ತತ್ಕಾಲ್ ಟಿಕೆಟ್ ಸಿಗದೆ ಪರದಾಡುತ್ತಿದ್ದವರಿಗೆ ಗುಡ್​ ನ್ಯೂಸ್​ : ರೈಲ್ವೇಯಿಂದ ಸೂಪರ್ ಫಾಸ್ಟ್ ತಂತ್ರಜ್ಞಾನ!..ಏನಿದು ಪಿಆರ್​ಎಸ್​..? Tatkal Booking

 Tatkal Booking ಸಾಂದರ್ಭಿಕ ಚಿತ್ರ
Tatkal Booking ಸಾಂದರ್ಭಿಕ ಚಿತ್ರ
Published on

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಮತ್ತಷ್ಟು ಸುಲಭ ಹಾಗೂ ವೇಗದ ಸೇವೆ ಒದಗಿಸುವ ನಿಟ್ಟಿನಲ್ಲಿ ತನ್ನ ಅತ್ಯಂತ ಪ್ರಮುಖ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು (PRS - Passenger Reservation System) ಹಂತ ಹಂತವಾಗಿ ಹೊಸ ತಂತ್ರಜ್ಞಾನಕ್ಕೆ ಮೇಲ್ದರ್ಜೆಗೇರಿಸಲು ಚಾಲನೆ ನೀಡಿದೆ. 2010ರಿಂದ ಚಾಲ್ತಿಯಲ್ಲಿದ್ದ ಹಳೆಯ ತಂತ್ರಜ್ಞಾನದ ಜಾಕ್ಕೆ ಹೊಸ ಕ್ಲೌಡ್ ಆಧಾರಿತ ವ್ಯವಸ್ಥೆಯನ್ನು ತರಲಾಗುತ್ತಿದ್ದು, ಇದು ಮುಖ್ಯವಾಗಿ ತತ್ಕಾಲ್​ ಟಿಕೆಟ್​

(Tatkal Booking)

ಬುಕಿಂಗ್​ ವೇಳೆಯ ಸರ್ವರ್​ ಸಮಸ್ಯೆಗಳಿಗೆ ಮುಕ್ತಿ ನೀಡಲಿದೆ.

ಪಿಆರ್‌ಎಸ್ (PRS) ಎಂದರೆ ಏನು?

ಭಾರತದಲ್ಲಿ ಕಾಯ್ದಿರಿಸಿದ (Reserved) ಪ್ರತಿಯೊಂದು ರೈಲು ಟಿಕೆಟ್ ನಿರ್ವಹಣೆಯ ಹಿಂದಿರುವುದು ಈ 'ಪಿಆರ್‌ಎಸ್' ತಂತ್ರಜ್ಞಾನ. ಇದು ಸೀಟುಗಳ ಹಂಚಿಕೆ, ಕಾಯುವಿಕೆಯ ಪಟ್ಟಿ, ಆರ್​ಎಸಿ (RAC), ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸುವುದು, ಟಿಕೆಟ್ ರದ್ದತಿ ಹಾಗೂ ಮಾರ್ಪಾಡುಗಳನ್ನು ಈ ವ್ಯವಸ್ಥೆಯೇ ನಿರ್ವಹಿಸುತ್ತದೆ. ಜೊತೆಗೆ ರೈಲ್ವೇ ಮಾಹಿತಿ ವ್ಯವಸ್ಥೆಗಳ ಕೇಂದ್ರವು ಇದನ್ನು ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದೆ.
1986ರಲ್ಲಿ ಹಸ್ತಚಾಲಿತ ವ್ಯವಸ್ಥೆಗೆ ಪರ್ಯಾಯವಾಗಿ ಜಾರಿಗೆ ಬಂದ ಈ ತಂತ್ರಜ್ಞಾನವು, 2002ರಲ್ಲಿ ಆನ್​ಲೈನ್​ ಬುಕ್ಕಿಂಗ್​ಗೆ ದಾರಿ ಮಾಡಿಕೊಟ್ಟಿತು. ನಂತರ 2014 ರಲ್ಲಿ ನೆಕ್ಟ್​ ಜನರೇಷನ್​ ಇ ಟಿಕೆಟಿಂಗ್ ವ್ಯವಸ್ಥೆಯಾಗಿ ನವೀಕರಣಗೊಂಡಿತ್ತು. ಇದೀಗ ಹೊಸ ತಲೆಮಾರಿನ ವ್ಯವಸ್ಥೆಗೆ ಪಾದಾರ್ಪಣೆ ಮಾಡುತ್ತಿದೆ.

ಹೊಸ ತಂತ್ರಜ್ಞಾನದ ಪ್ರಮುಖ ಸೌಲಭ್ಯಗಳು

ಅದ್ಭುತ ವೇಗ: ಪ್ರಸ್ತುತ ಲಭ್ಯ ಇರುವ ಪಿಆರ್​ಎಸ್​ ವ್ಯವಸ್ಥೆಯು ನಿಮಿಷಕ್ಕೆ 32,000 ಟಿಕೆಟ್​ಗಳನ್ನು ಕಾಯ್ದಿರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ತಂತ್ರಜ್ಞಾನವು ನಿಮಿಷಕ್ಕೆ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕಿಂಗ್ ಹಾಗೂ 40 ಲಕ್ಷಕ್ಕೂ ಹೆಚ್ಚು ಮಾಹಿತಿಯ ಹುಡುಕಾಟಗಳನ್ನು ತಡೆದುಕೊಳ್ಳುವಷ್ಟು ಶಕ್ತಿಶಾಲಿಯಾಗಿದೆ.
ಸುಲಭ ಬಳಕೆದಾರ ಶೈಲಿ: ನೂತನ ಐಆರ್‌ಸಿಟಿಸಿ (IRCTC) ಬೀಟಾ ವೆಬ್‌ಸೈಟ್ ಈಗ ಲಭ್ಯವಿದ್ದು, ಕಡಿಮೆ ಸಮಯ ಹಾಗೂ ಕಡಿಮೆ ಹಂತಗಳಲ್ಲಿ ಶೀಘ್ರವಾಗಿ ಸೀಟು ಕಾಯ್ದಿರಿಸಲು ಮತ್ತು ಬಹುಭಾಷೆಗಳಲ್ಲಿ ಮಾಹಿತಿ ಪಡೆಯಲು ಅನುಕೂಲ ಕಲ್ಪಿಸಿದೆ.

ಈಗಾಗಲೇ ಜಾರಿಗೆ ಬಂದಿರುವ ಪ್ರಮುಖ ಬದಲಾವಣೆಗಳು

ವ್ಯವಸ್ಥೆಯ ಸಂಪೂರ್ಣ ಬದಲಾವಣೆಗೆ ಮುನ್ನವೇ ರೈಲ್ವೇ ಇಲಾಖೆ ಹಲವು ಪ್ರಮುಖ ಸುಧಾರಣೆಗಳನ್ನು ತಂದಿದೆ.
ಮುಂಗಡ ಬುಕಿಂಗ್ ಅವಧಿ ಕಡಿತ: ಟಿಕೆಟ್ ಮುಂಗಡ ಬುಕಿಂಗ್ ಅವಧಿಯನ್ನು (Advance Reservation Period) 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ.
ಆಧಾರ್ ಹಾಗೂ ಒಟಿಪಿ ದೃಢೀಕರಣ: ತತ್ಕಾಲ್ ಬುಕಿಂಗ್‌ನಲ್ಲಿ ಪಾರದರ್ಶಕತೆ ತರಲು ಮತ್ತು ನಕಲಿ ಏಜೆಂಟ್‌ಗಳು ಹಾಗೂ ಬೋಟ್‌ಗಳ (Bots) ಹಾವಳಿ ತಡೆಯಲು ಆಧಾರ್ ಆಧಾರಿತ ದೃಢೀಕರಣ ಹಾಗೂ ಒಟಿಪಿ (OTP) ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ.

ಬೃಹತ್ ಪ್ರಮಾಣದ ಜಾಲ

ವರದಿಗಳ ಪ್ರಕಾರ, ಜೂನ್ 2025ರಿಂದ ಜೂನ್ 2026ರ ನಡುವೆ ಸುಮಾರು 65.08 ಕೋಟಿ ರಿಸರ್ವ್ಡ್ ಟಿಕೆಟ್‌ಗಳು ಪಿಆರ್‌ಎಸ್ ಮೂಲಕ ಬುಕ್ ಆಗಿದ್ದು, ಇದರಲ್ಲಿ ಶೇ. 89ರಷ್ಟು ಆನ್‌ಲೈನ್‌ನಲ್ಲೇ ಕಾಯ್ದಿರಿಸಲಾಗಿದೆ. ಪ್ರತಿದಿನ ಸರಾಸರಿ 20.5 ಲಕ್ಷ ಪ್ರಯಾಣಿಕರು ಈ ವ್ಯವಸ್ಥೆಯನ್ನು ಬಳಸುತ್ತಿದ್ದು, ಶೇ. 73ರಷ್ಟು ವಹಿವಾಟು ನಗದು ರಹಿತವಾಗಿ ನಡೆಯುತ್ತಿದೆ.
ಹೊಸ ವ್ಯವಸ್ಥೆಯು ಒಮ್ಮೆಲೇ ಜಾರಿಗೆ ಬಾರದೆ, ಹಂತ ಹಂತವಾಗಿ ಪ್ರತಿಯೊಂದು ರೈಲಿಗೆ ಅನ್ವಯವಾಗಲಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ವೇಗದ ಮತ್ತು ತೊಂದರೆರಹಿತ ಟಿಕೆಟ್ ಬುಕಿಂಗ್ ಅನುಭವ ಸಿಗಲಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net