ಇದು ಕಟು ಸತ್ಯ - ಭ್ರಷ್ಟಾಚಾರದಲ್ಲಿ ಮಮತಾ ಜಿ ಅವರು ಮೋದಿ ಜಿ ಅವರಿಗಿಂತ ಯಾವುದೇ ರೀತಿಯಲ್ಲೂ ಕಮ್ಮಿಯಿಲ್ಲ ಎಂದು ರಾಹುಲ್​ ಕಿಡಿಕಾರಿದ್ದಾರೆ.
ಬಿಜೆಪಿ-ಟಿಎಂಸಿ ನಡುವೆ 'ಒಳ ಒಪ್ಪಂದ'ದ ಆರೋಪ?
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್, ಬಿಜೆಪಿ ಮತ್ತು ಟಿಎಂಸಿ ನಡುವೆ ಗುಪ್ತ ಮೈತ್ರಿ ಇದೆ ಎಂದು ಗಂಭೀರ ಆರೋಪ ಮಾಡಿದ್ದರು.
ಮನೆ ಕಿತ್ತುಕೊಳ್ಳಲಿಲ್ಲ ಏಕೆ: ಪ್ರಧಾನಿ ಮೋದಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದಿಗೂ ಮಮತಾ ದೀದಿಯವರ ಮನೆಯನ್ನು ಕಿತ್ತುಕೊಳ್ಳಲಿಲ್ಲ. ಏಕೆಂದರೆ ಅಸಲಿ ಹೋರಾಟ ಇರುವುದು ಕಾಂಗ್ರೆಸ್ ಜೊತೆ ಎಂಬುದು ಅವರಿಗೆ ತಿಳಿದಿದೆ. ಮಮತಾ ಜೊತೆ ಅವರಿಗೆ ಯಾವುದೇ ವೈರವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮತ್ತು ಟಿಎಂಸಿ ಒಂದೇ ನಾಣ್ಯದ ಎರಡು ಮುಖಗಳು ಎಂದು ರಾಹುಲ್​ಪ್ರತಿಪಾದಿಸಿದ್ದಾರೆ.
ಮತಗಳ ಕಳ್ಳತನ: ಬಿಜೆಪಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತಗಳನ್ನು ಕದಿಯುವ ಮೂಲಕ ಚುನಾವಣೆ ಗೆದ್ದಿದೆ ಎಂದು ಕಾಂಗ್ರೆಸ್​ ನಾಯಕ ಇದೇ ವೇಳೆ ವಾಗ್ದಾಳಿ ನಡೆಸಿದರು.

ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ ಮಾತ್ರ"

ಬಿಜೆಪಿಯ ಸಿದ್ಧಾಂತವನ್ನು ಎದುರಿಸುವ ಶಕ್ತಿ ಕೇವಲ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ರಾಹುಲ್ ಪುನರುಚ್ಚರಿಸಿದರು. ಕಾಂಗ್ರೆಸ್ ಸಿದ್ಧಾಂತಗಳ ಪಕ್ಷವಾಗಿದೆ. ನಾವು ಬಿಜೆಪಿಯೊಂದಿಗೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶವನ್ನು ಒಗ್ಗೂಡಿಸಲು ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದೆವು. ಆದರೆ ಪ್ರಧಾನಿ ಮೋದಿ ಅವರು ದೇಶವನ್ನು ಒಡೆಯುವ ಭಾರತ್ ತೋಡೋ ಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

56 ಇಂಚಿನ ಎದೆ ಟ್ರಂಪ್ ಮುಂದೆ ಬಾಗುತ್ತದೆ!

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಅಣಕಿಸಿದ ರಾಹುಲ್, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ನೆಹರು ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾಪುರುಷರು ಯಾರ ಮುಂದೆಯೂ ತಲೆ ಬಾಗಿಸಲಿಲ್ಲ. ಜೈಲಿಗೆ ಹೋದರು, ಬಲಿದಾನ ನೀಡಿದರೇ ಹೊರತು ನಮಿಸಲಿಲ್ಲ. ಆದರೆ 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಡಾಕ್ಷಣ ಕ್ಷಣಾರ್ಧದಲ್ಲಿ ತಲೆ ಬಾಗಿಸುತ್ತಾರೆ ಎಂದು ಟೀಕಿಸಿದ್ದಾರೆ.

ಬಂಗಾಳದ ದುಸ್ಥಿತಿಗೆ ಯಾರು ಕಾರಣ?

ಬಿಜೆಪಿ ಮತ್ತು ಟಿಎಂಸಿ ಇಬ್ಬರ ಭ್ರಷ್ಟಾಚಾರದಿಂದಾಗಿ ಪಶ್ಚಿಮ ಬಂಗಾಳ ರಾಜ್ಯವು ನಾಶವಾಗಿದೆ. ಇಲ್ಲಿನ ಯುವಕರು ಸಂಕಷ್ಟದಲ್ಲಿದ್ದಾರೆ ಮತ್ತು ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಆದ್ದರಿಂದ ಬಂಗಾಳದ ಜನತೆ ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net