ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತದ ಕ್ರಾಂತಿ

ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತದ ಕ್ರಾಂತಿ
ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತದ ಕ್ರಾಂತಿ
Published on
ಇತ್ತೀಚಿನ ವರ್ಷಗಳಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ (2025-26) ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆಯಾದ ₹38,424 ಕೋಟಿಗೆ ತಲುಪಿದೆ. ಇದು ಅದಕ್ಕೂ ಹಿಂದಿನ ವರ್ಷಕ್ಕೆ (₹23,622 ಕೋಟಿ) ಹೋಲಿಸಿದರೆ ಶೇಕಡ 62.66ರಷ್ಟು ಬೃಹತ್ ಬೆಳವಣಿಗೆಯನ್ನು ಕಂಡಿದೆ. ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಭಾರತದ ರಕ್ಷಣಾ ರಫ್ತು 30 ಪಟ್ಟು ವೃದ್ಧಿಸಿದೆ. ಭಾರತವು ವಿಶ್ವದ 80ಕ್ಕೂ ಹೆಚ್ಚು ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಈ ರಫ್ತು ಸಾಧನೆಯಲ್ಲಿ ಇಸ್ರೋ ಮತ್ತು ಡಿಆರ್​ಡಿಒ ಜೊತೆಗೆ ಖಾಸಗಿ ರಕ್ಷಣಾ ಕಂಪನಿಗಳು ಕೂಡ ಮಹತ್ವದ ಕೊಡುಗೆ ನೀಡುತ್ತಿವೆ. ಭಾರತ ನಿರ್ಮಿತ ಬುಲೆಟ್ ಪ್ರೂಫ್ ಜಾಕೆಟ್​ಗಳು, ರೇಡಾರ್​ಗಳು, ಮದ್ದುಗುಂಡುಗಳು, ಕರಾವಳಿ ಕಾವಲು ನೌಕೆಗಳು ಮತ್ತು ಸೇನಾ ವಾಹನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಭಾರತವು ಸಣ್ಣ ಬಿಡಿಭಾಗಗಳನ್ನು ಮಾತ್ರವಲ್ಲದೆ, ಅತ್ಯಾಧುನಿಕ ಸಂಪೂರ್ಣ ಯುದ್ಧ ವ್ಯವಸ್ಥೆಗಳನ್ನೂ ರಫ್ತು ಮಾಡುತ್ತಿದೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಖಾಸಗಿ ರಂಗ ಎರಡೂ ಸರಿಸಮಾನವಾಗಿ ಶ್ರಮಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ರಫ್ತಿನಲ್ಲಿ 54.84% (₹21,071 ಕೋಟಿ) ಪಾಲು ಹೊಂದಿದ್ದರೆ, ಖಾಸಗಿ ವಲಯದ (ಟಾಟಾ, ಎಲ್ ಆಂಡ್ ಟಿ, ಮಹೀಂದ್ರಾ ಮುಂತಾದ ಖಾಸಗಿ ಕಂಪನಿಗಳು) ಪಾಲು 45.16% (₹17,353 ಕೋಟಿ) ಇದೆ. ಭಾರತದಲ್ಲಿ ನೋಂದಾಯಿತ ರಕ್ಷಣಾ ರಫ್ತುದಾರರ ಸಂಖ್ಯೆ 128ರಿಂದ 145ಕ್ಕೆ ಏರಿಕೆಯಾಗಿದೆ.

ರಕ್ಷಣಾ ಕ್ಷೇತ್ರದ ಪ್ರಮುಖ ಸಾಧನೆಗಳು

ಭಾರತ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಿದ ಮೊದಲ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಾಂತ್. ಇದು ಭಾರತದ ನೌಕಾ ಶಕ್ತಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದೆ. ಐಎನ್​ಎಸ್ ಅರಿಹಂತ್ ಸರಣಿಯ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಮೂಲಕ ಭಾರತ ನ್ಯೂಕ್ಲಿಯರ್ ಟ್ರಯಾಡ್ (ನೆಲ, ಜಲ, ಆಕಾಶ ಮೂರರಿಂದಲೂ ಅಣುಬಾಂಬ್ ದಾಳಿ ಮಾಡುವ ಸಾಮರ್ಥ್ಯ) ಹೊಂದಿದ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಸೇರಿದೆ. ಕಾರ್ಗಿಲ್, ಸಿಯಾಚಿನ್​ನಂತಹ ಎತ್ತರದ ಪರ್ವತ ಪ್ರದೇಶಗಳಲ್ಲಿ ದಾಳಿ ನಡೆಸಬಲ್ಲ ಹಗುರವಾದ ಯುದ್ಧ ಹೆಲಿಕಾಪ್ಟರ್ ಎಲ್​ಸಿಎಚ್ ಪ್ರಚಂಡ್ ಅನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ಯಶಸ್ಸಿಗೆ ಕಾರಣಗಳೇನು?

ಸ್ವಾವಲಂಬನೆಗೆ ಆದ್ಯತೆ: ಕೇಂದ್ರ ಸರ್ಕಾರವು ನೂರಾರು ರಕ್ಷಣಾ ಸಾಮಗ್ರಿಗಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ, ಅವುಗಳನ್ನು ಭಾರತದಲ್ಲೇ ತಯಾರಿಸಲು ಆದ್ಯತೆ ನೀಡಿದೆ.
ಸರಳಗೊಳಿಸಿದ ರಫ್ತು ಪ್ರಕ್ರಿಯೆ: ರಕ್ಷಣಾ ರಫ್ತು ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್​ಲೈನ್ ಅನುಮತಿ ಮತ್ತು ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಸಂಶೋಧನೆಗೆ ಉತ್ತೇಜನ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ದೇಶೀಯ ಖಾಸಗಿ ರಂಗದೊಂದಿಗೆ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಆರಂಭಿಸಿದ್ದು ಪ್ರಗತಿಗೆ ವೇಗ ನೀಡಿದೆ.
ತಾನೇ ತಯಾರಿಸಿಕೊಳ್ಳುತ್ತದೆಯೋ, ಆ ದೇಶವು ತನ್ನ भाग್ಯ ಮತ್ತು ಇತಿಹಾಸವನ್ನು ತಾನೇ ಬರೆಯುತ್ತದೆ. ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಮುಂದಿನ 25-30 ವರ್ಷಗಳಲ್ಲಿ ಜಗತ್ತಿನ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗುವುದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ದೇಶೀಯ ರಕ್ಷಣಾ ವಲಯಕ್ಕೆ ಉತ್ತೇಜನ ನೀಡಲು 5,000ಕ್ಕೂ ಹೆಚ್ಚು ವಸ್ತುಗಳ ‘ಸಕಾರಾತ್ಮಕ ಸ್ವದೇಶೀಕರಣ ಪಟ್ಟಿ’ಯನ್ನು (Positive Indigenisation List) ಸಿದ್ಧಪಡಿಸಲಾಗಿದ್ದು, ಇವುಗಳನ್ನು ಭಾರತೀಯ ಸಶಸ್ತ್ರ ಪಡೆಗಳು ದೇಶದ ಒಳಗೇ ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ದೂರದೃಷ್ಟಿ ಮತ್ತು ಖಾಸಗಿ ವಲಯದ ನಾವೀನ್ಯತೆ ಜೊತೆಗೂಡಿದಾಗ ದೇಶವು ಹೊಸ ಎತ್ತರಕ್ಕೆ ತಲುಪುತ್ತದೆ. ಖಾಸಗಿ ಕಂಪನಿಗಳು ಈಗ ಕೇವಲ ಸಣ್ಣ ಬಿಡಿಭಾಗಗಳನ್ನು ತಯಾರಿಸುತ್ತಿಲ್ಲ, ಬದಲಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನೇ ಸಿದ್ಧಪಡಿಸುತ್ತಿವೆ.

— ರಾಜನಾಥ್ ಸಿಂಗ್, ರಕ್ಷಣಾ ಸಚಿವ

ಭವಿಷ್ಯದ ಯುದ್ಧಗಳಲ್ಲಿ ಆಟೊಮೇಷನ್ ನಿರ್ಣಾಯಕ

ಭವಿಷ್ಯದ ಯುದ್ಧಗಳ ಫಲಿತಾಂಶವು ಕೇವಲ ಸೈನ್ಯದ ಗಾತ್ರದ ಮೇಲೆ ನಿರ್ಧಾರವಾಗುವುದಿಲ್ಲ; ಬದಲಿಗೆ ಆ ದೇಶದ ಯುದ್ಧ ಸಾಮಗ್ರಿ, ತಂತ್ರಜ್ಞಾನ ಮತ್ತು ಆಟೊಮೇಷನ್ (স্বಯಂಚಾಲಿತ ವ್ಯವಸ್ಥೆ) ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ರಷ್ಯಾ-ಯೂಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯೇ ಇದಕ್ಕೆ ಸಾಕ್ಷಿಯಾಗಿದೆ. ಭಾರತ ಕೂಡ ಆಪರೇಷನ್ ಸಿಂಧೂರ ಸಮಯದಲ್ಲಿ ಇಂತಹದೇ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಎಲ್ಲ ಸ್ಥಳಗಳಲ್ಲೂ ಸೈನಿಕರನ್ನು ನಿಯೋಜಿಸಲು ಸಾಧ್ಯವಾಗದಿರಬಹುದು, ಹಾಗಾಗಿ ಆಧುನಿಕ ಶಸ್ತ್ರಾಸ್ತ್ರಗಳು ಭವಿಷ್ಯದ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಮುಂದಿನ ಗುರಿ

ಕೇಂದ್ರ ಸರ್ಕಾರವು 2029ರ ವೇಳೆಗೆ ದೇಶದ ಒಟ್ಟು ರಕ್ಷಣಾ ರಫ್ತನ್ನು ₹50,000 ಕೋಟಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ.

ಭಾರತದಿಂದ ರಕ್ಷಣಾ ಸಾಮಗ್ರಿ ಖರೀದಿಸುವ ಪ್ರಮುಖ ದೇಶಗಳು:

ಅಮೆರಿಕ, ಫ್ರಾನ್ಸ್, ಆರ್ಮೇನಿಯಾ, ಫಿಲಿಪೈನ್ಸ್, ಜರ್ಮನಿ, ಇಸ್ರೇಲ್, ಬ್ರಿಟನ್, ಇಂಡೋನೇಷ್ಯಾ, ಈಜಿಪ್ಟ್, ಶ್ರೀಲಂಕಾ ಮತ್ತು ಹಲವು ಆಫ್ರಿಕನ್ ರಾಷ್ಟ್ರಗಳು.

ಶಿರಡಿಯಲ್ಲಿ ಉತ್ಪಾದನಾ ಘಟಕ

ಮಹಾರಾಷ್ಟ್ರದ ಶಿರಡಿಯಲ್ಲಿ ಎನ್​ಐಬಿಒ ಗ್ರೂಪ್​ನ ನೂತನ ರಕ್ಷಣಾ ಉತ್ಪಾದನಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಉದ್ಘಾಟಿಸಿದ್ದಾರೆ. ರಕ್ಷಣಾ ಉತ್ಪಾದನಾ ವಲಯದಲ್ಲಿ ಖಾಸಗಿ ಕಂಪನಿಗಳ ಪಾಲುದಾರಿಕೆಯನ್ನು ಶೇಕಡ 50ರಷ್ಟು ಹೆಚ್ಚಿಸಲು ಸರ್ಕಾರ ಬಯಸಿದೆ ಎಂದು ಅವರು ಇದೇ ವೇಳೆ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಭಾರತದ ಮೊದಲ 300 ಕಿಲೋಮೀಟರ್ ವ್ಯಾಪ್ತಿಯ ಯೂನಿವರ್ಸಲ್ ರಾಕೆಟ್ ಲಾಂಚಿಂಗ್ ಸಿಸ್ಟಮ್ ‘ಸೂರ್ಯಾಸ್ತ್ರ’ಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಶಿರಡಿಯ ಈ ಘಟಕವನ್ನು 200 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ 2,000 ಜನರಿಗೆ ನೇರ ಉದ್ಯೋಗ ಸಿಗಲಿದ್ದು, ಎಂಎಸ್​ಎಂಇ ವಲಯಕ್ಕೂ ಭಾರಿ ಉತ್ತೇಜನ ಸಿಗಲಿದೆ. ಇಲ್ಲಿ ತಯಾರಾಗುವ ರಕ್ಷಣಾ ಉಪಕರಣಗಳನ್ನು ಇತರ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಅಹಲ್ಯಾನಗರ ಜಿಲ್ಲೆಯಲ್ಲಿರುವ ಈ ಘಟಕವು ಪ್ರಮುಖವಾಗಿ ಆರ್ಟಿಲರಿ ಬಾಂಬ್ ಶೆಲ್​ಗಳನ್ನು (ಫಿರಂಗಿ ಗ್ರೆನೇಡ್`ಗಳು) ತಯಾರಿಸಲಿದೆ ಮತ್ತು ಏರೊಸ್ಪೇಸ್ ವಲಯಕ್ಕೂ ಬೆಂಬಲ ನೀಡಲಿದೆ. ಈ ಸಂಕೀರ್ಣದಲ್ಲಿ ಸುಧಾರಿತ ಆರ್ಟಿಲರಿ ಸಿಸ್ಟಮ್ಸ್, ಕ್ಷಿಪಣಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ರಾಕೆಟ್ ಸಿಸ್ಟಮ್ಸ್ ಮತ್ತು ಸ್ವಾಯತ್ತ ರಕ್ಷಣಾ ಪ್ಲಾಟ್​​ಫಾರ್ಮ್​​ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ಸಂಕೀರ್ಣದಲ್ಲಿ ವಾರ್ಷಿಕವಾಗಿ 5 ಲಕ್ಷ ಆರ್ಟಿಲರಿ ಶೆಲ್​ಗಳನ್ನು ಉತ್ಪಾದಿಸುವ ಸಾಮರ್ಥ್ಯದ ಘಟಕ ಆರಂಭಿಸಲಾಗಿದೆ ಮತ್ತು 15 ಟನ್ ಸಾಮರ್ಥ್ಯದ ಬಯೋಗ್ಯಾಸ್ ಪ್ಲಾಂಟ್ ಸ್ಥಾಪಿಸಲಾಗಿದೆ. ಈ ಕ್ಲಸ್ಟರ್​ನಲ್ಲಿ ಪ್ಲಾಂಟ್ ಆರಂಭಿಸಲು ಟೊರೆಲ್ ಇಂಡಿಯಾ ಮತ್ತು ಬ್ರೆಜಿಲ್​ನ ಅಕಾಯೆರ್​ನಂತಹ ಜಾಗತಿಕ ಕಂಪನಿಗಳು ಸಮೀಕ್ಷೆ ಆರಂಭಿಸಿವೆ. ಮಹಾರಾಷ್ಟ್ರ ಸರ್ಕಾರವು ಸಮೃದ್ಧಿ ಮಹಾಮಾರ್ಗ ಹೆದ್ದಾರಿಯ ಆಸುಪಾಸಿನ ಚಾಕನ್, ಮಿಹಾನ್, ನಾಸಿಕ್ ಎಚ್​ಎಎಲ್, ಶಿರಡಿ, ಸುಪೆ, ಶ್ರೀಗೊಂಡ ಮತ್ತು ಛತ್ರಪತಿ ಸಂಭಾಜಿನಗರವನ್ನು ಜೋಡಿಸಿ ಬೃಹತ್ ಡಿಫೆನ್ಸ್ ಇಕೋಸಿಸ್ಟಮ್ ನಿರ್ಮಿಸುವ ಕಾರ್ಯವನ್ನು ವೇಗಗೊಳಿಸಿದೆ. ಸ್ಥಳೀಯವಾಗಿ ಇದನ್ನು ‘ಭಕ್ತಿ ಮತ್ತು ಶಕ್ತಿ’ಯ ಸಂಗಮ ಎಂದು ಕರೆಯಲಾಗುತ್ತಿದೆ.

ಜಾಗತಿಕವಾಗಿ ಬೇಡಿಕೆಯಲ್ಲಿರುವ ಪ್ರಮುಖ ಭಾರತೀಯ ಶಸ್ತ್ರಾಸ್ತ್ರಗಳು 

ರಕ್ಷಣಾ ಉತ್ಪನ್ನ   - ವಿಶೇಷತೆ ಮತ್ತು ರಫ್ತು ವಿವರ  
ಬ್ರಹ್ಮೋಸ್ ಕ್ಷಿಪಣಿ:  ವಿಶ್ವದ ಅತ್ಯಂತ ವೇಗದ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿ. ಫಿಲಿಪೈನ್ಸ್ ದೇಶದೊಂದಿಗೆ ಭಾರತ ದೊಡ್ಡ ಮೊತ್ತದ ರಫ್ತು ಒಪ್ಪಂದ ಮಾಡಿಕೊಂಡಿದೆ.
ಆಕಾಶ್ ಕ್ಷಿಪಣಿ ವ್ಯವಸ್ಥೆ: ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಅಲ್ಪದೂರದ ಕ್ಷಿಪಣಿ ವ್ಯವಸ್ಥೆ. ಆರ್ಮೇನಿಯಾ ಸೇರಿದಂತೆ ಹಲವು ದೇಶಗಳು ಇದನ್ನು ಖರೀದಿಸುತ್ತಿವೆ.
ತೇಜಸ್ ಯುದ್ಧ ವಿಮಾನ: ಲಘು ಯುದ್ಧ ವಿಮಾನವಾಗಿದ್ದು, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ದೇಶಗಳು ಇದರ ಖರೀದಿಗೆ ಆಸಕ್ತಿ ತೋರಿಸಿವೆ.
ಪಿನಾಕಾ ರಾಕೆಟ್ ವ್ಯವಸ್ಥೆ: ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆ. ಯುದ್ಧ ಭೂಮಿಯಲ್ಲಿ ಅತ್ಯಂತ ಪರಿಣಾಮಕಾರಿ.
ಎಚ್​ಎಎಲ್ ಧ್ರುವ್​: ಸುಧಾರಿತ ಲಘು ಹೆಲಿಕಾಪ್ಟರ್. ಮಾರಿಷಸ್, ಮಾಲ್ಡೀವ್ಸ್ ಮುಂತಾದ ದೇಶಗಳಿಗೆ ಭಾರತ ಇದನ್ನು ಪೂರೈಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net