ಯುದ್ಧದ ಭೀತಿ ಮೆಟ್ಟಿನಿಂತ ಭಾರತ: ಹಾರ್ಮುಜ್ ಜಲಸಂಧಿ ದಾಟಿದ ಎರಡು ಎಲ್‌ಪಿಜಿ ನೌಕೆಗಳು! LPG Supply India

LPG Supply India (ಚಿತ್ರ X)
LPG Supply India (ಚಿತ್ರ X)
Published on
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಾರ್ಮುಜ್​ ಜಲಸಂಧಿಯಲ್ಲಿನ ಸಂಘರ್ಷದ ನಡುವೆಯೂ(LPG Supply India) ಭಾರತೀಯ ಧ್ವಜ ಹೊತ್ತ ಎರಡು ಬೃಹತ್​ ಎಲ್​ಪಿಜಿ ವಾಹನ ನೌಕೆಗಳು ಅಪಾಯಕಾರಿ ಜಲಮಾರ್ಗವನ್ನು ದಾಟಿದ್ದು, ಸಧ್ಯ ದೇಶದ ಅಡುಗೆಮನೆಗಳಿಗೆ ತಟ್ಟಿದ್ದ ಅನಿಲದ ಅಭಾವದ ಆತಂಕ ದೂರವಾಗಲಿದೆ.
ಮೂಲಗಳ ಪ್ರಕಾರ, ಬಿಡಬ್ಲ್ಯೂ ಟಿವೈಆರ್ ಮತ್ತು ಬಿಡಬ್ಲ್ಯೂ ಇಎಲ್ಎಂ ಎಂಬ ಎರಡು ಪ್ರಮುಖ ಹಡಗುಗಳು ಸುಮಾರು 94,000 ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತು ಭಾರತದತ್ತ ಸಾಗುತ್ತಿವೆ. ಬಿಡಬ್ಲ್ಯೂ ಟಿವೈಆರ್ ಮುಂಬೈ ಕಡೆಗೆ ಸಾಗುತ್ತಿದ್ದು ಮಾರ್ಚ್​ 31 ರೊಳಗೆ ಡಾಕ್​ ಆಗುವ ನಿರೀಕ್ಷೆ ಇದೆ. ಆದರೆ, ಬಿಡಬ್ಲ್ಯೂ ಇಎಲ್ಎಂ ಏಪ್ರಿಲ್ 1 ರ ವೇಳೆಗೆ ನವಮಂಗಳೂರು ತಲುಪಲಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಒಳಗೊಂಡ ಇತ್ತೀಚಿನ ಮಿಲಿಟರಿ ಸಂಘರ್ಷವು ಈಗ ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾದ ಹಾರ್ಮುಜ್ ಜಲಸಂಧಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಗ್ಯೂ, ಉದ್ವಿಗ್ನತೆ ನಡುವೆ ಇರಾನ್​ ಎಚ್ಚರಿಕೆ ನೀಡಿದ್ದು, ತನಗೆ ಪ್ರತಿಕೂಲವಲ್ಲದ ಎಂದು ಪರಿಗಣಿಸುವ ಹಡಗುಗಳು ಸೂಕ್ತ ಅನುಮತಿಯನ್ನು ಪಡೆದು ಜಲಸಂಧಿಯ ಮೂಲಕ ಹಾದು ಹೋಗಬಹುದು ಎಂದು ತಿಳಿಸಿದೆ.
ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಹಲವಾರು ಭಾರತೀಯ ಹಡಗುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಇದಕ್ಕೂ ಮೊದಲು, ಎರಡು ಎಲ್‌ಪಿಜಿ ವಾಹಕಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಇದೇ ಮಾರ್ಚ್ 26 ಮತ್ತು 28 ರ ನಡುವೆ 92,000 ಟನ್‌ಗಳಿಗೂ ಹೆಚ್ಚು ಇಂಧನವನ್ನು ಭಾರತೀಯ ಬಂದರುಗಳಿಗೆ ತಲುಪಿಸಿವೆ. ಇದಕ್ಕೂ ಮುನ್ನ ಎಂಟಿ ಶಿವಾಲಿಕ್ ಮತ್ತು ಎಂಟಿ ನಂದಾ ದೇವಿ ಮಾರ್ಚ್ ಮಧ್ಯದಲ್ಲಿ ಗುಜರಾತ್‌ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳಿಗೆ ಈ ರೀತಿಯಾಗಿ ಪ್ರಯಾಣ ಬೆಳೆಸಿದ್ದರು.
ಭಾರತವು ತನ್ನ ಅಡುಗೆ ಅನಿಲ ಬೇಡಿಕೆಯನ್ನು ಪೂರೈಸಲು ಸಲುವಾಗಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಶೇ. 60ರಷ್ಟು ಅನಿಲಗಳನ್ನು ವಿದೇಶಗಳಿಂದ ಪಡೆಯುತ್ತದೆ. ಇದರಲ್ಲಿ ಸುಮಾರು ಶೇ. 90 ರಷ್ಟು ಪಶ್ಚಿಮ ಏಷ್ಯಾದ ದೇಶಗಳಿಂದ ಬರುತ್ತದೆ.
ದೇಶೀಯ ಬಳಕೆ ವಾರ್ಷಿಕವಾಗಿ 33 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ತಲುಪುತ್ತಿರುವುದರಿಂದ, ನಿರಂತರ ಪೂರೈಕೆ ಅವಶ್ಯಕವಾಗಿದೆ. ಆದರಿಂದ ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಅರ್ಜೆಂಟೀನಾದಂತಹ ದೇಶಗಳಿಂದ LPG ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ.

ಪರ್ಷಿಯನ್ ಕೊಲ್ಲಿಯಲ್ಲಿ 18 ಭಾರತೀಯ ನೌಕೆಗಳು!

ಸರ್ಕಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪಶ್ಚಿಮ ಪರ್ಷಿಯನ್ ಕೊಲ್ಲಿಯ ಆಯಕಟ್ಟಿನ ಪ್ರದೇಶದಲ್ಲಿ ಇನ್ನೂ 18 ಭಾರತೀಯ ಧ್ವಜ ಹೊತ್ತ ಹಡಗುಗಳು ಬೀಡುಬಿಟ್ಟಿವೆ. ಈ ಹಡಗುಗಳಲ್ಲಿ ಒಟ್ಟು 485 ಭಾರತೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 8 ಹಡಗುಗಳು ಆ ಪ್ರದೇಶದಿಂದ ಸುರಕ್ಷಿತವಾಗಿ ಟಾಂಜಾನಿಯಾಕ್ಕೆ ತೆರಳಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಹಡಗುಗಳ ಸಾಗಣೆಯು ಯಶಸ್ವಿಯಾಗಿ ಪೂರ್ಣಗೊಂಡಿವೆ. ತೈಲ ಟ್ಯಾಂಕರ್ ಜಗ್ ಲಾಡ್ಕಿ ಮಾರ್ಚ್ 18 ರಂದು ಯುಎಇಯಿಂದ ಮುಂದ್ರಾಗೆ 80,000 ಟನ್‌ಗಳಿಗೂ ಹೆಚ್ಚು ಕಚ್ಚಾ ವಸ್ತುವನ್ನು ತಲುಪಿಸಿದೆ.
ಎಲ್‌ಪಿಜಿ ವಾಹಕಗಳಾದ ಜಗ್ ವಿಕ್ರಮ್, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ ಸೇರಿದಂತೆ ಕೆಲವು ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿ ಉಳಿದಿವೆ. ಏತನ್ಮಧ್ಯೆ, ಒಂದು ಖಾಲಿ ಟ್ಯಾಂಕರ್‌ನಲ್ಲಿ ಎಲ್‌ಪಿಜಿ ತುಂಬಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net