) ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಎಂದು ಬುಧವಾರ (ಆ.12) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ಸಂಖ್ಯೆ 6E-723 ಗಾಳಿಯಲ್ಲಿದ್ದಾಗಲೇ ಅದರ ಎಡಭಾಗದ ಎಂಜಿನ್ (Left Engine Failure) ದಿಢೀರನೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡ ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ, ತುರ್ತು ಪರಿಸ್ಥಿತಿ ಪ್ರಕಟಿಸಿದ್ದು, ವಿಮಾನ ಸುರಕ್ಷಿತವಾಗಿ ಇಳಿಯುವಿಕೆಗೆ ಬೇಕಾದ ಎಲ್ಲಾ ತುರ್ತು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧಗೊಳಿಸಿತು.
ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ!
ಈ ಘಟನೆಯಿಂದ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು 224 ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಪೈಲಟ್‌ಗಳ ಸಮಯಪ್ರಜ್ಞೆ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯ ತಕ್ಷಣದ ಕ್ರಮದಿಂದಾಗಿ ವಿಮಾನವು ರಾತ್ರಿ 11:37ಕ್ಕೆ (23:37 IST) ರನ್‌ವೇ 25ರಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಲ್ಯಾಂಡಿಂಗ್ ಪ್ರಕ್ರಿಯೆ ಯಶಸ್ವಿಯಾದ ನಂತರ, ಪರಿಸ್ಥಿತಿ
ಹದಕ್ಕೆ ಬಂದಿದ್ದರಿಂದ ರಾತ್ರಿ 11:47ಕ್ಕೆ (23:47 HRS) ತುರ್ತು ಪರಿಸ್ಥಿತಿಯನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಪ್ರಸ್ತುತ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳು ಸಹಜವಾಗಿ ನಡೆಯುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳಷ್ಟೇ ನಡೆದಿತ್ತು ಮತ್ತೊಂದು ಘಟನೆ!
ಕಳೆದ ತಿಂಗಳಷ್ಟೇ ದುಬೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ಅಂತರರಾಷ್ಟ್ರೀಯ ವಿಮಾನದಲ್ಲೂ ಇಂತಹುದೇ ತುರ್ತು ಪರಿಸ್ಥಿತಿ ಎದುರಾಗಿತ್ತು. ವಿಮಾನದ ಕೆಳಗಿನ ಸರಕು ಸಾಗಣೆ ಜಾಗದಲ್ಲಿ (Cargo Hold) ಹೊಗೆ ಕಾಣಿಸಿಕೊಂಡಿದ್ದರ ಕುರಿತು ಎಚ್ಚರಿಕೆಯ ಸಂದೇಶ (Alert) ಸಿಕ್ಕ ತಕ್ಷಣ, ಪೈಲಟ್‌ಗಳು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ರನ್‌ವೇ ಬಳಿ ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣವೇ ನಿಯೋಜಿಸಿ ಪ್ರಯಾಣಿಕರನ್ನು ರಕ್ಷಿಸಲಾಗಿತ್ತು (ಏಜೆನ್ಸೀಸ್).