ಯುರೋಪ್‌ನ ಮುಖವಾಡ ಕಳಚಿದ ಭಾರತದ ವಿದೇಶಾಂಗ ಸಚಿವ! ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ಮೇಲಿನ ದಾಳಿಗೆ ಬಳಕೆಯಾಗಿವೆ ಎಂದಿದ್ದರ ಹಿಂದಿನ ಅಸಲಿ ರಹಸ್ಯವೇನು? Jaishankar

ಯುರೋಪ್‌ನ ಮುಖವಾಡ ಕಳಚಿದ ಭಾರತದ ವಿದೇಶಾಂಗ ಸಚಿವ! ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ಮೇಲಿನ ದಾಳಿಗೆ ಬಳಕೆಯಾಗಿವೆ ಎಂದಿದ್ದರ ಹಿಂದಿನ ಅಸಲಿ ರಹಸ್ಯವೇನು?
ಯುರೋಪ್‌ನ ಮುಖವಾಡ ಕಳಚಿದ ಭಾರತದ ವಿದೇಶಾಂಗ ಸಚಿವ! ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ಮೇಲಿನ ದಾಳಿಗೆ ಬಳಕೆಯಾಗಿವೆ ಎಂದಿದ್ದರ ಹಿಂದಿನ ಅಸಲಿ ರಹಸ್ಯವೇನು?
Published on
ಹೆಲ್ಸಿಂಕಿ: ನಮಗೆ ಜಾಗತಿಕ ರಾಜಕಾರಣದ ಆಟ ಕಲಿಸಲು ಬರಬೇಡಿ. ನಾವೆಲ್ಲರೂ ಪ್ರಬುದ್ಧರಾಗಿದ್ದೇವೆ ಮತ್ತು ಇಲ್ಲಿ ಆಟ ಹೇಗೆ ನಡೆಯುತ್ತದೆ ಎಂಬುದು ನಮಗೂ ಚೆನ್ನಾಗಿ ಗೊತ್ತು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್(Jaishankar) ಅವರು ರಷ್ಯಾ ತೈಲ ಖರೀದಿ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ದ್ವಂದ್ವ ನೀತಿಯನ್ನು ಜಾಗತಿಕ ವೇದಿಕೆಯಲ್ಲೇ ಬೆತ್ತಲೆ ಮಾಡಿದ್ದಾರೆ.
ಫಿನ್‌ಲ್ಯಾಂಡ್‌ನಲ್ಲಿ ನಡೆದ ಎಮರ್ಜಿಂಗ್ ಪವರ್ಸ್ ಅಂಡ್ ದಿ ನ್ಯೂ ಜಿಯೋಪೊಲಿಟಿಕಲ್ ಕಾಂಪಿಟೇಷನ್ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜೈಶಂಕರ್, ರಷ್ಯಾ-ಯುಕ್ರೇನ್ ಯುದ್ಧದ ವಿಷಯದಲ್ಲಿ ಭಾರತವು ರಷ್ಯಾ ಕಡೆಗೆ ಹೆಚ್ಚು ಮೃದು ಧೋರಣೆ ತಳೆದಿದೆ ಮತ್ತು ರಷ್ಯಾದಿಂದ ಸರಣಿಯಾಗಿ ತೈಲ ಖರೀದಿಸುತ್ತಿದೆ ಎಂದು ಆರೋಪಿಸಿದ ಪಾಶ್ಚಿಮಾತ್ಯ ಪತ್ರಕರ್ತನಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

"ನಮ್ಮ ಸಾಂಪ್ರದಾಯಿಕ ತೈಲವನ್ನು ಯುರೋಪಿಯನ್ನರು ಕದ್ದರು!"

ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಜೈಶಂಕರ್, ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಾನು ತೈಲವನ್ನು ಅದರ ಬೆಲೆ ಮತ್ತು ಲಭ್ಯತೆಯ ಆಧಾರದ ಮೇಲೆ ಖರೀದಿಸುತ್ತೇನೆ. ಯುಕ್ರೇನ್ ಯುದ್ಧ ಆರಂಭವಾದಾಗ ಯುರೋಪಿಯನ್ ದೇಶಗಳು ನಮಗೆ ಸಾಂಪ್ರದಾಯಿಕವಾಗಿ ತೈಲ ಪೂರೈಸುತ್ತಿದ್ದ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದ ಭಾರಿ ಪ್ರಮಾಣದಲ್ಲಿ ತೈಲ ಖರೀದಿಸಲು ಮುಗಿಬಿದ್ದವು. ಆಗ ಮಾರುಕಟ್ಟೆಯಲ್ಲಿ ನಮಗೆ ಲಭ್ಯವಿದ್ದ ಏಕೈಕ ಆಯ್ಕೆ ರಷ್ಯಾ ಮಾತ್ರ. ಅಂದಿನ ಜಾಗತಿಕ ಪರಿಸ್ಥಿತಿಗಳು ನಮ್ಮನ್ನು ಆ ದಿಕ್ಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದವು ಎಂದು ಸ್ಪಷ್ಟಪಡಿಸಿದ್ದಾರೆ.
ಯುರೋಪ್ ಶಸ್ತ್ರಾಸ್ತ್ರಗಳು ಭಾರತದ ಮೇಲೆ ದಾಳಿಗೆ ಬಳಕೆಯಾಗಿವೆ!
ಯುರೋಪ್ ರಾಷ್ಟ್ರಗಳ ನೈತಿಕತೆಯನ್ನು ಪ್ರಶ್ನಿಸಿದ ಜೈಶಂಕರ್, ಭಾರತದ ಶಾಂತಿಯುತ ಇತಿಹಾಸವನ್ನು ನೆನಪಿಸಿದ್ದಾರೆ. ಯಾವತ್ತಾದರೂ ಭಾರತದ ಶಸ್ತ್ರಾಸ್ತ್ರಗಳಿಂದ ಯುರೋಪ್‌ನ ಯಾವುದೇ ದೇಶದ ಮೇಲೆ ದಾಳಿಯಾಗಿದೆಯೇ? ಖಂಡಿತ ಇಲ್ಲ. ಆದರೆ ಇದೇ ಮಾತನ್ನು ಯುರೋಪ್ ರಾಷ್ಟ್ರಗಳ ಬಗ್ಗೆ ಹೇಳಲು ನನಗೆ ಸಾಧ್ಯವಿಲ್ಲ. ಯುರೋಪ್ ದೇಶಗಳು ಮಾರಾಟ ಮಾಡಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತದ ಮೇಲೆ ದಾಳಿ ಮಾಡಲು ಬಳಕೆಯಾಗಿವೆ. ಇದು ಇವತ್ತಿನ ಕಥೆಯಲ್ಲ, ಹಲವು ವರ್ಷಗಳಿಂದಲೂ ನಡೆಯುತ್ತಿದೆ. ನಾವು ಎಂದಿಗೂ ಯುರೋಪ್ ಭದ್ರತೆಗೆ ಧಕ್ಕೆ ತಂದಿಲ್ಲ. ಹೀಗಿರುವಾಗ ನಮಗೆ ನೈತಿಕತೆಯ ಪಾಠ ಮಾಡುವ ಹಕ್ಕು ನಿಮಗ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಮೆರಿಕದ ದ್ವಂದ್ವ ನೀತಿಯನ್ನು ಬಯಲು ಮಾಡಿದ ಜೈಶಂಕರ್!

2022ರ ರಷ್ಯಾ ಮೇಲಿನ ನಿರ್ಬಂಧಗಳ ದಿನಗಳನ್ನು ನೆನಪಿಸಿಕೊಂಡ ವಿದೇಶಾಂಗ ಸಚಿವರು, ರಷ್ಯಾ ತೈಲ ಖರೀದಿಸುವಂತೆ ಸ್ವತಃ ಅಮೆರಿಕವೇ ಭಾರತಕ್ಕೆ ಕೇಳಿಕೊಂಡಿದ್ದ ರಹಸ್ಯವನ್ನು ಬಯಲು ಮಾಡಿದರು. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಯಂತ್ರಿಸಲು ಮತ್ತು ಹಣದುಬ್ಬರ ತಡೆಯಲು ರಷ್ಯಾ ಕಚ್ಚಾ ತೈಲವನ್ನು ಖರೀದಿಸುವಂತೆ ಅಮೆರಿಕವೇ ಅಂದು ನಮಗೆ ವಿನಂತಿಸಿತ್ತು. ಆದರೆ ಕಳೆದ ವರ್ಷ ರಷ್ಯಾ ತೈಲ ಕೊಂಡಿದ್ದಕ್ಕೆ ನಮ್ಮ ಮೇಲೆ ಸುಂಕ ವಿಧಿಸಿದ ಅಮೆರಿಕ, ಆನಂತರ ತಾನೇ ರಷ್ಯಾ ತೈಲದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿತು. ಇಲ್ಲಿ ಯಾವುದೇ ದೊಡ್ಡ ತತ್ವ ಅಥವಾ ಆದರ್ಶಗಳಿಲ್ಲ, ಬದಲಿಗೆ ಅವರವರ ಸ್ವಾರ್ಥ ಅಡಗಿದೆ ಎಂದು ಲೇವಡಿ ಮಾಡಿದ್ದಾರೆ.
ತಮಗೆ ಸೂಕ್ತವೆನಿಸಿದಾಗ ಒಂದು ನಿಯಮ, ಬೇಡವೆಂದಾಗ ಮತ್ತೊಂದು ನಿಯಮ ಮಾಡುವುದನ್ನು ನಿಲ್ಲಿಸಿ. ಇಂತಹ ಸಂಕೀರ್ಣ ಜಾಗತಿಕ ಮಾರುಕಟ್ಟೆಯ ವ್ಯವಹಾರಗಳನ್ನು ಕೇವಲ ಒಂದು ಸಂಕುಚಿತ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ, ಎಂದು ಹೇಳುವ ಮೂಲಕ ಪಾಶ್ಚಿಮಾತ್ಯ ದೇಶಗಳ ಬೂಟಾಟಿಕೆಗೆ ಜೈಶಂಕರ್ ಜಾಗತಿಕ ಮಟ್ಟದಲ್ಲಿ ತಕ್ಕ ಉತ್ತರವನ್ನೇ ನೀಡಿದ್ದಾರೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net