21ನೇ ಶತಮಾನದಲ್ಲಿ ಭಾರತ ಅತಿದೊಡ್ಡ ನಿರ್ಣಯ; ನಾರಿ ಶಕ್ತಿ ಸಮ್ಮೇಳನದಲ್ಲಿ ಮಹಿಳಾ ಮೀಸಲಾತಿಗೆ ಮೋದಿ ಬಹುಪಾರಾಕ್ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ದೇಶದ ಅಭಿವೃದ್ಧಿಯ ಪಯಣದಲ್ಲಿ ಭಾರತವು 21ನೇ ಶತಮಾನದಲ್ಲಿ ಅತಿದೊಡ್ಡ ನಿರ್ಣಯವನ್ನು ತೆಗೆದುಕೊಂಡು ಇತಿಹಾಸ ನಿರ್ಮಿಸಲಿದ್ದು, ಅದು ಮಹಿಳಾ ಶಕ್ತಿಗೆ ಸಮರ್ಪಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ನಾರಿಶಕ್ತಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ. ಅಲ್ಲಿ ಸಾಮಾಜಿಕ ನ್ಯಾಯ ಕೇವಲ ಭಾಷಣವಲ್ಲ, ಭವಿಷ್ಯದ ನಿರ್ಣಯಗಳನ್ನು ಪೂರೈಸುವ ಸಮಾನತೆಯ ಭಾರತಕ್ಕಾಗಿ ಮಾಡುವ ನಿರ್ಣಯ. ರಾಜ್ಯ ಸಭೆಗಳಿಂದ ದೇಶದ ಸಂಸತ್ತಿನವರೆಗೆ ದಶಕಗಳ ಕಾಯುವಿಕೆಯನ್ನು ಕೊನೆಗೊಳಿಸುವ ಸಮಯ ಬಂದಿದೆ. ಅದುವೇ ಏ. 16, 17 ಹಾಗೂ 18 ಎಂದು ಹೇಳಿದ್ದಾರೆ.
2023 ರಲ್ಲಿ ಸಂಸತ್ತಿನ ಹೊಸ ಕಟ್ಟಡದಲ್ಲಿ ನಾವು ಮಹಿಳಾ ಸಬಲೀಕರಣ ಕಾಯ್ದೆಯನ್ನು ಪರಿಚಯಿಸಿದ್ದೇವು. ಅದನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಲು, ಏ. 16ರಿಂದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ನಿಮಗೆ ಉಪದೇಶ ನೀಡಲು ನಾನು ಬಂದಿಲ್ಲ, ಅಥವಾ ಜಾಗೃತಗೊಳಿಸಲು ಬಂದಿಲ್ಲ. ದೇಶದ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವನ್ನು ಪಡೆಯಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತದ ಎಲ್ಲಾ ಮಹಿಳೆಯರನ್ನು ಹೊಸ ಯುಗದ ಆಗಮನಕ್ಕಾಗಿ ಅಭಿನಂದಿಸುತ್ತೇನೆ. ದಶಕಗಳಿಂದ ಪ್ರಜಾಪ್ರಭುತ್ವ ರಚನೆಯಲ್ಲಿ ಮಹಿಳಾ ಮೀಸಲಾತಿಯ ಅಗತ್ಯವನ್ನು ಎಲ್ಲರೂ ಎತ್ತಿದ್ದಾರೆ. ಚರ್ಚೆಗಳು ನಡೆದಿವೆ. ಚರ್ಚೆ ನಡೆದು ಸುಮಾರು 4 ದಶಕ ಕಳೆದಿದೆ. ತಿಯೊಂದು ಪಕ್ಷವು ಈ ಕಲ್ಪನೆಯನ್ನು ತನ್ನದೇ ಆದ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ದಿವೆ. 2023ರಲ್ಲಿ ನಾರಿ ಶಕ್ತಿ ವಂದನ ಕಾಯ್ದೆ ಪರಿಚಯಿಸಿದಾಗ ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಸ್ವಾಗತಿಸಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2029ರೊಳಗೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಬೇಕೆಂಬ ಬೇಡಿಕೆಯಿತ್ತು. ಅದನ್ನೇ ಗಮನದಲ್ಲಿಟ್ಟುಕೊಂಡು ಏಪ್ರಿಲ್ 16ರಿಂದ ಸಂಸತ್ತಿನಲ್ಲಿ ಕಾಯ್ದೆ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ. ಈ ಬಾರಿಯೂ ಪರಸ್ಪರ ಸಹಕಾರ ಮತ್ತು ಭಾಗವಹಿಸುವಿಕೆಯಿಂದ ಕಾಯ್ದೆಗೆ ತಿದ್ದುಪಡಿ ನಡೆಯಬೇಕೆಂಬುದು ನಮ್ಮ ಬಯಕೆ. ಇದರಿಂದ ಇಡೀ ಸದನದ ಘನತೆ ಹೊಸ ಎತ್ತರವನ್ನು ತಲುಪುತ್ತದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಮಹಿಳೆಯರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಯನ್ನು ತಲುಪುವುದು ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತದೆ. ಸ್ವಾತಂತ್ರ್ಯ ಹೋರಾಟದಿಂದ ಸಂವಿಧಾನ ಸಭೆಯ ನಿರ್ಧಾರಗಳವರೆಗೆ ಭಾರತೀಯ ಮಹಿಳೆಯರು ಸ್ವತಂತ್ರ ಭಾರತದ ಅಡಿಪಾಯವನ್ನು ಹಾಕಲು ಅಪಾರ ಕೊಡುಗೆಗಳನ್ನು ನೀಡಿದ್ದಾರೆ
ನಮ್ಮ ದೇಶದಲ್ಲಿ ರಾಷ್ಟ್ರಪತಿಯಿಂದ ಪ್ರಧಾನ ಮಂತ್ರಿಯವರೆಗೆ ಮಹಿಳೆಯರು ಎಲ್ಲೆಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದಾರೋ ಅಲ್ಲೆಲ್ಲಾ ಅವರು ತಮ್ಮದೇ ಆದ ವಿಶಿಷ್ಟ ಪರಂಪರೆಯನ್ನು ಸೃಷ್ಟಿಸಿದ್ದಾರೆ. ಇಂದಿಗೂ ಮಹಿಳೆಯರು ರಾಷ್ಟ್ರಪತಿಯಿಂದ ಹಣಕಾಸು ಸಚಿವರವರೆಗೆ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ದೇಶದ ಘನತೆ ಮತ್ತು ಹೆಮ್ಮೆ ಎರಡನ್ನೂ ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net