ಇಂಡೋನೇಷ್ಯಾದಲ್ಲಿ ಅನಂತ್ ಅಂಬಾನಿಯ 'ವಂತಾರ' ಕ್ರಾಂತಿ: ಮೂಕ ಜೀವಿಗಳ ಕಣ್ಣೊರೆಸಲು ಹೊಸ ಆಸ್ಪತ್ರೆ, ಮೊಬೈಲ್​ ಕ್ಲಿನಿಕ್​ಗೆ ಒಪ್ಪಂದ | Vantara

ಇಂಡೋನೇಷ್ಯಾದಲ್ಲಿ ಅನಂತ್ ಅಂಬಾನಿಯ 'ವಂತಾರ' ಕ್ರಾಂತಿ
ಇಂಡೋನೇಷ್ಯಾದಲ್ಲಿ ಅನಂತ್ ಅಂಬಾನಿಯ 'ವಂತಾರ' ಕ್ರಾಂತಿ
Published on
ಗುಜರಾತ್​: ವನ್ಯಜೀವಿಗಳ ಆರೋಗ್ಯ ಮತ್ತು ಸಂರಕ್ಷಣೆಯನ್ನು ಬಲಪಡಿಸಲು ಇಂಡೋನೇಷ್ಯಾ ಸರ್ಕಾರದ ಜತೆ ರಿಲಯನ್ಸ್​ ಇಂಡಸ್ಟ್ರೀಸ್‌ನ ಅನಂತ್ ಅಂಬಾನಿ ಒಡೆತನದ ‘ವಂತಾರ’ (Vantara) ಸಂಸ್ಥೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ವನ್ಯಜೀವಿಗಳ ರಕ್ಷಣೆಯಲ್ಲಿ ವಂತಾರ ಹೊಸ ಕ್ರಾಂತಿಗೆ ಸಾಕ್ಷಿಯಾಗಿದೆ.
'ಫೌನಾ ಲ್ಯಾಂಡ್ ಗ್ರೂಪ್' ಜತೆಗೂಡಿ ಈ ಜಾಗತಿಕ ಯೋಜನೆಗೆ ಚಾಲನೆ ನೀಡಿರುವ ವಂತಾರ, ಹೊಸದಾದ ಆಸ್ಪತ್ರೆಗಳು ಮತ್ತು ಮೊಬೈಲ್​ ಕ್ಲಿನಿಕ್​ಗಳ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡಿದೆ. ಈ ಮಹತ್ವದ ಯೋಜನೆ ಕುರಿತಾಗಿ ಇಂಡೋನೇಷ್ಯಾದ ಅರಣ್ಯ ಸಚಿವ ರಾಜಾ ಜೂಲಿ ಆಂಟೋನಿ ಅವರು ಜಕಾರ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಒಪ್ಪಂದದಲ್ಲಿ ಏನಿದೆ?

  • ವಂತಾರ ವತಿಯಿಂದ ಇಂಡೋನೇಷ್ಯಾ ಅರಣ್ಯ ಇಲಾಖೆಗೆ ಸಂಚಾರಿ ಕ್ಲಿನಿಕ್​ಗಳು, ಕಾಡಿನಲ್ಲಿರುವ ವನ್ಯಜೀವಿಗಳಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲು 10 ಸುಸಜ್ಜಿತ ಮೊಬೈಲ್​ ಕ್ಲಿನಿಕ್​ಗಳು ಮತ್ತು ಸ್ಥಳೀಯ ಆಸ್ಪತ್ರೆಗಳನ್ನು ಪೂರೈಕೆ ಮಾಡಲಾಗುವುದು.
  • ಆನೆಗಳ ಆಸ್ಪತ್ರೆಗೆ ಒತ್ತು: ‘ವೇ ಕಾಂಬಾಸ್’ ಆನೆಗಳ ಆಸ್ಪತ್ರೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳೊಂದಿಗೆ ಹಸ್ತಿಗಳ ಆರೈಕೆ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಇದು ಸುಮಾರು 160ಕ್ಕೂ ಹೆಚ್ಚು ಸುಮಾತ್ರನ್ ಆನೆಗಳಿಗೆ (ಕಾಡು ಹಾಗೂ ಸಾಕಾನೆ) ನೆರವಾಗಲಿದೆ.
  • ಸಿಬ್ಬಂದಿಗೆ ತರಬೇತಿ: ಆನೆಗಳ ಆರೈಕೆಗೆ ಪಾಲಕರು, ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳಿಗೆ ವಂತಾರದ ಕಡೆಯಿಂದ ವಿಶೇಷ ವೈದ್ಯಕೀಯ ಮತ್ತು ಆಡಳಿತಾತ್ಮಕ ತರಬೇತಿಯನ್ನು ನೀಡಲಾಗುತ್ತದೆ.

ಅಧಿಕಾರಿಗಳು ಸಂತಸ

ಇಂಡೋನೇಷ್ಯಾ ಅರಣ್ಯ ಸಚಿವ ರಾಜಾ ಜೂಲಿ ಆಂಟೋನಿ ಮಾತನಾಡಿ, "ನಮ್ಮ ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ವಂತಾರ ಸಂಸ್ಥೆಯು ತಾಂತ್ರಿಕ ಬೆಂಬಲ ನೀಡಲಿದ್ದು, ಎಲ್ಲ ಆಸ್ಪತ್ರೆ ಮತ್ತು ಮೂಲಸೌಕರ್ಯಗಳ ಸಂಪೂರ್ಣ ಆಡಳಿತ ಹಾಗೂ ಒಡೆತನ ಇಂಡೋನೇಷ್ಯಾ ಸರ್ಕಾರದ ಬಳಿಯೇ ಇರಲಿದೆ" ಎಂದರು. ಇನ್ನು, ವನತಾರಾ ಸಿಇಒ ವಿವಾನ್ ಕರಾನಿ ಪ್ರತಿಕ್ರಿಯಿಸಿ, "ಪ್ರಕೃತಿ ಮತ್ತು ಜೈವಿಕ ವೈವಿಧ್ಯತೆಗೆ ಹೆಸರುವಾಸಿಯಾದ ಇಂಡೋನೇಷ್ಯಾದಲ್ಲಿ ವನ್ಯಜೀವಿ ರಕ್ಷಣೆಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಷಯ. ನಮ್ಮ ಗುಜರಾತ್‌ನ ಜಾಮ್‌ನಗರ ಕೇಂದ್ರದಲ್ಲಿ ಪಡೆದ ಅನುಭವ ಮತ್ತು ಕೌಶಲ್ಯವನ್ನು ಇಲ್ಲಿ ಬಳಸಲಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net