ಭಾರತಕ್ಕೆ ಬೊಜ್ಜಿನ ಭಾರ!

ಸ್ಥೂಲಕಾಯ (ಬೊಜ್ಜು) ಈಗ ಕೇವಲ ವೈಯಕ್ತಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಿಗೆ ದೇಶಗಳ ಆರ್ಥಿಕತೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ‘ದಿ ಎಕನಾಮಿಸ್ಟ್’ನ ಇತ್ತೀಚಿನ ವರದಿಯ ಪ್ರಕಾರ, ಬೊಜ್ಜಿನಿಂದಾಗಿ ಶ್ರೀಮಂತ ದೇಶಗಳ ಜಿಡಿಪಿಗೆ ಶೇಕಡ 3ರಷ್ಟು ನಷ್ಟವಾಗಬಹುದು. ಭಾರತದಲ್ಲೂ ಬದಲಾಗುತ್ತಿರುವ ಜೀವನಶೈಲಿ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದಾಗಿ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ.
ಭಾರತಕ್ಕೆ ಬೊಜ್ಜಿನ ಭಾರ!
WEB
Published on: 

ಸ್ಥೂಲಕಾಯ (ಬೊಜ್ಜು) ಈಗ ಕೇವಲ ವೈಯಕ್ತಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಿಗೆ ದೇಶಗಳ ಆರ್ಥಿಕತೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ‘ದಿ ಎಕನಾಮಿಸ್ಟ್’ನ ಇತ್ತೀಚಿನ ವರದಿಯ ಪ್ರಕಾರ, ಬೊಜ್ಜಿನಿಂದಾಗಿ ಶ್ರೀಮಂತ ದೇಶಗಳ ಜಿಡಿಪಿಗೆ ಶೇಕಡ 3ರಷ್ಟು ನಷ್ಟವಾಗಬಹುದು. ಭಾರತದಲ್ಲೂ ಬದಲಾಗುತ್ತಿರುವ ಜೀವನಶೈಲಿ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದಾಗಿ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ. ವರ್ಲ್ಡ್ ಒಬೆಸಿಟಿ ಫೆಡರೇಶನ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೊಜ್ಜಿನಿಂದ ಉಂಟಾಗಬಹುದಾದ ಸಂಭಾವ್ಯ ಆರ್ಥಿಕ ಹೊರೆಯ ಮೌಲ್ಯಮಾಪನ ಮಾಡಿದೆ. ಇದರ ಅನ್ವಯ, 2030ರ ವೇಳೆಗೆ ಭಾರತದ ಮೇಲಿನ ಈ ಆರ್ಥಿಕ ಹೊರೆ 81.5 ಶತಕೋಟಿ ಡಾಲರ್ (ಸುಮಾರು 7 ಲಕ್ಷ ಕೋಟಿ ರೂ.) ತಲುಪಬಹುದು. ಇಂತಹ ಪರಿಸ್ಥಿತಿಯಲ್ಲಿ, ಬೊಜ್ಜನ್ನು ರಾಷ್ಟ್ರೀಯ ಆರೋಗ್ಯ ಸಮಸ್ಯೆಯೆಂದು ಪರಿಗಣಿಸುವ ಸಮಯ ಬಂದಿದೆಯೇ? ಮತ್ತು ಇದನ್ನು ನಿಭಾಯಿಸಲು ಸರ್ಕಾರಗಳು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಈ ಕುರಿತಾದ ಮಾಹಿತಿ ಇಲ್ಲಿದೆ.

2030ರ ವೇಳೆಗೆ ₹7 ಲಕ್ಷ ಕೋಟಿ ಮುಟ್ಟಬಹುದು ಆರ್ಥಿಕ ಹೊರೆ

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಆದರೆ, ಅನಾರೋಗ್ಯಕರ ಜೀವನಶೈಲಿಯಿಂದ ಬೊಜ್ಜಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ಹೊಸವೈರಿಯೊಡನೆ ಪ್ರಬಲವಾಗಿ ಹೊರಾಡಲೇಬೇಕಿದೆ. ಭಾರತದಲ್ಲಿ 1990ರಲ್ಲಿ ಬೊಜ್ಜು ಹೊಂದಿದವರ ಸಂಖ್ಯೆ ಕೇವಲ 3 ಕೋಟಿಯಾಗಿತ್ತು. 2026ರಲ್ಲಿ ಇದು 36 ಕೋಟಿಗೆ ತಲುಪಿದೆ. ಇನ್ನೂ ಆತಂಕದ ವಿಷಯ ಎಂದರೆ 2050ರ ಹೊತ್ತಿಗೆ ಈ ಸಂಖ್ಯೆ 45 ಕೋಟಿಯ ಗಡಿ ದಾಟಲಿದೆ. ಬೊಜ್ಜು ಹೆಚ್ಚಾದಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಜಾಸ್ತಿಯಾಗುತ್ತವೆ. ದೈಹಿಕ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ. ಇತ್ತೀಚೆಗೆ ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ಪ್ರಕರಣಗಳು ತೀವ್ರ ಆತಂಕ ಮೂಡಿಸಿವೆ. ಬೊಜ್ಜು ಆರೋಗ್ಯ ಸಮಸ್ಯೆ ಮಾತ್ರವಲ್ಲ ಆರ್ಥಿಕ ಸಮಸ್ಯೆಯನ್ನೂ ತಂದೊಡ್ಡಿದೆ.

ಬೊಜ್ಜಿನಿಂದಾಗುವ ಆರ್ಥಿಕ ನಷ್ಟದ ಲೆಕ್ಕಾಚಾರ

ಅರ್ಥಶಾಸ್ತ್ರಜ್ಞರು ಎರಡು ರೀತಿಯ ವೆಚ್ಚಗಳನ್ನು ಒಟ್ಟುಗೂಡಿಸುತ್ತಾರೆ. ನೇರ ವೆಚ್ಚದಲ್ಲಿ ತಪಾಸಣೆ, ಔಷಧಗಳು, ಆಸ್ಪತ್ರೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವೆಚ್ಚಗಳು ಬರುತ್ತವೆ. ಪರೋಕ್ಷ ವೆಚ್ಚದಲ್ಲಿ ಅನಾರೋಗ್ಯದ ಕಾರಣ ರಜೆ ಪಡೆಯುವುದು, ಕೆಲಸದ ಸಮಯದಲ್ಲಿ ಉತ್ಪಾದಕತೆ ಕಡಿಮೆಯಾಗುವುದು ಮತ್ತು ಅಕಾಲಿಕ ಮರಣದ ಆರ್ಥಿಕ ಪರಿಣಾಮಗಳು ಸೇರಿರುತ್ತವೆ. ಭಾರತದ ವಿಷಯಕ್ಕೆ ಬಂದರೆ, ಇಲ್ಲಿನ ಬಹುಪಾಲು ಜನಸಂಖ್ಯೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ವಿುಕರು ಅಥವಾ ಕೆಲಸಗಾರರು ಅನಾರೋಗ್ಯಕ್ಕೆ ಒಳಗಾಗುವುದೆಂದರೆ ನೇರವಾಗಿ ದಿನದ ಸಂಪಾದನೆಯ ನಷ್ಟ ಮತ್ತು ಚಿಕಿತ್ಸೆಯ ಭಾರೀ ವೆಚ್ಚವೇ ಆಗಿದೆ, ಇದು ಇಡೀ ಕುಟುಂಬವನ್ನು ಬಡತನದ ವಿಷವರ್ತಲಕ್ಕೆ ತಳ್ಳುತ್ತದೆ. ಕುಟುಂಬದ ಸದಸ್ಯರೊಬ್ಬರ ಆರೈಕೆಗೆ ತಗಲುವ ಸಮಯವೂ ಆ ಕುಟುಂಬದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಒಟ್ಟಾರೆ ಪರಿಣಾಮ ಅಂತಿಮವಾಗಿ ದೇಶದ ಆರ್ಥಿಕತೆಯ ಮೇಲೆ ಬೀಳುತ್ತದೆ. ಬೊಜ್ಜಿನಿಂದಾಗುವ ಆರ್ಥಿಕ ನಷ್ಟದಲ್ಲಿ ನೇರ ವೆಚ್ಚಕ್ಕಿಂತ ಪರೋಕ್ಷ ವೆಚ್ಚವೇ ಹೆಚ್ಚು ಪ್ರಭಾವ ಬೀರುತ್ತದೆ. ಉದಾಹರಣೆಗೆ, ವರ್ಲ್ಡ್ ಒಬೆಸಿಟಿ ಫೆಡರೇಶನ್​ನ ಅಂದಾಜಿನ ಪ್ರಕಾರ, 2019ರಲ್ಲಿ ಭಾರತದಲ್ಲಿ ಅಧಿಕ ತೂಕ ಮತ್ತು ಬೊಜ್ಜಿಗೆ ಸಂಬಂಧಿಸಿದ ಆರ್ಥಿಕ ವೆಚ್ಚ ಸುಮಾರು 28.95 ಶತಕೋಟಿ ಡಾಲರ್ ಆಗಿತ್ತು, ಇದರಲ್ಲಿ ಶೇಕಡ 91.9ರಷ್ಟು ಪರೋಕ್ಷ ವೆಚ್ಚವಾಗಿತ್ತು.

ಬೊಜ್ಜಿನ ಸಮಸ್ಯೆಯಿಂದ ಅಧಿಕ ಆರ್ಥಿಕ ಹೊರೆ ಅನುಭವಿಸುತ್ತಿರುವ ಟಾಪ್ 5 ರಾಷ್ಟ್ರಗಳು- ಚೀನಾ, ಅಮೆರಿಕ, ಭಾರತ, ದಕ್ಷಿಣ ಕೊರಿಯಾ ಮತ್ತು ಇಂಡೋನೇಷ್ಯಾ.

ಕಳಪೆ ನಗರ ಯೋಜನೆಯಿಂದ ಸಮಸ್ಯೆ

ದೇಶದಲ್ಲಿ ನಗರೀಕರಣ ಹೆಚ್ಚುತ್ತಿದೆ. ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ, ಆದರೆ ಇದರೊಂದಿಗೆ ನಡೆಯಬೇಕಾಗಿದ್ದ ನಗರ ಯೋಜನೆ (ಸಿಟಿ ಪ್ಲಾನಿಂಗ್) ಸರಿಯಾಗಿ ರೂಪಿಸಲಾಗಿಲ್ಲ. ಇದರಿಂದಾಗಿ ನಾಗರಿಕರ ದೈಹಿಕ ಆರೋಗ್ಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು ದೊರೆಯದಂತಾಗಿದೆ. ಮಕ್ಕಳಿಗೆ ಆಟವಾಡಲು ಮೈದಾನಗಳು/ತೆರೆದ ಸ್ಥಳಗಳು ಬಹುತೇಕ ಇಲ್ಲದಂತಾಗಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಡೈಸ್ ವರದಿಯ ಪ್ರಕಾರ, ಭಾರತದ 40% ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಉದ್ಯಾನಗಳ ಜಾಗವನ್ನು ವಾಣಿಜ್ಯ ಸಂಕೀರ್ಣಗಳು ಆಕ್ರಮಿಸಿಕೊಂಡಿವೆ. ಆಟವಾಡಲು ಜಾಗವಿಲ್ಲದ ಕಾರಣ ಬಾಲ್ಯದಲ್ಲೇ ಬೊಜ್ಜಿನ (ಸ್ಥೂಲಕಾಯ) ಅಪಾಯ ವೇಗವಾಗಿ ಹೆಚ್ಚುತ್ತಿದೆ. ನಗರಗಳಲ್ಲಿ ಸುರಕ್ಷಿತ ಪಾದಚಾರಿ ಮಾರ್ಗಗಳು, ಸಮರ್ಪಕ ಬೆಳಕಿನ ವ್ಯವಸ್ಥೆ ಹಾಗೂ ಅಪರಾಧಮುಕ್ತ ಸಾರ್ವಜನಿಕ ಸ್ಥಳಗಳ ಕೊರತೆಯಿದೆ. ಈ ಅಭದ್ರತೆಯಿಂದಾಗಿ ಮಹಿಳೆಯರು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ. ಎನ್​ಎಫ್​ಎಚ್​ಎಸ್-6 ಅಂಕಿಅಂಶಗಳ ಪ್ರಕಾರ, ನಗರಗಳಲ್ಲಿ 42.8% ಮಹಿಳೆಯರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ 25.5% ಆಗಿದೆ.

ಗಂಭೀರ ಪರಿಸ್ಥಿತಿ

  • ವರ್ಲ್ಡ್ ಒಬೆಸಿಟಿ ಫೆಡರೇಶನ್ ವರದಿಯ ಪ್ರಕಾರ, 2020ರಲ್ಲಿ ವಿಶ್ವದ 38% ಜನಸಂಖ್ಯೆಯು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿತ್ತು, ಇದು 2035ರ ವೇಳೆಗೆ 51% (4 ಶತಕೋಟಿ ಜನರು) ತಲುಪುವ ಅಂದಾಜಿದೆ. 25ಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿರುವ ವ್ಯಕ್ತಿಯನ್ನು ‘ಅಧಿಕ ತೂಕ’ ಮತ್ತು 30ಕ್ಕಿಂತ ಹೆಚ್ಚಿನ ಬಿಎಂಐ ಹೊಂದಿರುವ ವ್ಯಕ್ತಿಯನ್ನು ‘ಬೊಜ್ಜು ಹೊಂದಿದವರು’ (ಸ್ಥೂಲಕಾಯರು) ಎಂದು ಪರಿಗಣಿಸಲಾಗಿದೆ.

  • ಈ ವರದಿಯಲ್ಲಿ ಬೊಜ್ಜಿಗೆ ಸಂಬಂಧಿಸಿದ 28 ಕಾಯಿಲೆಗಳ ಚಿಕಿತ್ಸಾ ವೆಚ್ಚ, ಉತ್ಪಾದಕತೆಯ ನಷ್ಟ ಮತ್ತು ಮರಣದ ಪರಿಣಾಮಗಳನ್ನು ಒಟ್ಟುಗೂಡಿಸಲಾಗಿದೆ. 2020ರಲ್ಲಿ ಒಟ್ಟು ಜಾಗತಿಕ ವೆಚ್ಚವು 1.96 ಟ್ರಿಲಿಯನ್ ಡಾಲರ್ ಆಗಿತ್ತು, ಇದು 2030ರ ವೇಳೆಗೆ 3 ಟ್ರಿಲಿಯನ್ ಡಾಲರ್ ಮತ್ತು 2060ರ ವೇಳೆಗೆ 18 ಟ್ರಿಲಿಯನ್ ಡಾಲರ್​ಗೆ ಏರಿಕೆಯಾಗಲಿದೆ.

  • ಭಾರತದಲ್ಲಿ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಧಿಕ ತೂಕ ಅಥವಾ ಬೊಜ್ಜಿನ ಒಟ್ಟು ಅನುಪಾತ 30.7% ಮತ್ತು ಪುರುಷರಲ್ಲಿ 27.3% ಆಗಿದೆ.

  • ಭಾರತದಲ್ಲಿ 2019ರಲ್ಲಿ ಅಧಿಕ ತೂಕ ಮತ್ತು ಬೊಜ್ಜಿನ ಒಟ್ಟು ಆರ್ಥಿಕ ಹೊರೆ (ವೆಚ್ಚ) 28.95 ಬಿಲಿಯನ್ ಡಾಲರ್ ಆಗಿತ್ತು. ಪ್ರಸ್ತುತ ಪ್ರವೃತ್ತಿಗಳನ್ನು ಆಧರಿಸಿದ ಮಾದರಿಯ ಪ್ರಕಾರ, ಈ ಆರ್ಥಿಕ ಹೊರೆಯು 2030ರ ವೇಳೆಗೆ 81.5 ಬಿಲಿಯನ್ ಡಾಲರ್ ಮತ್ತು 2060ರ ವೇಳೆಗೆ 839 ಬಿಲಿಯನ್ ಡಾಲರ್​ಗೆ ತಲುಪಬಹುದು.

ಬೊಜ್ಜು ತಡೆಗಟ್ಟುವುದು ಎಂದರೆ ಭವಿಷ್ಯದ ಹೂಡಿಕೆ!

ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಆರ್ಥಿಕ ಬೆಳವಣಿಗೆಯ ಜೊತೆಗೆ ಆರೋಗ್ಯವಂತ ಮತ್ತು ಉತ್ಪಾದಕ ಜನಸಂಖ್ಯೆಯೂ ಅತ್ಯಗತ್ಯ. ಆದರೆ ಬೊಜ್ಜು (ಸ್ಥೂಲಕಾಯ) ಇದಕ್ಕೆ ದೊಡ್ಡ ಅಡ್ಡಿಯಾಗಬಹುದು. ಆದ್ದರಿಂದ ಸರ್ಕಾರಗಳು ಇದರ ನಿಯಂತ್ರಣಕ್ಕಾಗಿ ಮಾಡುವ ವೆಚ್ಚವನ್ನು ಕೇವಲ ಖರ್ಚು ಎಂದು ಭಾವಿಸದೆ ಭವಿಷ್ಯದ ಹೂಡಿಕೆ ಎಂದು ಪರಿಗಣಿಸಬೇಕು. ವರ್ಲ್ಡ್ ಒಬೆಸಿಟಿ ಫೆಡರೇಶನ್​ನ ಸಿಇಒ ಜೋಹಾನಾ ರಾಲ್ಸ ್ಟ್ ಹೇಳುವಂತೆ, ಬೊಜ್ಜು ನಿಯಂತ್ರಣದ ಕಾರ್ಯತಂತ್ರಗಳಿಗೆ ವಿನಿಯೋಗಿಸುವ ಮೊತ್ತವು ವೆಚ್ಚವಲ್ಲ, ಬದಲಿಗೆ ಅದೊಂದು ಹೂಡಿಕೆ. ಇಂದು ರೋಗ ತಡೆಗಟ್ಟುವಿಕೆಯ ಮೇಲೆ ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಕಾಯಿಲೆಗಳ ಹೊರೆಯನ್ನು ಕಡಿಮೆ ಮಾಡಲು ಮತ್ತು ದೇಶದ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳಿಂದ ಈ 3 ಪ್ರಮುಖ ಕ್ರಮಗಳು ಅಗತ್ಯ.

1. ಆಟದ ಮೈದಾನಗಳು: ಬೊಜ್ಜು ತಡೆಗಟ್ಟಲು ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನದ ಭಾಗವಾಗಿಸುವುದು ಅತ್ಯಗತ್ಯ. ಇದಕ್ಕಾಗಿ ಮಹಿಳೆಯರಿಗೆ ಸುರಕ್ಷಿತ ಪಾದಚಾರಿ ಮಾರ್ಗಗಳು, ಸೂಕ್ತ ಬೆಳಕಿನ ವ್ಯವಸ್ಥೆಯುಳ್ಳ ಸಾರ್ವಜನಿಕ ಸ್ಥಳಗಳು, ಸೈಕಲ್ ಟ್ರಾ್ಯಕ್​ಗಳು, ಸಾರ್ವಜನಿಕ ಉದ್ಯಾನಗಳು ಮತ್ತು ಮಕ್ಕಳಿಗಾಗಿ ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.

2. ಅನಾರೋಗ್ಯಕರ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣ: ಹೆಚ್ಚು ಸಕ್ಕರೆ, ಉಪ್ಪು ಮತ್ತು ಕೊಬ್ಬು (ಫ್ಯಾಟ್) ಹೊಂದಿರುವ ಆಹಾರ ಪದಾರ್ಥಗಳ ಸುಲಭ ಲಭ್ಯತೆ ಹಾಗೂ ಆಕ್ರಮಣಕಾರಿ ಜಾಹೀರಾತುಗಳು ಜನರ ಆಹಾರ ಪದ್ಧತಿಯ ಮೇಲೆ ಪ್ರಭಾವ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಪ್ಯಾಕೆಟ್​ಗಳ ಮೇಲೆ ಎಚ್ಚರಿಕೆಯ ಸಂದೇಶಗಳು, ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರಸಾರವಾಗುವ ಅನಾರೋಗ್ಯಕರ ಆಹಾರ ಜಾಹೀರಾತುಗಳ ಮೇಲೆ ನಿಯಂತ್ರಣ ಮತ್ತು ಶಾಲೆಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಾದ ಜಾರಿ ಅತ್ಯಗತ್ಯ.

3. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸುವುದು: ಭಾರತದಲ್ಲಿ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸವಾಲುಗಳು ಎಲ್ಲ ರಾಜ್ಯಗಳಲ್ಲಿ ಒಂದೇ ರೀತಿಯಾಗಿಲ್ಲ. ಉದಾಹರಣೆಗೆ, ಎನ್​ಎಫ್​ಎಚ್​ಎಸ್-6 ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ 15-49 ವಯೋಮಾನದ 22.2% ಮಹಿಳೆಯರು ಮತ್ತು 17.6% ಪುರುಷರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದೇ ಸಮಯದಲ್ಲಿ 26.5% ಮಹಿಳೆಯರು ಮತ್ತು 28.3% ಪುರುಷರು ಸಾಮಾನ್ಯಕ್ಕಿಂತ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿದ್ದಾರೆ. ಅಂದರೆ ಇದು ಎರಡೂ ಬದಿಯ (ದ್ವಿಮುಖ) ಸಮಸ್ಯೆಯಾಗಿದೆ. ಆದ್ದರಿಂದ, ಇಡೀ ದೇಶಕ್ಕೆ ಒಂದೇ ರೀತಿಯ ಕಾರ್ಯತಂತ್ರ ರೂಪಿಸುವ ಬದಲು ರಾಜ್ಯವಾರು ನಿರ್ದಿಷ್ಟ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net