ಯಾರೂ ಬರಲಿಲ್ಲವೆಂದು ಕಣ್ಣೀರಿಟ್ಟ ಸೈನಿಕ: ಕಮಾಂಡರ್ ಮಾಡಿದ ಆ ಒಂದೇ ಒಂದು ಕೆಲಸಕ್ಕೆ ಮನಸೋತ ಇಂಟರ್ನೆಟ್! Indonesian Army

 Indonesian Army (ಚಿತ್ರ X)
Indonesian Army (ಚಿತ್ರ X)
Published on

ಇಂಡೋನೇಷ್ಯಾ: ಮಿಲಿಟರಿ ತರಬೇತಿಯ ಯಶಸ್ವಿ ಮುಕ್ತಾಯವೆಂದರೆ ಪ್ರತಿಯೊಬ್ಬ ಯೋಧನ ಜೀವನದಲ್ಲೂ ಅತ್ಯಂತ ಹೆಮ್ಮೆಯ ಕ್ಷಣ. ಆದರೆ, ಅದೇ ವೇದಿಕೆಯಲ್ಲಿ ಪ್ರೀತಿಪಾತ್ರರ ಉಪಸ್ಥಿತಿ ಇಲ್ಲದಿದ್ದಾಗ ಅನುಭವಿಸುವ ಒಂಟಿತನ ಮತ್ತು ನೋವು ತೀವ್ರವಾಗಿರುತ್ತದೆ. ಅಂತಹದ್ದೇ ಒಂದು ತೀವ್ರ ಭಾವನಾತ್ಮಕ ಘಟನೆಗೆ ಸಾಕ್ಷಿಯಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಕ್ಷಾಂತರ ಜನರ ಕಣ್ಣಂಚ್ಚಲ್ಲಿ ನೀರು ತರಿಸುತ್ತದೆ.

ವೈರಲ್​ ವಿಡಿಯೋದಲ್ಲೇನಿದೆ?

ಇಂಡೋನೇಷ್ಯಾದ ಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಈ ಹೃದಯಸ್ಪರ್ಶಿ ಘಟನೆ ಸಂಭವಿಸಿದೆ. ಕಠಿಣ ತರಬೇತಿ ಮುಗಿಸಿದ ನೂರಾರು ಯುವ ಸೈನಿಕರು ತಮ್ಮ ಪೋಷಕರು, ಸಂಗಾತಿಗಳು ಹಾಗೂ ಬಂಧು-ಮಿತ್ರರನ್ನು ಅಪ್ಪಿಕೊಂಡು ಸಂಭ್ರಮಿಸುತ್ತಿದ್ದರು.

ಆದರೆ, ಇಡೀ ಸಮೂಹದ ನಡುವೆ ಒಬ್ಬ ಯುವ ಯೋಧ ಮಾತ್ರ ಸಂಪೂರ್ಣ ಒಂಟಿಯಾಗಿ ನಿಂತಿರುವುದನ್ನು ಕಾಣಬಹುದು. ಆತನನ್ನು ಭೇಟಿಯಾಗಲು ಯಾರೊಬ್ಬರೂ ಬಂದಿರಲಿಲ್ಲ. ಎಲ್ಲರೂ ತಮ್ಮವರ ಜೊತೆ ಖುಷಿಪಡುತ್ತಿದ್ದಾಗ, ಈ ಯೋಧ ಮಾತ್ರ ಮೌನವಾಗಿ ದೂರದಲ್ಲಿ ನಿಂತು ನೋಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಸಾಂತ್ವನ ಹೇಳಿದ ಕಮಾಂಡರ್: ಕಣ್ಣೀರಿಟ್ಟ ಯೋಧ

ಯುವ ಸೈನಿಕ ಒಂಟಿಯಾಗಿ ನಿಂತಿರುವುದನ್ನು ದೂರದಿಂದಲೇ ಗಮನಿಸಿದ ಸೇನಾ ಕಮಾಂಡರ್​ ಆತನ ಬಳಿ ನೇರವಾಗಿ ಬಂದು ಆತನಿಗೆ ಧೈರ್ಯ ತುಂಬುತ್ತಾ ಅಪ್ಪಿಕೊಂಡಿದ್ದಾರೆ. ಆದಾಗ್ಯೂ, ಕಮಾಂಡರ್ ಸ್ಪರ್ಶಿಸುತ್ತಿದ್ದಂತೆಯೇ ತನ್ನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದ ಸೈನಿಕ ಕೊನೆಗೆ ತಡೆಯಲಾಗದೇ ಅವರ ತಬ್ಬಿಕೊಂಡು ಕಣ್ಣೀರು ಇಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಭಾವುಕ ಪ್ರಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಸೆಳೆಯಿತು. ಹಲವರು ತಮ್ಮ ಜೀವನದಲ್ಲಿ ಎದುರಿಸಿದ ಒಂಟಿತನದ ಕ್ಷಣವನ್ನು ನೆನಪಿಸಿಕೊಂಡರೆ, ಇನ್ನು ಕೆಲವರು ಇಂಡೋನೇಷ್ಯಾದ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇಂಡೋನೇಷ್ಯಾ ದ್ವೀಪಗಳ ದೇಶವಾಗಿರುವುದರಿಂದ ಆತನ ಕುಟುಂಬ ದೂರದ ಊರಿನಲ್ಲಿರಬಹುದು. ಪ್ರಯಾಣದ ವೆಚ್ಚ ಭರಿಸಲಾಗದೆ ಬರದಿರಬಹುದು. ಆದರೆ ಸೇನೆಯ ಸಹೋದ್ಯೋಗಿಗಳೇ ಆತನ ನಿಜವಾದ ಸಹೋದರರು ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net