ಬಾನಂಗಳದಲ್ಲಿ ಭಾರತದ ರುದ್ರತಾಂಡವ!; ಅತ್ಯಾಧುನಿಕ ರುದ್ರಂ-2 ಕ್ಷಿಪಣಿ ಹಾರಾಟ ಪರೀಕ್ಷೆ ಯಶಸ್ವಿ! RudraM-II Missile

ಬಾನಂಗಳದಲ್ಲಿ ಭಾರತದ ರುದ್ರತಾಂಡವ!; ಅತ್ಯಾಧುನಿಕ ರುದ್ರಂ-2 ಕ್ಷಿಪಣಿ ಹಾರಾಟ ಪರೀಕ್ಷೆ ಭಾರಿ ಯಶಸ್ವಿ!
ಬಾನಂಗಳದಲ್ಲಿ ಭಾರತದ ರುದ್ರತಾಂಡವ!; ಅತ್ಯಾಧುನಿಕ ರುದ್ರಂ-2 ಕ್ಷಿಪಣಿ ಹಾರಾಟ ಪರೀಕ್ಷೆ ಭಾರಿ ಯಶಸ್ವಿ!
Published on
ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಭಾರತೀಯ ವಾಯುಸೇನೆ (IAF) ಜಂಟಿಯಾಗಿ ಮಂಗಳವಾರ ಆಕಾಶದಿಂದ ಭೂಮಿಗೆ ಚಿಮ್ಮುವ ಅತ್ಯಾಧುನಿಕ ‘ರುದ್ರಂ-2’ (RudraM-II Missile) ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿವೆ. ಯುದ್ಧವಿಮಾನದ ಮೂಲಕ ಅತ್ಯಂತ ಕಠಿಣ ಹಾಗೂ ಸವಾಲಿನ ಸಂದರ್ಭಗಳಲ್ಲಿ ಉಡಾಯಿಸಲಾದ ಈ ಕ್ಷಿಪಣಿಯು, ತನ್ನ ನಿಖರ ಪಥದಲ್ಲಿ ಸಾಗಿ ಪೂರ್ವನಿರ್ಧರಿತ ಗುರಿಯನ್ನು ಅತ್ಯಂತ ನಿಖರವಾಗಿ ಧ್ವಂಸಗೊಳಿಸಿದೆ.
ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ಒದಗಿಸಿದ ದತ್ತಾಂಶಗಳ ಪ್ರಕಾರ, ಈ ಪರೀಕ್ಷೆಯ ಎಲ್ಲಾ ಉದ್ದೇಶಗಳು ಶೇ. ೧೦೦ ರಷ್ಟು ಈಡೇರಿವೆ ಎಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಭಾರತೀಯ ತಂತ್ರಜ್ಞಾನದ ಹೆಮ್ಮೆಯ ಪ್ರತೀಕ; ರಕ್ಷಣಾ ಸಚಿವರ ಶ್ಲಾಘನೆ

ಹೈದರಾಬಾದ್‌ನ ರಿಸರ್ಚ್ ಸೆಂಟರ್ ಇಮಾರತ್ (RCI) ಮುಂಚೂಣಿ ಪ್ರಯೋಗಾಲಯವಾಗಿ ಇತರ DRDO ಸಂಸ್ಥೆಗಳು ಹಾಗೂ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಹಯೋಗದೊಂದಿಗೆ ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಪಡಿಸಿದೆ. ಈ ಐತಿಹಾಸಿಕ ಯಶಸ್ಸಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ಮತ್ತು ವಾಯುಸೇನೆಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಈ ಯಶಸ್ಸು ಭಾರತದ ಮುಂಗಾಮಿ ರಕ್ಷಣಾ ತಂತ್ರಜ್ಞಾನದ ಪ್ರೌಢಿಮೆಯನ್ನು ಜಗತ್ತಿಗೆ ಸಾಬೀತುಪಡಿಸಿದ್ದು, ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ ಭಾರತದ ಕನಸಿಗೆ ಸಿಕ್ಕ ಪ್ರಚಂಡ ಬೂಸ್ಟರ್ ಡೋಸ್ ಆಗಿದೆ ಎಂದು ಕೊಂಡಾಡಿದ್ದಾರೆ. ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್ ಕೂಡ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
‘ರುದ್ರಂ-2’ ರಕ್ಷಣಾ ವಲಯದ ಗೇಮ್‌ಚೇಂಜರ್ ಆಗಿದ್ದು ಹೇಗೆ?
ಭಾರತೀಯ ವಾಯುಸೇನೆಯ ಯುದ್ಧ ಸಾಮರ್ಥ್ಯವನ್ನು ಇದು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದ್ದು, ಇದನ್ನು ರಕ್ಷಣಾ ತಜ್ಞರು ‘ಗೇಮ್‌ಚೇಂಜರ್’ ಎಂದು ಕರೆಯಲು ಪ್ರಮುಖ ಕಾರಣಗಳು ಇಲ್ಲಿವೆ.
ಭೀಕರ ಹೈಪರ್ಸಾನಿಕ್ ವೇಗ: ಈ ಕ್ಷಿಪಣಿಯು ಶಬ್ದದ ವೇಗಕ್ಕಿಂತ 5.5 ಪಟ್ಟು ಹೆಚ್ಚು ಅಂದರೆ ‘ಮ್ಯಾಕ್ 5.5’ ವೇಗದಲ್ಲಿ ಚಲಿಸಬಲ್ಲದು. ಅಂದರೆ ಶತ್ರು ದೇಶಗಳ ವಾಯು ರಕ್ಷಣಾ ವ್ಯವಸ್ಥೆಗೆ ಇದು ತನಕ ತಲುಪುವ ಮುನ್ನವೇ ದಾಳಿ ಮುಗಿದಿರುತ್ತದೆ.
300 ಕಿಲೋಮೀಟರ್ ಸ್ಟ್ರೈಕ್ ರೇಂಜ್: ಸುಮಾರು 300 ಕಿ.ಮೀ ದೂರದಲ್ಲಿರುವ ಶತ್ರುಗಳ ನೆಲೆಗಳನ್ನು ಇದು ಸುಖೋಯ್ ಸು-30 ಎಂಕೆಯ್ (Su-30MKI) ನಂತಹ ಸುಧಾರಿತ ಯುದ್ಧವಿಮಾನಗಳ ಮೂಲಕ 3 ರಿಂದ 15 ಕಿ.ಮೀ ಎತ್ತರದಿಂದಲೇ ಉಡಾಯಿಸಿ ಧ್ವಂಸಗೊಳಿಸಬಹುದು.
ಶತ್ರು ರೇಡಾರ್‌ಗಳ ಯಮಸ್ವರೂಪ: ಇದು ಶತ್ರುಗಳ ರೇಡಾರ್ ಹೊರಸೂಸುವ ರೇಡಿಯೋ ತರಂಗಾಂತರಗಳನ್ನು ಪತ್ತೆಹಚ್ಚಿ ದಾಳಿ ಮಾಡುವ ‘ಆಂಟಿ-ರೇಡಿಯೇಶನ್’ ಸಾಮರ್ಥ್ಯ ಹೊಂದಿದೆ. ಇದರ ಸುಧಾರಿತ ಹೈಬ್ರಿಡ್ ಗೈಡೆನ್ಸ್ ಆರ್ಕಿಟೆಕ್ಚರ್ (INS, GPS ಮತ್ತು ಪ್ಯಾಸಿವ್ ಹೋಮಿಂಗ್ ಸೀಕರ್) ಶತ್ರುಗಳ ಕಣ್ಣಿಗೆ ಮಣ್ಣೆರಚುತ್ತದೆ.
ರಷ್ಯಾ ಕ್ಷಿಪಣಿಗಳಿಗೆ ಕೌಂಟರ್: ಭಾರತೀಯ ವಾಯುಸೇನೆಯಲ್ಲಿ ಸದ್ಯ ಬಳಕೆಯಲ್ಲಿರುವ ಹಳೆಯ ರಷ್ಯಾ ಮೂಲದ Kh-31 ಆಂಟಿ-ರೇಡಿಯೇಶನ್ ಕ್ಷಿಪಣಿಗಳನ್ನು ಇದು ಹಂತ-ಹಂತವಾಗಿ ಬದಲಾಯಿಸಲಿದೆ.
ಪಾಕಿಸ್ತಾನ ಹಾಗೂ ಚೀನಾದ ಗಡಿಗಳಲ್ಲಿ ರೇಡಾರ್ ಕಣ್ಗಾವಲು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಭಾರತವೇ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿರುವ ಈ ರುದ್ರಂ-2 ಕ್ಷಿಪಣಿ, ಶತ್ರುಗಳ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯನ್ನು ಕ್ಷಣಮಾತ್ರದಲ್ಲಿ ನಿಷ್ಕ್ರಿಯಗೊಳಿಸಿ ಭಾರತದ ಸಾರ್ವಭೌಮತ್ವವನ್ನು ಬಾನಂಗಳದಲ್ಲಿ ಎತ್ತಿ ಹಿಡಿಯಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net