ಇತಿಹಾಸಕ್ಕೆ ಹೊಸ ತಿರುವು: ತಮಿಳುನಾಡಿನಲ್ಲಿ ಪತ್ತೆಯಾಯ್ತು ಭಾರತದ ಅತ್ಯಂತ ಉದ್ದದ 5,000 ವರ್ಷ ಹಳೆಯ ಈಟಿ! | Iron Age

Iron Age
Iron Age
Published on
ಚೆನ್ನೈ: ಭಾರತದ ಇತಿಹಾಸವು ನಾವು ಅಂದುಕೊಂಡಿದ್ದಕ್ಕಿಂತಲೂ ಪುರಾತನ ಮತ್ತು ತಾಂತ್ರಿಕವಾಗಿ ಮುಂದುವರಿದಿತ್ತು ಎಂಬುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ.
ಹೌದು ತಮಿಳುನಾಡಿನ ತೆಂಕಾಶಿ ಸಮೀಪದ ತಿರುಮಲಾಪುರಂ ಎಂಬಲ್ಲಿ ನಡೆದ ಉತ್ಖನನದಲ್ಲಿ ಬರೋಬ್ಬರಿ 8 ಅಡಿ ಉದ್ದದ ಬೃಹತ್ ಕಬ್ಬಿಣದ ಈಟಿ ಪತ್ತೆಯಾಗಿದ್ದರ ಬಗ್ಗೆ ಮಂಗಳವಾರ(ಜ.27) ವರದಿಯಾಗಿದ್ದು, ಇದು ಭಾರತೀಯ ಕಬ್ಬಿಣಯುಗದ (Iron Age) ಅತ್ಯಂತ ಉದ್ದದ ಆಯುಧ ಎಂದು ಪುರಾತತ್ವ ತಜ್ಞರು ಗುರುತಿಸಿದ್ದಾರೆ.

ಉತ್ಖನನದ ರೋಚಕ ಅಂಶಗಳು

ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯಲ್ಲಿ ಹಲವು ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬಂದಿವೆ. ಪತ್ತೆಯಾದ ಈಟಿಯು ಸುಮಾರು 8 ಅಡಿ ಉದ್ದವಿದ್ದು, ಮತ್ತೊಂದು 6.5 ಅಡಿ ಉದ್ದದ ಈಟಿಯೂ ಅದರ ಜೊತೆಗೆ ಲಭ್ಯವಾಗಿದೆ. ಈ ಎರಡೂ ಈಟಿಗಳನ್ನು ಸಮಾಧಿಯ ಪಕ್ಕದಲ್ಲಿ 'X' ಆಕಾರದಲ್ಲಿ ಇರಿಸಲಾಗಿತ್ತು.
ಈಟಿಗಳ ಜೊತೆಗೆ ಸಮಾಧಿಯ ಮಡಕೆಗಳಲ್ಲಿ ಚಿನ್ನದ ಆಭರಣಗಳು ಮತ್ತು ಅಮೂಲ್ಯ ಪುರಾತನ ವಸ್ತುಗಳು ಪತ್ತೆಯಾಗಿವೆ. ಇದು ಆ ಸಮಾಧಿಯಲ್ಲಿದ್ದ ವ್ಯಕ್ತಿ ಅತ್ಯಂತ ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿದ್ದ ಅಥವಾ ಆ ಕಾಲದ ಪ್ರಭಾವಿ ಯೋಧನಾಗಿದ್ದ ಎಂಬುದನ್ನು ಸೂಚಿಸುತ್ತದೆ.
ಈ ಈಟಿಯ ಒಂದು ತುದಿಯನ್ನು ದುಂಡಗೆ ಮಾಡಲಾಗಿದ್ದು, ಇದನ್ನು ಹಿಡಿಯಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಅಂದಿನ ಕಾಲದ ಜನರ ಮೆಟಲರ್ಜಿ (ಲೋಹಶಾಸ್ತ್ರ) ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಜಗತ್ತಿಗೇ ಸವಾಲೆಸೆಯುವ ಭಾರತೀಯ ಇತಿಹಾಸ!

ಸಾಮಾನ್ಯವಾಗಿ ಕಬ್ಬಿಣದ ಬಳಕೆ ಮತ್ತು ಉತ್ಪಾದನೆ ಟರ್ಕಿ ದೇಶದಲ್ಲಿ ಆರಂಭವಾಯಿತು ಎಂದು ನಂಬಲಾಗಿತ್ತು. ಆದರೆ ತಮಿಳುನಾಡಿನ ಶಿವಗಲೈ ಸೇರಿದಂತೆ ವಿವಿಧೆಡೆ ಪತ್ತೆಯಾದ ಪುರಾವೆಗಳು ಈ ವಾದವನ್ನು ಸುಳ್ಳಾಗಿಸಿವೆ. ಈ ಈಟಿಗಳು ಮತ್ತು ಉಪಕರಣಗಳು ಕ್ರಿ.ಪೂ. 3,345 ರಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಅಂದರೆ ಸುಮಾರು 5000 ವರ್ಷಗಳ ಹಿಂದೆಯೇ ಭಾರತೀಯರಿಗೆ ಕಬ್ಬಿಣದ ಅದಿರನ್ನು ಕರಗಿಸಿ ಆಯುಧ ಮಾಡುವ ಕಲೆ ಕರಗತವಾಗಿತ್ತು!. ಈ ಲೋಹದ ತಂತ್ರಜ್ಞಾನದ ವಿಕಾಸವನ್ನು ತಿಳಿಯಲು ತಮಿಳುನಾಡು ಪುರಾತತ್ವ ಇಲಾಖೆಯು ಐಐಟಿ ಗಾಂಧಿನಗರದ ಲೋಹಶಾಸ್ತ್ರ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಎರಡು ವರ್ಷಗಳ ಕಾಲ ರಾಜ್ಯಾದ್ಯಂತ ಅಧ್ಯಯನ ನಡೆಸಲಿದೆ ಎಂದು ವರದಿ ಉಲ್ಲೇಖಿಸಿದೆ.

ತಜ್ಞರ ಅಭಿಪ್ರಾಯ

ಉತ್ಖನನದ ನೇತೃತ್ವ ವಹಿಸಿದ್ದ ಕೆ. ವಸಂತಕುಮಾರ್ ಮತ್ತು ಸಂಶೋಧನಾ ಸಲಹೆಗಾರ ಕೆ. ರಾಜನ್ ಅವರ ಪ್ರಕಾರ, ಈ ಆಯುಧಗಳನ್ನು ಅಂದಿನ ಕಾಲದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಅಥವಾ ಸಂಪತ್ತಿನ ರಕ್ಷಣೆಗಾಗಿ ಯೋಧರು ಬಳಸುತ್ತಿದ್ದರು. ಇದು ಭಾರತದ ದಕ್ಷಿಣ ಭಾಗದಲ್ಲಿ ಕಬ್ಬಿಣಯುಗದ ನಾಗರಿಕತೆ ಎಷ್ಟು ಪ್ರಬಲವಾಗಿತ್ತು ಎಂಬುದನ್ನು ತೋರಿಸುತ್ತದೆ. ಈ ಅನ್ವೇಷಣೆಯು ದಕ್ಷಿಣ ಭಾರತದ "ಕಬ್ಬಿಣದ ಸಂಸ್ಕೃತಿ"ಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net