ಸ್ವಚ್ಛ ನಗರಕ್ಕೆ ಕಪ್ಪು ಮಸಿ...ಅವರು ಬಿಸ್ಲೇರಿ ಕುಡಿದು ಮಜಾ ಮಾಡ್ತಿದ್ದಾರೆ, ಬಡವರು ವಿಷದ ನೀರು ಕುಡಿದು ಸಾಯ್ತಿದ್ದಾರೆ ಸ್ವಪಕ್ಷದ ವಿರುದ್ಧ ಉಮಾ ಭಾರತಿ ಆಕ್ರೋಶ | Indore Deaths

ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ
ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ
Published on
ಇಂದೋರ್‌: ಮಧ್ಯಪ್ರದೇಶದ ರಾಜಧಾನಿ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಸುಮಾರು ಹತ್ತು ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ, ಮಧ್ಯಪ್ರದೇಶ ಸರ್ಕಾರದ ವಿರುದ್ಧ ಪರೋಕ್ಷ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರದಲ್ಲಿರುವವರು ಮತ್ತು ಅಧಿಕಾರಿಗಳು ಸುರಕ್ಷಿತವಾಗಿ ಕುರ್ಚಿಗಳ ಮೇಲೆ ಕುಳಿತು ಬಿಸ್ಲೇರಿ ಕುಡಿಯುತ್ತಾ ಮಜಾ ಮಾಡುತ್ತಿದ್ದಾರೆ. ಆದರೆ ಇತ್ತ ಸಾಮಾನ್ಯ ಜನರು ವಿಷಪೂರಿತ ನೀರು ಕುಡಿದು ಸಾಯುತ್ತಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್​ಗಳನ್ನು ಹಂಚಿಕೊಂಡಿರುವ ಉಮಾಭಾರತಿ, ಈ ದುರಂತಕ್ಕೆ ಕಾರಣರಾಗಿರುವ ಅಧಿಕಾರಿಗಳು ಮತ್ತು ನಾಯಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಇಂತಹ ಪಾಪವನ್ನು ಕೇವಲ ವಿವರಣೆ ಮತ್ತು ಕ್ಷಮೆಯಾಚನೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜೀವದ ಬೆಲೆ ಕೇವಲ 2 ಲಕ್ಷ ರೂಪಾಯಿ ಅಲ್ಲ.
ದೇಶದಲ್ಲಿಯೇ ಅತ್ಯಂತ ಸ್ವಚ್ಛ ನಗರ ಎಂಬ ಪ್ರಶಸ್ತಿ ಪಡೆದ ನಗರದಲ್ಲಿ ಕೊಳಕು ಮತ್ತು ವಿಷಪೂರಿತ ನೀರು ಹಲವಾರು ಜೀವಗಳನ್ನು ತೆಗೆದುಕೊಂಡಿದೆ. ಇದು ಇನ್ನೂ ಹಾಗೆಯೇ ಮುಂದುವರೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಪರಿಹಾರ ಮತ್ತು ಜೀವದ ಬೆಲೆ ಕೇವಲ 2 ಲಕ್ಷ ರೂಪಾಯಿಗಳಲ್ಲ, ಜನರ ಜೀವದ ನಷ್ಟವನ್ನು ಎಷ್ಟೇ ಹಣವು ಸರಿದೂಗಿಸಲು ಸಾಧ್ಯವಿಲ್ಲ, ಮೃತರ ಕುಟುಂಬಗಳು ಜೀವನಪರ್ಯಂತ ದುಃಖದಲ್ಲಿ ಮುಳುಗಿರುತ್ತವೆ ಎಂದರು.
ಈ ಪಾಪಕ್ಕೆ ತೀವ್ರ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಕೆಳಗಿನಿಂದ ಮೇಲಿನವರೆಗಿನ ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು, ಮುಖ್ಯಮಂತ್ರಿ ಮೋಹನ್ ಯಾದವ್‌ಗೆ ಇದು ಪರೀಕ್ಷಾ ಸಮಯ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.
ಇಂದೋರ್‌ನ ಕಲುಷಿತ ನೀರಿನ ವಿಷಯದಲ್ಲಿ, ನಮ್ಮ ಯೋಜನೆ ಕೆಲಸ ಮಾಡಲಿಲ್ಲ ಎಂದು ಯಾರು ಹೇಳುತ್ತಾರೆ? ನಿಮ್ಮ ಯೋಜನೆ ಕೆಲಸ ಮಾಡದಿದ್ದಾಗ, ನೀವು ನಿಮ್ಮ ಸ್ಥಾನದಲ್ಲಿ ಕುಳಿತು ಬಿಸ್ಲೆರಿ ನೀರನ್ನು ಏಕೆ ಕುಡಿಯುವುದನ್ನು ಮುಂದುವರಿಸಿದ್ದೀರಿ? ನೀವು ಆ ಸ್ಥಾನವನ್ನು ಬಿಟ್ಟು ಸಾರ್ವಜನಿಕರನ್ನು ಏಕೆ ತಲುಪಲಿಲ್ಲ? ಅಂತಹ ಪಾಪಗಳಿಗೆ ಯಾವುದೇ ವಿವರಣೆಯಿಲ್ಲ, ಪ್ರಾಯಶ್ಚಿತ್ತ ಅಥವಾ ಶಿಕ್ಷೆ! ಎಂದು ಉಮಾಭಾರತಿ ಬರೆದುಕೊಂಡಿದ್ದಾರೆ. ದೇಶದ ಅತ್ಯಂತ ಸ್ವಚ್ಛ ನಗರ ಎಂದು ಖ್ಯಾತಿ ಪಡೆದಿರುವ ಇಂದೋರ್‌ನಲ್ಲಿ ಇಂತಹ ದೊಡ್ಡಮಟ್ಟದ ವೈಫಲ್ಯ ಸಂಭವಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಉಮಾಭಾರತಿ, ಇದಕ್ಕೆ ನಗರದ ಮೇಯರ್ ಮಾತ್ರವಲ್ಲ, ಇಡೀ ಮಧ್ಯಪ್ರದೇಶ ಸರ್ಕಾರ ಮತ್ತು ಆಡಳಿತವನ್ನು ಹೊಣೆಯಾಗಿಸಬೇಕು ಎಂದು ಹೇಳಿದರು. ಮೂರು ದಿನಗಳ ಹಿಂದೆ ತಮ್ಮ ಬಲಗಣ್ಣಿನ ಶಸ್ತ್ರಚಿಕಿತ್ಸೆ ನಡೆದಿರುವುದರಿಂದ ಯಾರನ್ನೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದರು.
ಘಟನೆಗೆ ಕಾರಣ...
ಮುಖ್ಯ ಕುಡಿಯುವ ನೀರಿನ ಪೈಪ್‌ಲೈನ್ ಹಾದುಹೋಗುವ ಜಾಗದ ಮೇಲೆಯೇ ನಿಯಮಬಾಹಿರವಾಗಿ ಶೌಚಾಲಯವೊಂದನ್ನು ನಿರ್ಮಾಣವಾಗಿದ್ದು, ಈ ಶೌಚಾಲಯಕ್ಕೆ ಸರಿಯಾದ ಸೆಪ್ಟಿಕ್ ಟ್ಯಾಂಕ್ ಇರಲಿಲ್ಲ, ಅಲ್ಲಿನ ತ್ಯಾಜ್ಯವನ್ನು ಗುಂಡಿಯೊಂದಕ್ಕೆ ಹರಿಸಲಾಗುತ್ತಿತ್ತು. ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿದ್ದು, ಶೌಚಾಲಯದ ತ್ಯಾಜ್ಯ ನೀರು ಈ ಸೋರಿಕೆಯ ಮೂಲಕ ನೇರವಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರಿಕೊಂಡಿದೆ. ಜನರು ಹಲವು ದಿನಗಳಿಂದ ನೀರಿನ ರುಚಿ ಮತ್ತು ವಾಸನೆಯ ಬಗ್ಗೆ ದೂರು ನೀಡಿದ್ದರೂ, ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಸೋರಿಕೆಯನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net