

ಸಿಂಧೂ ಜಲ ಒಪ್ಪಂದದ ಕುರಿತು ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ತೀರ್ಪನ್ನು ಭಾರತ ಸರ್ಕಾರ ಸೋಮವಾರ (ಆ.31) ತಿರಸ್ಕರಿಸಿದ್ದು, ಈ ಮಧ್ಯಸ್ಥಿಕೆ ಸಂಸ್ಥೆಯನ್ನು ಕಾನೂನುಬಾಹಿರವಾಗಿ ರಚಿಸಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದ ಹಿನ್ನಲೆ ಭಾರತ, 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿ ಐತಿಹಾಸಿಕ ಮತ್ತು ದಂಡನಾತ್ಮಕ ಕ್ರಮಗಳನ್ನು ಘೋಷಿಸಿತ್ತು.
ವಿಶ್ವಬ್ಯಾಂಕ್ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಮಧ್ಯಸ್ಥಿಕೆ ನ್ಯಾಯಾಲಯವನ್ನು ರಚಿಸಲಾಗಿದೆ. ಇದು ಸಂಪೂರ್ಣವಾಗಿ ಕಾನೂನುಬಹಿರ. ಈ ಕಾರಣಕ್ಕೇ ಭಾರತವು ಈ ನ್ಯಾಯಾಲಯದ ತೀರ್ಪನ್ನು ಹಾಗೂ ಇದರ ಹಿಂದಿನ ಎಲ್ಲಾ ಘೋಷಣೆಗಳನ್ನು ಆರಂಭದಿಂದಲೂ ತಿರಸ್ಕರಿಸುತ್ತಾ ಬಂದಿದೆ ಎಂದು ವಿದೇಶಾಂಗ ಇಲಾಖೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.