ಸದ್ದಿಲ್ಲದೆ ಸಮುದ್ರದೊಳಗೆ ನುಗ್ಗಲಿದೆ ಭಾರತದ ಮೂರನೇ ಅಣು-ಸಬ್‌ಮರಿನ್! ಹಿಂದೂ ಮಹಾಸಾಗರದಲ್ಲಿ ಚೀನಾ-ಪಾಕ್ ಆಟಕ್ಕೆ ಬೀಳುತ್ತಾ ಬ್ರೇಕ್..? INS Aridaman

ಸದ್ದಿಲ್ಲದೆ ಸಮುದ್ರದೊಳಗೆ ನುಗ್ಗಲಿದೆ ಭಾರತದ ಮೂರನೇ ಅಣು-ಸಬ್‌ಮರಿನ್! ಹಿಂದೂ ಮಹಾಸಾಗರದಲ್ಲಿ ಚೀನಾ-ಪಾಕ್ ಆಟಕ್ಕೆ ಬೀಳುತ್ತಾ ಬ್ರೇಕ್..?
ಸದ್ದಿಲ್ಲದೆ ಸಮುದ್ರದೊಳಗೆ ನುಗ್ಗಲಿದೆ ಭಾರತದ ಮೂರನೇ ಅಣು-ಸಬ್‌ಮರಿನ್! ಹಿಂದೂ ಮಹಾಸಾಗರದಲ್ಲಿ ಚೀನಾ-ಪಾಕ್ ಆಟಕ್ಕೆ ಬೀಳುತ್ತಾ ಬ್ರೇಕ್..?
Published on
ವಿಶಾಖಪಟ್ಟಣಂ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಇಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಭಾರತದ ಮೂರನೇ ಅಣುಶಕ್ತಿ ಚಾಲಿತ ಜಲಾಂತರಗಾಮಿ ಐಎನ್ಎಸ್ ಅರಿದಮನ್ (INS Aridaman) ಮತ್ತು ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ತಾರಾಗಿರಿ ಅನ್ನು ಭಾರತೀಯ ನೌಕಾಪಡೆಗೆ ಲೋಕಾರ್ಪಣೆಗೊಳಿಸಿದರು. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಿದ್ದು, ಶತ್ರು ರಾಷ್ಟ್ರಗಳಿಗೆ ನಡುಕ ಶುರುವಾಗಿದೆ.

ಅರಿದಮನ್': ಕೇವಲ ಹೆಸರಲ್ಲ, ಇದು ಶಕ್ತಿಯ ಸಂಕೇತ!

ಐಎನ್ಎಸ್ ಅರಿದಮನ್, ಅರಿಹಂತ್ ದರ್ಜೆಯ ಜಲಾಂತರಗಾಮಿಗಳ ಮುಂದುವರಿದ ಆವೃತ್ತಿಯಾಗಿದೆ. 2016ರಲ್ಲಿ ಐಎನ್ಎಸ್ ಅರಿಹಂತ್ ಮತ್ತು 2024ರಲ್ಲಿ ಐಎನ್ಎಸ್ ಅರಿಘಾತ್ ಸೇರ್ಪಡೆಯಾದ ನಂತರ, ಈಗ ಅರಿದಮನ್ ಭಾರತದ 'ನ್ಯೂಕ್ಲಿಯರ್ ಟ್ರಯಾಡ್' (ನೆಲ, ಜಲ ಮತ್ತು ಆಕಾಶದಿಂದ ಅಣುಬಾಂಬ್ ದಾಳಿ ಮಾಡುವ ಸಾಮರ್ಥ್ಯ) ಅನ್ನು ಮತ್ತಷ್ಟು ಬಲಪಡಿಸಿದೆ.
ಸೋಷಿಯಲ್ ಮೀಡಿಯಾ 'ಈ ಬಗ್ಗೆ Xನಲ್ಲಿ ಬರೆದುಕೊಂಡ ರಾಜನಾಥ್ ಸಿಂಗ್, ಅರಿದಮನ್ ಎಂಬುದು ಕೇವಲ ಒಂದು ಪದವಲ್ಲ, ಅದೊಂದು ಶಕ್ತಿಯ ಸಂಕೇತ ಎಂದು ಬಣ್ಣಿಸಿದ್ದಾರೆ. ಇದು ಸಮುದ್ರದ ಆಳದಲ್ಲಿ ಅಡಗಿದ್ದುಕೊಂಡು ಶತ್ರುಗಳ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.

ಐಎನ್ಎಸ್ ತಾರಾಗಿರಿ: ಮೇಕ್ ಇನ್ ಇಂಡಿಯಾ ಹೆಮ್ಮೆ

ವಿಶಾಖಪಟ್ಟಣಂನಲ್ಲಿ ನಡೆದ ಸಮಾರಂಭದಲ್ಲಿ ಸೇರ್ಪಡೆಗೊಂಡ 'ಐಎನ್ಎಸ್ ತಾರಾಗಿರಿ' ಯುದ್ಧನೌಕೆಯು ಭಾರತದ ಸ್ವದೇಶಿ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ.
ಸ್ಟೆಲ್ತ್ ತಂತ್ರಜ್ಞಾನ: ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿರುವ ಈ ನೌಕೆಯು ರೇಡಾರ್‌ಗಳ ಕಣ್ಣಿಗೆ ಮಣ್ಣೆರಚುವ 'ಸ್ಟೆಲ್ತ್' ವಿನ್ಯಾಸವನ್ನು ಹೊಂದಿದೆ. ಶತ್ರುಗಳ ರೇಡಾರ್‌ಗೆ ಇದು ಸುಲಭವಾಗಿ ಪತ್ತೆಯಾಗುವುದಿಲ್ಲ.
ಸ್ವದೇಶಿ ಬಲ: ಈ ನೌಕೆಯಲ್ಲಿ ಶೇ. 75 ಕ್ಕಿಂತ ಹೆಚ್ಚು ಸ್ವದೇಶಿ ಉಪಕರಣಗಳನ್ನು ಬಳಸಲಾಗಿದೆ. ಇದು 200ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉದ್ಯೋಗ ನೀಡುವ ಮೂಲಕ ಆತ್ಮನಿರ್ಭರ ಭಾರತಕ್ಕೆ ಸಾಕ್ಷಿಯಾಗಿದೆ.
ವೇಗ ಮತ್ತು ಸಾಮರ್ಥ್ಯ: 6,670 ಟನ್ ತೂಕದ ಈ ನೌಕೆಯು ಅತ್ಯಾಧುನಿಕ CODOG ಪ್ರೊಪಲ್ಷನ್ ಸಿಸ್ಟಮ್ ಹೊಂದಿದ್ದು, ಅತಿ ವೇಗವಾಗಿ ದೂರದವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ.
ಶಸ್ತ್ರಾಸ್ತ್ರ ಸಜ್ಜಿತ: ಇದರಲ್ಲಿ ಶಬ್ದಕ್ಕಿಂತ ವೇಗವಾಗಿ ಚಲಿಸುವ ಕ್ಷಿಪಣಿಗಳು, ಮಧ್ಯಮ ಶ್ರೇಣಿಯ ಕ್ಷಿಪಣಿಗಳು ಮತ್ತು ಸಬ್‌ಮರಿನ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ.

ಭಾರತದ ಪೂರ್ವ ಸಮುದ್ರ ತೀರಕ್ಕೆ ಹೆಚ್ಚಿನ ಭದ್ರತೆ

ಇಂಡೋ-ಪೆಸಿಫಿಕ್ ವಲಯದಲ್ಲಿ ಹೆಚ್ಚುತ್ತಿರುವ ಜಾಗತಿಕ ಪೈಪೋಟಿ ಮತ್ತು ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ತಾರಾಗಿರಿ ಮತ್ತು ಅರಿದಮನ್ ಸೇರ್ಪಡೆ ಅತ್ಯಂತ ಆಯಕಟ್ಟಿನದ್ದಾಗಿದೆ. ಕೇವಲ ಯುದ್ಧದ ಸಮಯದಲ್ಲಿ ಮಾತ್ರವಲ್ಲದೆ, ಮಾನವೀಯ ನೆರವು ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಲ್ಲೂ ಈ ನೌಕೆಗಳು ಪ್ರಮುಖ ಪಾತ್ರ ವಹಿಸಲಿವೆ.
ಭಾರತೀಯ ನೌಕಾಪಡೆಯು ಈಗ ಕೇವಲ ರಕ್ಷಣಾತ್ಮಕ ಪಡೆಯಾಗಿ ಉಳಿದಿಲ್ಲ, ಬದಲಿಗೆ ಸಮುದ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಸಾಮರ್ಥ್ಯವಿರುವ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. 'ವಿಕಸಿತ ಭಾರತ'ದ ಸಂಕಲ್ಪದಂತೆ ಭಾರತೀಯರೇ ವಿನ್ಯಾಸಗೊಳಿಸಿದ, ಭಾರತೀಯರೇ ನಿರ್ಮಿಸಿದ ಈ ನೌಕೆಗಳು ದೇಶದ ನೀಲಿ ಗಡಿಗಳನ್ನು ಕಾಯುವ ಉಕ್ಕಿನ ಕೋಟೆಗಳಾಗಿ ನಿಂತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net