ಸಿಂಧೂ ನದಿ ನೀರಿನ ವಿಚಾರ: ಪಾಕ್ ಬದಲಾಗೋವರೆಗೂ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ: ಕೇಂದ್ರ ಕಠಿಣ ನಿಲುವು | Indus Waters Issue
ಸಾಂದರ್ಭಿಕ ಚಿತ್ರ
Published on:
Copied
Follow Us
ನವದೆಹಲಿ: ಸಿಂಧೂ ನದಿ ನೀರಿನ ಒಪ್ಪಂದ(Indus Waters Issue) ಸ್ಥಗಿತಗೊಳಿಸಿರುವ ಕುರಿತು ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಭಾರತ, ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶುಕ್ರವಾರ(ಜು. 03) ಪಾಕ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ.
2025ರ ಏಪ್ರಿಲ್ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡ ಬಳಿಕ ಸಿಂಧೂ ನದಿ ನೀರಿನ ಒಪ್ಪಂದದ ಅನುಷ್ಠಾನವನ್ನು ಭಾರತ ಸ್ಥಗಿತಗೊಳಿಸಿದೆ. ಈಗ ಪಾಕ್ ನಾಯಕರು ಮತ್ತೊಮ್ಮೆ ಆ ವಿಷಯದ ಬಗ್ಗೆ ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕು. ಅಲ್ಲಿಯವರೆಗೆ, ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆ ದೇಶವು ಭಯೋತ್ಪಾದನೆಯನ್ನು ಉತ್ತೇಜಿಸುವವರೆಗೆ ನಾವು ಸಿಂಧೂ ಜಲ ಒಪ್ಪಂದದ ಅನುಷ್ಠಾನವನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಪ್ರಚಾರ ಮತ್ತು ಬೆದರಿಕೆ ಹೇಳಿಕೆಗಳು ತನ್ನ ನಿರ್ಧಾರದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದವು ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ವಿತರಣೆ ಮತ್ತು ಬಳಕೆಯನ್ನು ನಿಯಂತ್ರಿಸುತ್ತದೆ. ಒಂಬತ್ತು ವರ್ಷಗಳ ಸುದೀರ್ಘ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಪೆಹಲ್ಗಾಮ್ ದಾಳಿ ಬಳಿಕ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.
ಇನ್ನೂ ಕೇಂದ್ರ ಸರ್ಕಾರ, ನದಿ ನೀರಿನ ಒಪ್ಪಂದದಡಿಯಲ್ಲಿ ಭಾರತವು ಪ್ರಸ್ತುತ ಯಾವುದೇ ಬಾಧ್ಯತೆಗಳಿಗೆ ಬದ್ಧವಾಗಿಲ್ಲ ಎಂದು ಘೋಷಿಸಿದೆ. ಸಾರ್ವಭೌಮ ರಾಷ್ಟ್ರವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಯಾವುದೇ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಇನ್ನೂ ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್, ಒಪ್ಪಂದವು ಇನ್ನೂ ಸಂಪೂರ್ಣವಾಗಿ ಜಾರಿಯಲ್ಲಿದೆ ಎಂದಿದ್ದು, ಈಗ ಒಪ್ಪಂದವನ್ನು ನವೀಕರಿಸದಿದ್ದರೆ, ಅವರು ಪರಮಾಣು ಪರ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ (ಏಜೆನ್ಸೀಸ್).