ಇಂಡಿಗೋ ಬಿಕ್ಕಟ್ಟು: ಡಿಸೆಂಬರ್ 10-15ರೊಳಗೆ ಸಹಜ ಸ್ಥಿತಿಗೆ: ಸಿಇಒ ಪೀಟರ್​​ ಎಲ್ಬರ್ಸ್ ​| IndiGo

IndiGo
IndiGo
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಗೋ(IndiGo) ವಿಮಾನಗಳ ರದ್ದತಿ ಸದ್ಯ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ
  • ಡಿಸೆಂಬರ್ 10-15ರೊಳಗೆ ಸಹಜ ಸ್ಥಿತಿಗೆ
  • ಸ್ಪಷ್ಟನೆ ಕೊಟ್ಟ ಸಿಇಒ ಪೀಟರ್​​ ಎಲ್ಬರ್ಸ್
ನವದೆಹಲಿ: ಇಂಡಿಗೋ(IndiGo) ವಿಮಾನಗಳ ರದ್ದತಿ ಸದ್ಯ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟು ಇನ್ನು ಕೆಲ ದಿನಗಳ ಕಾಲ ಮುಂದುವರೆಯಲಿದ್ದು, ಡಿ.10 ಅಥವಾ ಡಿ.15ರ ನಡುವೆ ಸಹಜ ಸ್ಥಿತಿ ಮರಳುವ ನಿರೀಕ್ಷೆಯಿದೆ ಎಂದು ಇಂಡಿಗೋ ಸಂಸ್ಥೆ ಸಿಇಒ ಪೀಟರ್​​ ಎಲ್ಬರ್ಸ್​ ಹೇಳಿದ್ದಾರೆ.
''ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ನಾನು ನಮ್ಮ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ಡಿಸೆಂಬರ್ 10-15 ರ ನಡುವೆ ನಾವು ನಿರೀಕ್ಷಿಸುವ ಸಂಪೂರ್ಣ ಸಾಮಾನ್ಯ ಪರಿಸ್ಥಿತಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ," ಎಂದು ಎಲ್ಬರ್ಸ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ

ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿರುವುದು ಅಪಾರ ಸಂಖ್ಯೆಯ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ. ಈ ಕುರಿತು ಹಲವರು ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪರದಾಟದ ಸ್ಥಿತಿ-ಗತಿಗಳನ್ನು ಪರಿ ಪರಿಯಾಗಿ ವಿಡಿಯೋ ಮೂಲಕ ವಿವರಿಸಿದ್ದಾರೆ.
ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಲ್ಲಿ ಅಸಮಾಧಾನ ಎರಡನೇ ಬಾರಿಗೆ ಹೆಚ್ಚುತ್ತಿದೆ, ವಿಮಾನಯಾನ ಅಧಿಕಾರಿಗಳೊಂದಿಗೆ ವಾದಗಳು ಸಾಮಾನ್ಯ ದೃಶ್ಯವಾಗುತ್ತಿವೆ. ಇಂಡಿಗೋದ ರಾಷ್ಟ್ರವ್ಯಾಪಿ ವಿಮಾನ ವ್ಯತ್ಯಯದ ನಡುವೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದಿದೆ.

ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದೇನು..?

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿದ ಹೊಸ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಗಳಿಗೆ ಸಂಬಂಧಿಸಿದಂತೆ ಇಂಡಿಗೋ ತನ್ನ ಸಿಬ್ಬಂದಿಯ ತಪ್ಪು ನಿರ್ವಹಣೆಯಿಂದಾಗಿ ಇದು ದೇಶಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತೀವ್ರ ವಿಳಂಬ ಮತ್ತು ದಟ್ಟಣೆಗೆ ಕಾರಣಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಟೀಕಿಸಿದರು.
ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಡೆದಿರುವ ಘಟನೆಗಳನ್ನು ಪರಿಗಣಿಸಿ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋಗೆ FDTL ಮಾನದಂಡಗಳನ್ನು ಸ್ವಲ್ಪ ಮಟ್ಟಿಗೆ ರದ್ದುಗೊಳಿಸಲು ಸೂಚಿಸಿಸಲಾಗಿದೆ. ಹೀಗಾಗಿ, ಸಾಮಾನ್ಯ ಸ್ಥಿತಿಗೆ ಮರಳಲು ಸಹಾಯ ಮಾಡಲು ಕಾರಣವಾಯಿತು ಎಂದು ಹೇಳಿದರು.
ಅಂದಹಾಗೆ, ದೇಶದ ಅತಿದೊಡ್ಡ ವಿಮಾನ ಸಂಸ್ಥೆ ಎಂಬ ಹೆಸರಿಗೆ ಭಾಜನವಾಗಿರುವ ಇಂಡಿಗೋ ಏರ್​ಲೈನ್ಸ್​ನ ಬಿಕ್ಕಟ್ಟು ಈಗಲೂ ಹಾಗೆ ಮುಂದುವರಿದಿದ್ದು, ದೇಶವ್ಯಾಪಿ ಅನೇಕ ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಸುಮಾರು 12 ಗಂಟೆಗಳಿಂದ ಊಟ ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯುವುದಕ್ಕಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಬಿಕ್ಕಟ್ಟು ಸತತ ನಾಲ್ಕನೇ ದಿನವೂ ಮುಂದುವರೆದಿವೆ. ಸುಮಾರು 20 ವರ್ಷ ಇತಿಹಾಸ ಹೊಂದಿರುವ ದೇಶ ಅತಿದೊಡ್ಡ ವಿಮಾನಯಾನ ಸಂಸ್ಥೆ ಪ್ರಸ್ತುತ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ.
ಕ್ಯಾಬಿನ್ ಸಿಬ್ಬಂದಿ ಸಮಸ್ಯೆಗಳು ಮತ್ತು ತಂತ್ರಜ್ಞಾನ ಸಮಸ್ಯೆಗಳು ಸೇರಿ ಹಲವಾರು ಕಾರಣಗಳಿಂದಾಗಿ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ 104, ದೆಹಲಿ ವಿಮಾನ ನಿಲ್ದಾಣದಲ್ಲಿ 225, ಬೆಂಗಳೂರಿನಲ್ಲಿ 102 ಮತ್ತು ಹೈದರಾಬಾದ್‌ನಲ್ಲಿ 92 ವಿಮಾನಗಳನ್ನು ರದ್ದು ಮಾಡಲಾಗಿದೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net