ಅತೀ ಭಾರದ ಬ್ಲೂಬರ್ಡ್ ಬ್ಲಾಕ್ 2 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ಬಾಹುಬಲಿ ರಾಕೆಟ್​ ಯಶಸ್ವಿ! Bahubali Rocket

ಬಾಹುಬಲಿ ರಾಕೆಟ್​
ಬಾಹುಬಲಿ ರಾಕೆಟ್​
Published on

ಪ್ರಮುಖ ಮುಖ್ಯಾಂಶಗಳು

  • ಬ್ಲೂಬರ್ಡ್ ಬ್ಲಾಕ್ 2 ಸಂವಹನ ಉಪಗ್ರಹ ಹೊತ್ತ ಬಾಹುಬಾಲಿ ರಾಕೆಟ್​ ಉಡಾವಣೆ ಯಶಸ್ವಿ
  • ಬೆಳಗ್ಗೆ 8.54ಕ್ಕೆ ಶ್ರೀಹರಿಕೋಟಾ ಎರಡನೇ ಲಾಂಚ್ ಪ್ಯಾಡ್‌ನಿಂದ ಉಡಾವಣೆ
  • 520 ಕಿ.ಮೀ ಎತ್ತರದಲ್ಲಿ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದ ಬ್ಲೂಬರ್ಡ್ ಬ್ಲಾಕ್ 2 ಉಪಗ್ರಹ
ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಅಮೆರಿಕದ ಹೊಸ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್ 2 ಸಂವಹನ ಉಪಗ್ರಹವನ್ನು ಭೂಕಕ್ಷೆಯಲ್ಲಿ ಇರಿಸಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬಾಹುಬಲಿ ರಾಕೆಟ್​ ಎಲ್‌ವಿಎಂ3ಎಂ6 ( Bahubali Rocket ) ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
ಬ್ಲೂಬರ್ಡ್ ಬ್ಲಾಕ್2 ಬಾಹ್ಯಾಕಾಶ ನೌಕೆಯನ್ನು ಹೆವಿ ಲಿಫ್ಟ್ ಲಾಂಚ್ ವೆಹಿಕಲ್ ಎಲ್ ವಿಎಂ3ಎಂ6 ಬುಧವಾರ ಬೆಳಗ್ಗೆ 8.54ಕ್ಕೆ ಶ್ರೀಹರಿಕೋಟಾ ಎರಡನೇ ಲಾಂಚ್ ಪ್ಯಾಡ್‌ನಿಂದ ಉಡಾವಣೆ ಮಾಡಲಾಯಿತು. ಸುಮಾರು 24 ಗಂಟೆಗಳ ಕೌಂಟ್‌ಡೌನ್ ಮುಕ್ತಾಯಗೊಳ್ಳುತ್ತಿದ್ದಂತೆ, ಎರಡು S200 ಸಾಲಿಡ್​ ಬೂಸ್ಟರ್‌ಗಳಿಂದ ಬೆಂಬಲಿತವಾದ 43.5 ಮೀಟರ್ ಎತ್ತರದ ಬಾಹುಬಲಿ ರಾಕೆಟ್​ ನಭಕ್ಕೆ ಜಿಗಿಯಿತು. ಬ್ಲೂಬರ್ಡ್ ಬ್ಲಾಕ್2 ನೌಕೆಯು ಮುಂದಿನ ಪೀಳೆಗೆಯ ಕಮ್ಯೂನಿಕೇಷನ್​ ಸ್ಯಾಟಲೈಟ್​ ಆಗಿದೆ.
ರಾಕೆಟ್​ ಉಡಾವಣೆಯಾದ ಸುಮಾರು 15 ನಿಮಿಷಗಳ ಹಾರಾಟದ ನಂತರ, ಬ್ಲೂಬರ್ಡ್ ಬ್ಲಾಕ್ -2 ಬಾಹ್ಯಾಕಾಶ ನೌಕೆಯು ರಾಕೆಟ್​ನಿಂದ ಬೇರ್ಪಟ್ಟು ಸುಮಾರು 520 ಕಿ.ಮೀ ಎತ್ತರದಲ್ಲಿ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
ಈ ಬಗ್ಗೆ ಮಾತನಾಡಿರುವ ಇಸ್ರೋ ಚೇರ್ಮನ್​ ಡಾ. ವಿ. ನಾರಾಯಣನ್​, LVM3-M6 ಯಶಸ್ವಿಯಾಗಿ ಮತ್ತು ನಿಖರವಾಗಿ" ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಭಾರತೀಯ ಉಡಾವಣಾ ವಾಹನವನ್ನು ಬಳಸಿಕೊಂಡು ಭಾರತದ ನೆಲದಿಂದ ನಭಕ್ಕೆ ಸಾಗಿಸಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ. ಇದು LVM-3 ರ ಮೂರನೇ ಸಂಪೂರ್ಣ ವಾಣಿಜ್ಯ ಕಾರ್ಯಾಚರಣೆಯಾಗಿದ್ದು, ಈ ವಾಹನವು ತನ್ನ ಅತ್ಯುತ್ತಮ ದಾಖಲೆಯನ್ನು ಪ್ರದರ್ಶಿಸಿದೆ ಎಂದು ನಾರಾಯಣನ್ ಹೇಳಿದರು. ಜಾಗತಿಕ ರಂಗದಲ್ಲಿ ಯಾವುದೇ ಉಡಾವಣಾ ವಾಹನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಬಾಹುಬಲಿ ರಾಕೆಟ್​ ಕೂಡ ಒಂದಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಉಡಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆ ಎಂದಿದ್ದಾರೆ. ಭಾರತೀಯ ಮಣ್ಣಿನಿಂದ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಉಪಗ್ರಹವಾದ ಅಮೆರಿಕದ ಬ್ಲೂಬರ್ಡ್ ಬ್ಲಾಕ್ -2 ಅನ್ನು ಅದರ ಉದ್ದೇಶಿತ ಕಕ್ಷೆಗೆ ಸೇರಿಸುವ LVM3-M6 ಉಡಾವಣೆಯ ಯಶಸ್ವಿಯು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಹೆಮ್ಮೆಯ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ಭಾರತದ ಅತಿ ಭಾರದ ಉಡಾವಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ನಮ್ಮ ಪಾತ್ರವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಂದಹಾಗೆ, ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್‌ಇಒ) ಇರಿಸಲಾಗುವ 6,100 ಕೆಜಿ ಭಾರದ ಈ ಸಂವಹನ ಉಪಗ್ರಹವು ಎಲ್‌ವಿಎಂ3 ಲಾಂಚ್ ಇತಿಹಾಸದಲ್ಲೇ ಅತ್ಯಂತ ಭಾರದ ಪೇಲೋಡ್ ಆಗಿದೆ. ಎಲ್‌ವಿಎಂಐಎಂ5 ಸಂವಹನ ಉಪಗ್ರಹ ಆಗಿತ್ತು. 4,400 ಕೆಜಿ ಭಾರದ ಆ ಉಪಗ್ರಹವನ್ನು ನ.2ರಂದು ಯಶಸ್ವಿಯಾಗಿ ಹಾರಿಸಲಾಗಿತ್ತು ಎಂದು ಇಸ್ರೋ ನೆನಪಿಸಿದೆ. ಇಸ್ರೋದ ವಾಣಿಜ್ಯಕ ಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ (ಎನ್‌ಎಸ್‌ ಐಎಲ್) ಮತ್ತು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ಸಂಸ್ಥೆ ನಡುವಿನ ಒಪ್ಪಂದದ ಮೇರೆಗೆ ಮಿಷನ್ ಉಡಾವಣೆ ಮಾಡಲಾಗಿದೆ. ಉಡಾವಣೆಗೆ ಪೂರ್ವಭಾವಿಯಾಗಿ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ಸೋಮವಾರ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net