ಮುಂದುವರೆದ ಇಂಡಿಗೋ ಬಿಕ್ಕಟ್ಟು; ದೇಶಾದ್ಯಂತ 5ನೇ ದಿನವೂ ನೂರಾರು ವಿಮಾನಗಳ ಹಾರಾಟ ರದ್ದು | IndiGo flights

ವಿಮಾನ ನಿಲ್ದಾಣದ ಚಿತ್ರ
ವಿಮಾನ ನಿಲ್ದಾಣದ ಚಿತ್ರ
Published on
ನವದೆಹಲಿ: ಕಳೆದ ನಾಲ್ಕುದಿನಗಳಿಂದ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನಗಳ(IndiGo flights) ಅವ್ಯವಸ್ಥೆ ಐದನೇ ದಿನವೂ ಮುಂದುವರೆದಿದೆ. ಇಂದು(ಡಿ. 06) ಕೂಡಾ ದೇಶಾದ್ಯಂತ ನೂರಾರು ವಿಮಾನಗಳ ಹಾರಾಟ ರದ್ದಾಗಿವೆ.
ಶನಿವಾರ ಇಂಡಿಗೋದ ಒಟ್ಟು 405 ದೇಶೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 400 ಕ್ಕೂ ಹೆಚ್ಚು ವಿಮಾನಗಳ ಫ್ಲೀಟ್‌ನೊಂದಿಗೆ ಪ್ರತಿದಿನ 2,300 ಟ್ರಿಪ್​ಗಳನ್ನು ನಿರ್ವಹಿಸುವ ಇಂಡಿಗೋ ಸಂಸ್ಥೆಯ ಅವ್ಯವಸ್ಥೆ ಇನ್ನೂ ಕೆಲವು ದಿನ ಮುಂದುವರೆಯುವ ಸಾಧ್ಯತೆ ಇದೆ.
ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಇಂಡಿಗೋದ 86 ದೇಶೀಯ ವಿಮಾನಗಳ ಹಾರಾಟ ರದ್ದುಗೊಂಡಿದೆ. ಗುಜರಾತ್‌ನ ಅಹಮದಾಬಾದ್ ಮತ್ತು ಗಾಂಧಿನಗರ ಎರಡಕ್ಕೂ ಸೇವೆ ಸಲ್ಲಿಸುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 19 ವಿಮಾನಗಳ ಹಾರಾಟ ರದ್ದಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 109 ವಿಮಾನಗಳ ಹಾರಾಟ ರದ್ದುಗೊಂಡಿದೆ.
ಪುಣೆ ವಿಮಾನ ನಿಲ್ದಾಣದಲ್ಲಿ 42 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುಮಾರು 30 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಏತನ್ಮಧ್ಯೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 50 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 69 ದೇಶೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದು, ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂಡಿಗೋ ಸಂಸ್ಥೆಯ‘ ಪ್ರಸ್ತುತ ಬಿಕ್ಕಟ್ಟು ಪ್ರಾಥಮಿಕವಾಗಿ ಪೈಲಟ್‌ಗಳ ಕೊರತೆಯಿಂದ ಉಂಟಾಗಿದೆ ಎನ್ನಲಾಗಿದೆ. ಯೋಜನಾ ಕೊರತೆಯಿಂದಾಗಿ ಇದನ್ನು ನಿರೀಕ್ಷಿಸಲಾಗಿರಲಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇನ್ನೂ ಸಂಸ್ಥೆಯ ಅವ್ಯವಸ್ಥೆ ಬಗ್ಗೆ ಕೇಂದ್ರ ಸೆರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ.

ಪ್ರಯಾಣಿಕರ ಕ್ಷಮೆ ಕೇಳಿರುವ ಇಂಡಿಗೋ ಸಂಸ್ಥೆ

ಈ ಕುರಿತು ಶುಕ್ರವಾರ(ಡಿ. 05) ರಾತ್ರಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ ಸಂಸ್ಥೆ, ನಮ್ಮ ಪ್ರತಿಯೊಬ್ಬ ಗ್ರಾಹಕರಿಗೂ ನಾವು ನಿಜವಾಗಿಯೂ ವಿಷಾದಿಸುತ್ತೇವೆ. ಕಾಳಜಿ ವಹಿಸುತ್ತೇವೆ. ತೀವ್ರವಾಗಿ ಕ್ಷಮೆಯಾಚಿಸುತ್ತೇವೆ. ಕಳೆದ ಕೆಲವು ದಿನಗಳು ನಿಮ್ಮಲ್ಲಿ ಅನೇಕರಿಗೆ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಇದು ರಾತ್ರೋರಾತ್ರಿ ಬಗೆಹರಿಯುವುದಿಲ್ಲ. ಈ ಮಧ್ಯೆ ನಿಮಗೆ ಸಹಾಯ ಮಾಡಲು ಮತ್ತು ನಮ್ಮ ಕಾರ್ಯಾಚರಣೆಗಳನ್ನು ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಲು ನಾವು ನಮ್ಮ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡುತ್ತೇವೆ. ಈ ಬಗ್ಗೆ ನಿಮಗೆ ಭರವಸೆ ನೀಡುತ್ತೇವೆ ಎಂದು ಹೇಳಿದೆ.
ಈ ಅವಧಿಯಲ್ಲಿ ರದ್ದತಿ ಅಥವಾ ಮರುಹೊಂದಿಸುವಿಕೆಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು, ವಿಮಾನ ನಿಲ್ದಾಣಗಳಲ್ಲಿ ಆಹಾರ ಮತ್ತು ತಿಂಡಿಗಳ ಜೊತೆಗೆ ಸಾವಿರಾರು ಹೋಟೆಲ್ ಕೊಠಡಿಗಳು ಮತ್ತು ಮೇಲ್ಮೈ ಸಾರಿಗೆ ಆಯ್ಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲದೇ, ಸಾಧ್ಯವಾದಲ್ಲೆಲ್ಲಾ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಪ್ರವೇಶವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net